ನಟ ಡಾ। ಶಿವರಾಜ್‌ಕುಮಾರ್‌ ಅವರು ಶನಿವಾರ ಅಭಿಮಾನಿಗಳು, ಕುಟುಂಬದವರು ಹಾಗೂ ಚಿತ್ರರಂಗದ ಆತ್ಮೀಯರ ಜತೆಗೆ ತಮ್ಮ 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಬೆಂಗಳೂರು : ನಟ ಡಾ। ಶಿವರಾಜ್‌ಕುಮಾರ್‌ ಅವರು ಶನಿವಾರ ಅಭಿಮಾನಿಗಳು, ಕುಟುಂಬದವರು ಹಾಗೂ ಚಿತ್ರರಂಗದ ಆತ್ಮೀಯರ ಜತೆಗೆ ತಮ್ಮ 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಅನಾರೋಗ್ಯದ ಕಾರಣ ಕಳೆದ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದ ಶಿವಣ್ಣ, ಈ ವರ್ಷ ಅಭಿಮಾನಿಗಳ ಜೊತೆಗೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಸಂಭ್ರಮಿಸಿದರು. ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣ ಅವರ ಶ್ರೀಮುತ್ತು ನಿವಾಸದ ಮುಂದೆ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಜಮಾಯಿಸಿದ್ದರು.

ಈ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸಿದ 63 ಕೆ.ಜಿ. ತೂಕದ ಕೇಕ್‌ ಕತ್ತರಿಸಲಾಯಿತು. ನಟರಾದ ವಿನಯ್‌ ರಾಜ್‌ಕುಮಾರ್‌ ಹಾಗೂ ಯುವ ರಾಜ್‌ಕುಮಾರ್‌ ಸೋದರರು ನಡುರಾತ್ರಿ ಮನೆಗೆ ಆಗಮಿಸಿ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

ವೈದ್ಯರಿಗೆ ಸನ್ಮಾನ:

ತಮಗೆ ಅಮೆರಿಕದಲ್ಲಿ ಚಿಕಿತ್ಸೆ ನೀಡಿ ಆರೋಗ್ಯ ಕಾಪಾಡಿದ ವೈದ್ಯರಾದ ಮುರುಗೇಶ್‌, ಮನೋಹರನ್‌ ಅವರ ತಂಡವನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸ್ವತಃ ಶಿವಣ್ಣ ಅವರೇ ಸನ್ಮಾನಿಸಿ ಗೌರವಿಸಿದರು. ಶಿವರಾಜ್‌ಕುಮಾರ್‌ ಅವರಿಂದ ಈ ಗೌರವ ಸ್ವೀಕರಿಸಿ, ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವುದಕ್ಕಾಗಿಯೇ ವೈದ್ಯರ ತಂಡ ಅಮೆರಿಕದಿಂದ ಬೆಂಗಳೂರಿಗೆ ಆಗಮಿಸಿತ್ತು.

ದುಬೈ ಕನ್ನಡಿಗರ ಕನ್ನಡ

ರಾಜ್ಯೋತ್ಸವಕ್ಕೆ ಶಿವಣ್ಣ ಅತಿಥಿ

ದುಬೈ ಹಾಗೂ ಯುಎಇ ದೇಶಗಳ ಕನ್ನಡಿಗರ ಕೂಟ ಹಾಗೂ ಗಲ್ಫ್ ಕನ್ನಡ ಮೂವೀಸ್‌ ಸಹಯೋಗದೊಂದಿಗೆ ಇದೇ ವರ್ಷ ನವೆಂಬರ್‌ 8ಕ್ಕೆ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಸಂಭ್ರಮ ಆಯೋಜಿಸುತ್ತಿದೆ. ಅಂದು ನಡೆಯಲಿರುವ ಕನ್ನಡಿಗರ ಸಂಭ್ರಮದಲ್ಲಿ ಶಿವರಾಜ್‌ಕುಮಾರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.

ಹುಟ್ಟುಹಬ್ಬದ ದಿನ ಕನ್ನಡ ಕೂಟದವರ ಕನ್ನಡ ರಾಜ್ಯೋತ್ಸವ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಆಯೋಜಕರ ಆಹ್ವಾನವನ್ನು ಶಿವರಾಜ್‌ಕುಮಾರ್‌ ಅವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗಲ್ಫ್ ಕನ್ನಡ ಮೂವೀಸ್‌ನ ಕತಾರ್‌ನ ಪ್ರತಿನಿಧಿ ಸುಬ್ರಹ್ಮಣ್ಯ ಹೆಬ್ಬಾಗಿಲು, ಗಲ್ಫ್ ಕನ್ನಡ ಮೂವೀಸ್‌ ಸಂಸ್ಥಾಪಕ ದೀಪಕ್ ಸೋಮಶೇಖರ, ಕನ್ನಡಿಗರ ಕೂಟದ ಚೇತನ್‌ ಹಾಜರಿದ್ದರು.

ಕಳೆದ ವರ್ಷ ನಾನು ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗಲಿಲ್ಲ. ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ನಾನು ಋಣಿ. ಸರ್ಜರಿ ನಂತರ ಮನೆಗೆ ಬಂದ ಮೇಲೆ ಸಿಸಿ ಟಿವಿಯಲ್ಲಿ ನೋಡಿ ವೈದ್ಯರು ನನಗೆ ಸಲಹೆ ಕೊಡುತ್ತಿದ್ದರು. ಚಿಕಿತ್ಸೆ ಸಂದರ್ಭದಲ್ಲಿ ವೈದ್ಯರಾದ ಶಶಿಧರ್, ದಿಲೀಪ್ ಹಾಗೂ ಶ್ರೀನಿವಾಸ್ ಅವರು ನಮಗೆ ತಾಯಿ ರೂಪದಲ್ಲಿ ಬಂದರು.

- ಶಿವರಾಜ್‌ಕುಮಾರ್‌, ನಟ