ಸಾರಾಂಶ
ಹಾವೇರಿ: ವಿರಕ್ತ ಪರಂಪರೆಗೆ ಮಾದರಿಯಾಗಿ ಬದುಕಿ, ಬಯಲಲ್ಲಿ ಹುಟ್ಟಿ ಬಯಲಾದವರು ಹುಕ್ಕೇರಿಮಠ ಲಿಂ. ಶಿವಲಿಂಗ ಸ್ವಾಮೀಜಿ ಎಂದು ರಟ್ಟಿಹಳ್ಳಿಯ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹುಕ್ಕೇರಿಮಠದ ಲಿಂ. ಶಿವಲಿಂಗ ಸ್ವಾಮಿಗಳ 108ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಂತ, ಮಹಾತ್ಮರು ಮಾಡುವ ಅನುಷ್ಠಾನದ ಬಲದಿಂದ ಗಳಿಸುವ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಬಳಸಿ, ಸಮಾಜದ ಉದ್ಧಾರವೇ ಮಹಾತ್ಮರ ಜೀವನದ ಪರಮ ಗುರಿ ಎಂದು ಭಾವಿಸಿದವರು ಅವರು ಎಂದರು.
ಜಗತ್ತಿನ ಎಲ್ಲ ಧರ್ಮಗಳು ಮತ್ತು ಧರ್ಮ ಗುರುಗಳು ಸತ್ಯ, ಅಹಿಂಸೆ ಪ್ರತಿಪಾದಿಸಿದರೆ, ಮಾನವೀಯತೆ ಮತ್ತು ಕಾಯಕ ಸಿದ್ಧಾಂತವನ್ನು ಪ್ರತಿಪಾದಿಸಿದ ಏಕೈಕ ಧರ್ಮಗುರು ಎಂದರೆ ಅವರು ಮಹಾನ್ ಮಾನವತಾವಾದಿ ಬಸವಣ್ಣನವರು. ಕಾಯಕವನ್ನು ಸಮಾಜೋಧಾರ್ಮಿಕ ಉನ್ನತಿಗೆ ಬಳಸಿದ ಶಿವಶರಣರ ಅನ್ನ, ಅರಿವು, ಆಶ್ರಯ ಪರಂಪರೆಯನ್ನು ಹುಕ್ಕೇರಿಮಠ ಮುಂದುವರಿಸುತ್ತಿದೆ ಎಂದರು.ಹನುಮಂತಗೌಡ ಗೊಲ್ಲರ ಮಾತನಾಡಿ, ಜಗತ್ತಿನಲ್ಲಿ ಎಲ್ಲ ಧರ್ಮಗಳು ನಿರ್ವಾಣವನ್ನೇ ಬೋಧಿಸಿವೆ. ಬುದ್ಧ, ಮಹಾವೀರ, ಪೈಗಂಬರ ಜೀವನ ಸಂದೇಶವು ಇದೇ ಆಗಿತ್ತು. ನುಡಿದಂತೆ ನಡೆದರು. ಬಸವಾದಿ ಶಿವಶರಣರು ಇದನ್ನೇ ಶೂನ್ಯ ಸಂಪಾದನೆ ಎಂದರು. ಸ್ವಾರ್ಥವಿಲ್ಲದ ಬದುಕು, ಸಮಾಜ ಸುಧಾರಣೆಯ ತುಡಿತ, ನೊಂದವರ ಕಣ್ಣೀರು ಒರೆಸುವುದೇ ನಿಜವಾದ ಮುಕ್ತಿಗೆ ಮಾರ್ಗ. ಶಿವಯೋಗ ಮತ್ತು ಶಿವಾನುಭವ ಮಹಾತ್ಮರ ಜೀವನ ದರ್ಶನವಾಗಿದೆ. ಹುಕ್ಕೇರಿಮಠದ ಲಿಂ. ಶಿವಲಿಂಗ ಶ್ರೀಗಳು ಅಂತಹ ಮಹಾತ್ಮರಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಹಾಗೂ ರೆಡ್‌ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ನೂರಾರು ಯುವ ಜನರು ರಕ್ತದಾನ ಮಾಡಿದರು.ಜಾತ್ರಾ ಸಮಿತಿ ಅಧ್ಯಕ್ಷ ಅಶೋಕ ಮಾಗನೂರ, ಎಸ್.ಎಸ್. ಮುಷ್ಠಿ, ಶಿವಯೋಗಿ ವಾಲಿಶೆಟ್ಟರ, ಆರ್.ಎಸ್. ಮಾಗನೂರ, ನಿರಂಜನ ತಾಂಡೂರ, ಜಗದೀಶ ತುಪ್ಪದ, ಎಸ್.ಎಂ. ಹಾಲಯ್ಯನವರಮಠ, ಜೆ.ಬಿ. ಸಾವಿರಮಠ, ಅಶೋಕ ಹೇರೂರ, ಡಾ. ಸಹನಾ, ಡಾ. ಬಸವರಾಜ ಕಮತರ, ಡಾ. ಸಿದ್ದು ಟಿ.ಎಚ್., ನಿಂಗಪ್ಪ ಆರೇರ, ಬಿ. ಬಸವರಾಜ, ಆನಂದ ಅಟವಾಳಗಿ, ಶಿವಯೋಗಿ ಹೂಲಿಕಂತಿಮಠ, ಚಂಪಾ ಹುಣಸಿಕಟ್ಟಿ, ಶಿವು ಬೆಳವಿಗಿ, ಮಹಾಂತೇಶ ಮಳಿಮಠ, ಎಸ್.ವಿ. ಹಿರೇಮಠ, ಡಾ. ಸವಿತಾ ಹಿರೇಮಠ, ಸಿ.ವೈ. ಅಂತರವಳ್ಳಿ, ಎಸ್.ಎನ್. ಕಾಳಿ, ಎಸ್.ವಿ. ರವಿ, ಎಂ.ಎಸ್. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ವೀರಣ್ಣ ಅಂಗಡಿ ಸ್ವಾಗತಿಸಿದರು. ಎಸ್.ಎನ್. ಮಳೆಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಶಿವಬಸವ ಮರಳಿಹಳ್ಳಿ ವಂದಿಸಿದರು.