ಕನ್ನಡಪ್ರಭ ವಾರ್ತೆ ಬೆಳಗಾವಿ
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಂ ಅಸೋಸಿಯೇಟ್ಸ್ ಮೇಲೆ ಪ್ರಕರಣ ದಾಖಲಿಸಿಕೊಂಡು ಸಿಐಡಿ ತನಿಖೆ ನಡೆಸುತ್ತಿರುವುದಾಗಿ ಸಿಐಡಿ ಡಿಐಜಿ ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ತನಿಖೆ ನಡೆಯುವಾಗ ಸುದ್ದಿಗೋಷ್ಠಿ ಮಾಡುವುದಿಲ್ಲ. ಊಹಾಪೋಹಗಳು ಹಬ್ಬುತ್ತಿವೆ. ಆದ್ದರಿಂದ ಸತ್ಯಾಂಶ ತಿಳಿಸಲು ಸುದ್ದಿಗೋಷ್ಠಿ ಮಾಡಬೇಕಾಯಿತು. ಜನರು ಇವತ್ತಿಗೂ ಹಣ ಹಾಕುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಂಪನಿಯ ಮತ್ತು ಶಿವಾನಂದ ನೀಲಣ್ಣವರ ವೈಯಕ್ತಿಕ ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡಲಾಗಿದೆ. ನಂಬಿ ಹಣ ಹಾಕಿದವರೇ ಬೇರೆಯವರಿಂದ ಹಣ ಹಾಕಿಸುತ್ತಿದ್ದಾರೆ. ಈ ರೀತಿ ಯಾರೂ ಹಣ ಹಾಕಬಾರದು ಎಂದು ಎಚ್ಚರಿಕೆ ನೀಡಿದರು.
ಶಿವಾನಂದ ನೀಲಣ್ಣವರ ಹಣ ಹೂಡಿಕೆ ಮಾಡಿದವರಿಗೆ ತಿಂಗಳು ತಪ್ಪದೇ ಹಣ ನೀಡುತ್ತಿದ್ದ. ಅಲ್ಲದೇ, ಸರ್ಕಾರದ ಇಲಾಖೆಗಳಿಗೆ ಪಿತೂರಿ ಮಾಡಿದ್ದರಿಂದ ಕ್ರಮ ತೆಗೆದುಕೊಂಡಿವೆ ಎಂಬ ಆರೋಪಗಳು ಬರುತ್ತಿವೆ. ಆರ್‌ಬಿಐನಿಂದ ಅಗತ್ಯ ಬ್ಯಾಂಕಿಂಗ್ ಅನುಮತಿ ಪಡೆಯದೆ ಠೇವಣಿ ಪಡೆಯುವುದು ಕಾನೂನು ಬಾಹಿರ. ವೈಯಕ್ತಿಕ ಸಾಲ ಎಂದೇ ಪಡೆದಿದ್ದರೂ ಇದನ್ನು ಕಾನೂನಾತ್ಮಕವಾಗಿ ಠೇವಣಿ ಎಂದೇ ಪರಿಗಣಿಸಲಾಗುತ್ತದೆ. ಇನ್ಸೂರೆನ್ಸ್ ಕಂಪನಿಗಳಿಗೂ ಸೂಕ್ತ ಅನುಮತಿ ಇರಬೇಕು. ಶಿವಾನಂದ ನೀಲಣ್ಣವರ, ಆದಿತ್ಯರಾಜ್ ಪ್ರಕರಣದಲ್ಲಿ ಠೇವಣಿ ಸಂಗ್ರಹಕ್ಕೆ ಯಾವುದೇ ಅನುಮತಿ ಇಲ್ಲ. ಭಾರತದಲ್ಲಿ ಎಲ್ಲೂ ಶೇ.30ಕ್ಕಿಂತ ಹೆಚ್ಚು ಲಾಭ ಕೊಡುವ ಕಂಪನಿ ಇಲ್ಲ. ಸಾರ್ವಜನಿಕರು ಬಡ್ಡಿಯ ದುರಾಸೆ ಬಿಡಬೇಕು ಎಂದು ಮನವಿ ಮಾಡಿದರು.ನೀಲಣ್ಣವರ ಹೊಸದಾಗಿ ಹೂಡಿಕೆ ಮಾಡಿದ್ದ ಹಣವನ್ನು ಹಳೆಯ ಹಣಕ್ಕೆ ಬಡ್ಡಿ ಕೊಡುತ್ತಿದ್ದ. 2025ರಲ್ಲಿ ₹ 1000 ಠೇವಣಿ ಇದ್ದರೆ 2026ಕ್ಕೆ ಅದರ ಬಡ್ಡಿ ಕೊಡಬೇಕು. ಹೊಸಬರ ಠೇವಣಿ ಹಳಬರಿಗೆ ಕೊಡುತ್ತಿದ್ದ. ಎಲ್ಲಿಯವರೆಗೆ ಹೊಸ ಠೇವಣಿ ಬರುತ್ತದೆಯೋ ಅಲ್ಲಿಯವರೆಗೆ ಸ್ಕೀಮ್ ನಡೆಯುತ್ತದೆ. ಇದುವರೆಗೆ ₹ 2400 ಕೋಟಿ ಹಣ ಸಂಗ್ರಹ ಮಾಡಿದ್ದಾನೆ. ಸಂಗ್ರಹಿಸಿದ ಹಣವನ್ನು ಒಳ್ಳೆ ವ್ಯವಹಾರ ಮಾಡಿ ಜನರಿಗೆ ಮರಳಿ ಕೊಟ್ಟಿಲ್ಲ. ₹ 540 ಕೋಟಿ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ ₹ 170 ಕೋಟಿ ಕಳೆದುಕೊಂಡಿದ್ದಾನೆ. ₹ 660 ಕೋಟಿ ಶೇರಿಂಗ್ ಅಮೌಂಟ್, ₹ 390 ಕೋಟಿ ಬೇರೆ ಕಡೆಯಿಂದ ಬರುವ ಸಾಧ್ಯತೆ ಇದೆ. ಚಿನ್ನಾಭರಣ, ಆಸ್ತಿ ಖರೀದಿ ಮಾಡಿದ್ದಾನೆ. ಐದು ಕಾರು, 250 ಗ್ರಾಂ ಚಿನ್ನಾಭರಣ ಇವೆ. 40,700 ಹೂಡಿಕೆದಾರರು ಇದ್ದಾರೆ ಎಂದು ತಿಳಿಸಿದರು.-------
ಬಾಕ್ಸ್7 ಖಾತೆಯಿಂದ ಹಣ ವರ್ಗಾವಣೆಕಂಪನಿ ಹಣವನ್ನು ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ₹ 55 ಕೋಟಿ ಹಣ ವರ್ಗಾವಣೆಯಾಗಿದೆ. ವೆಲ್ಫೈರ್, 2 ಮರ್ಸಿಡಿಸ್, ಡಿಫೆಂಡರ್, ವರ್ನಾ, 11 ವೋಲ್ವಾ XC90 ಕಾರು ಖರೀದಿಸಿದ್ದಾನೆ. 11 ವಾಹನ ಬೇರೆ ರಾಜ್ಯದಲ್ಲಿ ನೋಂದಣಿಯಾಗಿವೆ. ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇವೆ. ವಾಪಸ್ ಕಂಪನಿಗೆ ಪಡೆದು ಜನರಿಗೆ ತಲುಪಿಸಲಾಗುವುದು. ಫಾರೆನ್ಸಿಕ್ ಆಡಿಟ್ ತಂಡ ನೇಮಕ ಮಾಡಿದ್ದೇವೆ. ₹ 400 ಕೋಟಿ ಹಣ ಹೂಡಿಕೆದಾರರಿಗೆ ಹೆಚ್ಚುವರಿಯಾಗಿ ಹೋಗಿದೆ. ಅದನ್ನೂ ವಸೂಲಿ ಮಾಡುತ್ತೇವೆ. ಆರಂಭದಲ್ಲಿ ನಿಯಮ ಮೀರಿ ಲಾಭ ಪಡೆದವರನ್ನು ವಿಚಾರಿಸುತ್ತೇವೆ. ಹೆಚ್ಚು ಹಣ ಪಡೆದವರಿಂದ ವಸೂಲಿ ಮಾಡಿಸುತ್ತೇವೆ. 20 ಸಾವಿರ ಠೇವಣಿದಾರರ ದಾಖಲೆ ಪರಿಶೀಲಿಸಿದ್ದೇವೆ. ಇದರಲ್ಲಿ 10 ಸಾವಿರ ಮಹಾರಾಷ್ಟ್ರದವರು ಇದ್ದಾರೆ. ನೀಲಣ್ಣವರದ 30 ಬ್ಯಾಂಕ್ ಖಾತೆ ಸಿಕ್ಕಿವೆ. 7 ಖಾತೆಯಲ್ಲಿ ಹೆಚ್ಚು ಹಣ ವರ್ಗಾವಣೆಯಾಗಿದೆ. ಒಂದು ಖಾತೆಯಲ್ಲೇ 36,200 ಪುಟಗಳ ವರ್ಗಾವಣೆ ಹಿಸ್ಟರಿ ಇದೆ.
ಸನ್ನಿ ಲಿಯೋನ್ ಸೇರಿದಂತೆ ಸಿನಿಮಾ ನಟರಿಗೆ ಹಣ ಕೊಟ್ಟ ಬಗ್ಗೆ ಮಾಹಿತಿ ಇದೆ. ಅವರಿಗೆಲ್ಲ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಿಸುತ್ತೇವೆ ಎಂದು ಹೇಳಿದರು.
--------ಕೋಟ್‌ಇದೀಗ ಆದಿತ್ಯರಾಜ್ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದೆ. ನಮ್ಮ ತಂಡ ಬರುತ್ತಿದ್ದು, ದಾಖಲೆ ಪರಿಶೀಲನೆ ಮಾಡಿ ತೆಗೆದುಕೊಳ್ಳುತ್ತೇವೆ.
ತನಿಖೆಗೆ ಕೆಪಿಐಡಿ ಕಾಯ್ದೆ ಪ್ರಕಾರ ಸಕ್ಷಮ ಪ್ರಾಧಿಕಾರಿ ಆದಿತ್ಯ ಆನಂದ ಬಿಸ್ವಾಸ್ ಅವರನ್ನು ನೇಮಕ ಮಾಡಿದ್ದೇವೆ. ಪಾಲುದಾರನನ್ನು ಹುಡುಕುತ್ತಿದ್ದೇವೆ. ಆತ ಜಾಮೀನಿಗೆ ಅರ್ಜಿ ಹಾಕಿದ್ದಾನೆ. ಇಂತವರು ನಿಮ್ಮ ಬಳಿ ಬಂದು ಪ್ರೇರಣೆ ನೀಡಿದರೆ ಹತ್ತಿರದ ಠಾಣೆಗೆ ತಿಳಿಸಬೇಕು. ನಾಲ್ಕೈದು ಕೋಟಿಯಷ್ಟು ಹಣವನ್ನು ಜನ ಈಗಲೂ ಹಾಕಿದ್ದಾರೆ. ಒಂದು ನಯಾಪೈಸೆಯೂ ಲಾಭದ ವ್ಯವಹಾರ ಮಾಡಿಲ್ಲ.ಭೀಮಾಶಂಕರ ಗುಳೇದ, ಸಿಐಡಿ ಡಿಐಜಿ---ಬಾಕ್ಸ್ನಾವು ಕಾನೂನು ಪ್ರಕಾರವೇ ಇದ್ದೇವೆ: ಬಾಲರಾಜ್ ಮಾನೆ
ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿಯ ಚರ್ಚೆಯಲ್ಲಿರುವ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ ಮೇಲೆ ಶನಿವಾರ ಸಂಜೆ ಸಂಬಂಧಪಟ್ಟ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಸಂಸ್ಥೆಯ ಮಾಲೀಕ ಬಾಲರಾಜ್ ಮಾನೆ ಅವರು ಎಲ್ಲೋ ಕುಳಿತು ಸ್ವತಃ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ಬಾಲರಾಜ್ ಮಾನೆ, ನಾವು ಕಾನೂನು ಪ್ರಕಾರವೇ ಇದ್ದೇವೆ. ಯಾವುದೇ ನಿಯಮಗಳನ್ನು ಗಾಳಿಗೆ ತೂರಿ ಸಂಸ್ಥೆ ನಡೆಸುತ್ತಿಲ್ಲ. ಠೇವಣಿದಾರರು ಯಾರೂ ಧೈರ್ಯ ಗುಂದಬಾರದು. ನಿಮ್ಮ ಬೆವರಿನ ಹಣ ನಮ್ಮ ಬಳಿ ಸುರಕ್ಷಿತವಾಗಿದೆ. ಟಿಡಿಎಸ್ ಕಟ್ ಮಾಡಿದ ನಂತರವೇ ಎಲ್ಲರಿಗೂ ಶೇರಿಂಗ್ ಅಮೌಂಟ್ ಹಾಕಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.ನಾಳೆ ಪ್ರಕರಣ ಕೋರ್ಟ್‌ಗೆ ಬಂದಾಗ ನಾವು ಖಂಡಿತವಾಗಿ ವಿಜಯ ಸಾಧಿಸುತ್ತೇವೆ. ಠೇವಣಿದಾರರ ಬೆವರಿನ ದುಡ್ಡಿಗೆ ನಾನು ಮೋಸ ಮಾಡುವುದಿಲ್ಲ. ಈ ಕಾನೂನು ಸಂಘರ್ಷದಲ್ಲಿ ಗೆದ್ದು ಮತ್ತೆ ಆದಿತ್ಯರಾಜ್ ಕಂಪನಿ ಪುಟಿದೇಳಲಿದೆ. ನಾನು ಬರುತ್ತಿದ್ದೇನೆ, ಎಲ್ಲರೂ ಮತ್ತೆ ಸಿಗೋಣ ಎಂದು ಬಾಲರಾಜ್ ಮಾನೆ ಹೇಳಿದ್ದಾರೆ.