ವರುಣನ ಅಟ್ಟಹಾಸಕ್ಕೆ ಶಿವಮೊಗ್ಗ ನಗರ ತತ್ತರ

| Published : Oct 21 2024, 12:38 AM IST

ಸಾರಾಂಶ

ಶಿವಮೊಗ್ಗ ನಗರದ ವಿವಿಧ ಕಡೆಗಳಲ್ಲಿ ಸುರಿದ ಮಳೆಯಿಂದಾದ ಹಾನಿ ಕುರಿತು ಪರಿಶೀಲನೆ ನಡೆಸಿದ ಶಾಸಕ ಚನ್ನಬಸಪ್ಪ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಮತ್ತು ಭಾನುವಾರ ಮುಂಜಾನೆ ಸುರಿದ ಭಾರೀ ಮಳೆಯಿಂದಾಗಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅನೇಕ ಬಡಾವಣೆಗಳ ಮನೆಗಳಿಗೆ ನುಗ್ಗಿದ ನೀರು ಭಾರೀ ಹಾನಿ ಮಾಡಿದೆ.

ಜಿಲ್ಲೆಯ ಅನೇಕ ಕಡೆಗಳಲ್ಲಿ ನೀರು ರಸ್ತೆಗಳಿಗೆ ನುಗ್ಗಿದೆ. ಹಳ್ಳ ಕೊಳ್ಳಗಳು ತುಂಬಿ ಹರಿದಿದ್ದು, ಜಮೀನು ಜಲಾವೃತಗೊಂಡಿವೆ.

ಶನಿವಾರ ರಾತ್ರಿ ಅಬ್ಬರಿಸಿದ್ದ ವರುಣ ಬೆಳಗ್ಗೆಯವರೆಗೂ ಒಂದೇ ಸಮನೆ ಸುರಿದ ಪರಿಣಾಮ ನಗರದ ಹಲವು ಭಾಗಗಳು ಜಲಾವೃತಗೊಂಡವು. ಗುಡುಗು ಮಿಂಚು ಸಹಿತ ಸುರಿದ ಭಾರೀ ಮಳೆಗೆ ನಗರದ ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಅಲ್ಲಲ್ಲಿ ರಾಜಕಾಲುವೆ, ಚರಂಡಿಗಳು ತುಂಬಿ ರಸ್ತೆ, ಮನೆಗಳಿಗೆ ನೀರು ನುಗ್ಗಿತು. ಬೆಳಗಿನ ಜಾವ ಸಿಹಿ ನಿದ್ದೆಯಲ್ಲಿದ್ದ ಜನರನ್ನು ಒಳ ನುಗ್ಗಿದ ನೀರು ಎಚ್ಚರಿಸಿದೆ.

ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್‌ನಲ್ಲಿ ರಾಜಾ ಕಾಲುವೆ, ಚರಂಡಿಗಳು ತುಂಬಿ ನೀರು ಹೊರಗೆ ಹರಿದಿದ್ದು, ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ರಸ್ತೆಗೆ ಸಮವಾಗಿದ್ದ ಮನೆ, ಅಂಗಡಿಗಳಿಗೆ ಚರಂಡಿ ನೀರು ನುಗ್ಗಿದ್ದು ಆಸ್ತಿಪಾಸ್ತಿ ಹಾನಿಯಾಗಿದೆ.

ಸುರಿದ ಭಾರೀ ಮಳೆಯಿಂದ ಟ್ಯಾಂಕ್ ಮೊಹಲ್ಲಾ, ಅಂಗಳಯ್ಯನಕೆರೆ ಕೂಡ ಜಲಾವೃತವಾಗಿವೆ. ರಸ್ತೆ ಮೇಲೆ ನೀರು ಹರಿದ ಪರಿಣಾಮ ಬೈಕು, ಕಾರುಗಳು ಸೇರಿದಂತೆ ಹಲವು ವಾಹನಗಳು ಮುಳುಗಿದ್ದವು. ಇಲ್ಲಿನ ಮನೆ ಹಾಗೂ ಮಳಿಗೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿ ದಿನ ಬಳಕೆ ವಸ್ತುಗಳು, ಪೀಠೋಪಕರಣಗಳಿಗೆ ಹಾನಿಯಾಗಿವೆ. ಇಲ್ಲಿನ ಮಾರಿಕಾಂಬ ದೇವಸ್ಥಾನದ ಅಂಗಳದಲ್ಲಿ ನೀರು ನಿಂತಿದೆ ಅಲ್ಲದೆ, ಚರಂಡಿ ನೀರು ಮನೆಗಳಿಗೆ ನುಗ್ಗಿರುವುದರಿಂದ ದುರ್ವಾಸನೆ ಬೀರುತ್ತಿದ್ದು, ನಿವಾಸಿಗಳು ಪರಿತಪಿಸುವಂತಾಯಿತು.

ಹೊಸಮನೆ-ವಿನೋಬನಗರ ಮಧ್ಯದಲ್ಲಿರುವ ಸಣ್ಣ ಸೇತುವೆ ಮೇಲೆ ಮಳೆ ನೀರು ಹರಿದಿದ್ದೂ, ಅಕ್ಕಪಕ್ಕದ ರಸ್ತೆಯ ಸುಮಾರು 12 ಮನೆಗಳಿಗೆ ನೀರು ನುಗ್ಗಿದೆ. ಎಲ್‌ಬಿಎಸ್ ನಗರದ ಕೃಷ್ಣಮಠ ರಸ್ತೆ ಸಂಪೂರ್ಣ ಹಾನಿಗೊಳಗಾಗಿವೆ. ಕೋಟೆಗಂಗೂರು, ಬೊಮ್ಮನ ಕಟ್ಟೆಯ ಕೆರೆತುಂಬಿದ ಪರಿಣಾಮ ಕೃಷ್ಣ ಮಠ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಆರ್‌ ಎಂಎಲ್ ನಗರದಲ್ಲೂ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಕೆಲ ಕಡೆ ಮನೆಗಳು ಜಲಾವೃತಗೊಂಡಿದೆ.

ಅಶ್ವಥ ನಗರ, ಎಲ್‌ಬಿಎಸ್ ಬಡಾವಣೆಯಲ್ಲಿ ಹಾದು ಹೋಗಿರುವ ರಾಜಾಕಾಲುವೆ ಭರ್ತಿಯಾಗಿದೆ. ಇದರಿಂದ ಮೋರಿ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಗೆ ನುಗ್ಗಿದೆ. ಇಲ್ಲಿಯು ಮನೆಗಳಿಗೆ ನೀರು ನುಗ್ಗಿ, ಕೆಲವು ಕಟ್ಟಡಗಳು ಅಕ್ಷರಶಃ ದ್ವೀಪದಂತಾಗಿವೆ. ಬೆಳಗ್ಗೆ ಎದ್ದು, ಜನರು ಮನೆಗಳಿಂದ ಹೊರ ಬರಲು ಪರದಾಡಿದರು.

ಸೋಮಿನಕೊಪ್ಪ ಸಮೀಪದ ಕನಕ ನಗರ ಬಡವಾವಣೆ, ಬಾಪೂಜಿ ನಗರ, ಹೊಸಮನೆ, ಆಲ್ಕೊಳ ಬಡಾವಣೆಗಳು ಮಳೆಗೆ ತತ್ತರಿಸಿವೆ.

ವಿನೋಬ ನಗರದ 7ನೇ ತಿರುವಿನ ಚಾಲುಕ್ಯ ಬಾರಿನ ಮುಂಭಾಗದಲ್ಲಿರುವ ಮನೆಗಳು ಜಲಾವೃತಗೊಂಡವು. ಮಳೆಯಿಂದಾಗಿ ಪರ್ವಿನ್ ತಾಜ್, ಸೌಮ್ಯ ಮತ್ತು ಫಿಲೋಮಿನಾ ಎಂಬುವರ ಮನೆಗಳು ಹಾನಿಯಾಗಿವೆ.

ಸೌಮ್ಯ ಮತ್ತು ಫಿಲೋಮಿನಾ ಎಂಬುವರ ಮನೆ ಗೋಡೆ ಬಿದ್ದರೆ, ಫರ್ವಿನ್ ತಾಜ್ ಅವರ ಮನೆ ಸಂಪೂರ್ಣ ಹಾನಿಯಾಗಿದೆ. ಮಾಜಿ ಉಪಮೇಯರ್ ಪಾಲಾಕ್ಷಿ ಹಾನಿಯಾಗಿರುವ ಮನೆಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು.

*ತಹಸೀಲ್ದಾರ್ ರಿಂದ ಪರಿಶೀಲನೆ:

ಶಿವಮೊಗ್ಗದ ಎಲ್‌ಬಿಎಸ್ ನಗರದಲ್ಲಿ ಚಾನಲ್ ತುಂಬಿ ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗಿದೆ. ತಹಸೀಲ್ದಾರ್ ಗಿರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಸಾರ್ವಜನಿಕರು ಬಡಾವಣೆಯಲ್ಲಿ ಆಗುತ್ತಿರುವ ಸಮಸ್ಯೆಯ ಕುರಿತು ಮಾಹಿತಿ ನೀಡಿದರು.

*ಸ್ಮಾರ್ಟ್ ಸಿಟಿ ಕಾಮಗಾರಿಗೆ ಆಕ್ರೋಶ:

ಕೆಲವೆಡೆ ಅವೈಜ್ಞಾನಿಕವಾಗಿ ಕೈಗೊಂಡ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮಳೆ ಬಂದರೆ ಸರಾಗವಾಗಿ ನೀರು ಹರಿಯುತ್ತಿಲ್ಲ. ಇದರಿಂದಾಗಿ ಬಡಾವಣೆಯಲ್ಲಿನ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

*ಉಕ್ಕೇರಿದ ತುಂಗಾ ನಾಲೆ:

ತುಂಗಾ ನಾಲೆಯಲ್ಲಿ ನೀರು ಹರಿಸಲಾಗಿದ್ದು, ಮಳೆಯಿಂದ ಭಾರೀ ನೀರು ನಾಲೆಗೆ ಹರಿದು ಬಂದ ಪರಿಣಾಮ ಉಕ್ಕಿದ ನಾಲೆಯ ನೀರು ನಗರದ ಮಧ್ಯ ಭಾಗದ ಹಲವು ಬಡಾವಣೆಗಳಿಗೆ ನುಗ್ಗಿತು.

ಶಿವಮೊಗ್ಗ ನಗರ ಮಧ್ಯ ಭಾಗದಲ್ಲಿ ತುಂಗಾ ನಾಲೆ ಹರಿದು ಹೋಗಿದ್ದು, ಇದು ಉಕ್ಕಿ ಟಿಪ್ಪುನಗರ, ಮಂಜುನಾಥ ಬಡಾವಣೆ, ಇಮಾಮ್ ಬಾಡಾ, ಖಾಜಿ ನಗರ, ಆನಂದ ರಾವ್ ಬಡಾವಣೆ ಹಾಗೂ ಆರ್‌ಎಂಎಲ್ ನಗರಗಳ ಮನೆಗಳಿಗೆ ನೀರು ನುಗ್ಗಿದೆ. ಅಣ್ಣಾನಗರ ಬಡಾವಣೆಯಲ್ಲೂ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮುಖ್ಯ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇಲ್ಲಿಯು ಮನೆಗಳಿಗೆ ನೀರು ನುಗ್ಗಿದೆ. ಬಳಿಕ ಇಲಾಖಾಧಿಕಾರಿಗಳು ನಾಲೆಯಲ್ಲಿ ನೀರು ನಿಲ್ಲಿಸಿದ ಬಳಿಕ ಪ್ರವಾಹ ಕಡಿಮೆಯಾಗಿದೆ.

ಕೊಡಿಬಿದ್ದ ಲಕ್ಕಿನಕೊಪ್ಪದಲ್ಲಿ ಕೆರೆ

ಕಳೆದ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಲಕ್ಕಿನಕೊಪ್ಪದಲ್ಲಿ ಕೆರೆ ಕೋಡಿ ಬಿದ್ದಿ ಪರಿಣಾಮ ಸುತ್ತಮುತ್ತಲಿನ ಜಮೀನು, ತೋಟ ಜಲಾವೃತಗೊಂಡಿವೆ. ರಾತ್ರಿ ಇಡೀ ಸುರಿದ ಮಳೆಗೆ ಲಕ್ಕಿನಕೊಪ್ಪದ ಹೊಸಕೆರೆಗೆ ಕಾಡಿನಿಂದ ಭಾರಿ ನೀರು ಹರಿದು ಬಂದಿದೆ. ಸಮೀಪದಲ್ಲೇ ಇರುವ ಹೆದ್ದಾರಿ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ಹರಿದಿದೆ. ಅಲ್ಲದೆ ರಸ್ತೆ ಪಕ್ಕದಲ್ಲಿ ಮಣ್ಣು ಕೊಚ್ಚಿ ಹೋಗಿದೆ. ಈ ಭಾಗದ ಅಕ್ಕಪಕ್ಕದ ಜಮೀನು, ತೋಟಕ್ಕೆ ನೀರು ನುಗ್ಗಿದ್ದು, ರೈತರಲ್ಲಿ ಬೆಳೆ ಹಾನಿ ಭೀತಿ ಎದುರಾಗಿದೆ. ಲಕ್ಕಿನಕೊಪ್ಪದ ಕೆರೆ ಕೋಡಿ ಬಿದ್ದು ಹಾನಿ ಉಂಟಾಗಿದೆ. ಗಾರೆ ಚಾನಲ್ ತುಂಬಿ ಭಾರಿ ಪ್ರಮಾಣ ನೀರು ಹರಿದಿದೆ. ಕಾಚಿನಕಟ್ಟೆ ಮತ್ತು ಸುತ್ತಮುತ್ತಲು ಸುಮಾರು 50 ಎಕರೆಯಷ್ಟು ಜಮೀನಿಗೆ ನೀರು ನುಗ್ಗಿದೆ.

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಚನ್ನಬಸಪ್ಪ ಭೇಟಿ:

ಶಿವಮೊಗ್ಗ ನಗರದ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿವಮೊಗ್ಗ ನಗರದ ವಿದ್ಯಾನಗರ ಬಡಾವಣೆಯಲ್ಲಿ ರಾಜಕಾಲುವೆ ನೀರು ನುಗ್ಗಿದ್ದರಿಂದ ಹಾನಿಯಾದ ಪ್ರದೇಶ, ನಗರದ ಹೊಸ ಮನೆ ಬಡಾವಣೆ ಯಲ್ಲೂ ಅಸಮರ್ಪಕ ರಾಜಕಾಲುವೆಯಿಂದ ಮನೆಗಳಿಗೆ ನುಗ್ಗಿದ ನೀರಿನ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಮಹಾನಗರ ಪಾಲಿಕೆ ಅಧಿಕಾರಿಗಳು ಜೊತೆಯಲಿದ್ದರು.

ಸಿಡಿಲು ಬಡಿದು ರಸ್ತೆ ಸೀಳು:

ಸಿಂಹಧಾಮದಿಂದ ಮುದ್ದಿನಕೊಪ್ಪ, ಯರೇಕೊಪ್ಪ ಗ್ರಾಮಕ್ಕೆ ತೆರಳುವ ರಸ್ತೆಗೆ ಸಿಡಿಲು ಬಡಿದಿದ್ದು, ಸಿಡಿಲಿನ ರೌದ್ರವತಾರಕ್ಕೆ ಡಾಂಬಾರು ರಸ್ತೆ ಕಿತ್ತು ಹೋಗಿದೆ. ರಸ್ತೆಯನ್ನೇ ಸೀಳಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ರಸ್ತೆಗೆ ಸಿಡಿಲು ಬಡಿಯುವ ಸಂದರ್ಭದಲ್ಲಿ ಅಲ್ಲಿ ಯಾರು ಇಲ್ಲದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.