ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಧ್ಯಕರ್ನಾಟಕದ ಭಾಗವಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಬೇಕು ಎನ್ನುವ ಅವರ ಬೇಡಿಕೆಗೆ ರಾಷ್ಟ್ರಭಕ್ತರ ಬಳಗದ ಸಂಪೂರ್ಣ ಬೆಂಬಲವಿದ್ದು, ಕೊನೆಯವರೆಗೂ ನಾವು ಅವರೊಂದಿಗೆ ಇದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.ಮಂಗಳವಾರ ವಕೀಲರ ಭವನದ ಆವರಣದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ವಕೀಲರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ರಾಷ್ಟ್ರಭಕ್ತರ ಬಳಗದ ಬೆಂಬಲಿಗರೊಂದಿಗೆ ಸ್ಥಳಕ್ಕೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.
ವಕೀಲರು ಧರಣಿ ಮಾಡುತ್ತಿದ್ದಾರೆ ಎಂದರೆ ಅದು ರಾಜ್ಯಕ್ಕೆ ಅಪಮಾನ. ವಕೀಲರು ಸುಮ್ಮನೆ ಹೋರಾಟಕ್ಕೆ ಇಳಿಯುವುದಿಲ್ಲ. ಇದು ಅವರಿಗಾಗಿ ಮಾಡುತ್ತಿರುವ ಹೋರಾಟವಲ್ಲ, ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಅವರು ಧರಣಿ ಕೂತಿದ್ದಾರೆ. ಮಂಗಳೂರಿನ ಹೈಕೋರ್ಟ್ ಪೀಠದಲ್ಲಿ ಶಿವಮೊಗ್ಗ ಸೇರ್ಪಡೆಗೊಂಡರೆ ಇಲ್ಲಿನ ಜನಸಾಮಾನ್ಯರಿಗೆ ಬಹಳಷ್ಟು ತೊಂದರೆಯಾಗುತ್ತದೆ ಎಂದರು.ಜೂನ್ ೧ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ನಾನು ಮುಖ್ಯಮಂತ್ರಿಗಳಿಗೆ ಕೈಮುಗಿದು ಪ್ರಾರ್ಥಿಸುತ್ತೇನೆ. ಕೂಡಲೇ ಶಿವಮೊಗ್ಗಕ್ಕೆ ಹೈಕೋರ್ಟ್ ಘೋಷಣೆ ಮಾಡಿ. ಯಾವ ಕಾರಣಕ್ಕೂ ಶಿವಮೊಗ್ಗವನ್ನು ಮಂಗಳೂರು ಪೀಠಕ್ಕೆ ಸೇರಿಸಲು ಬಿಡುವುದಿಲ್ಲ. ಎಲ್ಲಾ ದೃಷ್ಟಿಯಿಂದಲೂ ಶಿವಮೊಗ್ಗದಲ್ಲೇ ಹೈಕೋರ್ಟ್ ಪೀಠ ಬರಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಬೇಸೂರು ಅಣುವಿದ್ಯುತ್ ಸ್ಥಾವರ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಲು ಹೊರಟಿದ್ದಾರೆ. ಇದೇ ರೀತಿ ಮುಂದುವರಿದರೆ ಶಿವಮೊಗ್ಗದ ಜನ ನಿಮ್ಮನ್ನು ತಿರಸ್ಕರಿಸುತ್ತಾರೆ. ಸಂಚಾರಿ ಪೀಠ ಶಿವಮೊಗ್ಗದಲ್ಲಿ ಆಗುವುದನ್ನು ತಪ್ಪಿಸಿದರೆ ಮುಖ್ಯಮಂತ್ರಿ ಸ್ಥಾನವನ್ನು ನೀವು ಕಳೆದುಕೊಳ್ಳುತ್ತೀರಿ ಎಂದು ಮುಖ್ಯಮಂತ್ರಿಗಳಿಗೆ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರಸ್ವಾಮಿ, ಗೌರವಾಧ್ಯಕ್ಷರಾದ ಕೆ.ಬಸಪ್ಪಗೌಡ ಹಾಗೂ ವಕೀಲರ ಸಂಘದ ಹಾಗೂ ರಾಷ್ಟ್ರಭಕ್ತರ ಬಳಗದ ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.