ಕನ್ನಡಪ್ರಭ ವಾರ್ತೆ ಬೇಲೂರು ರಣಘಟ್ಟ ಏತ ನೀರಾವರಿ ಸುರಂಗಮಾರ್ಗದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು ಮುಂದಿನ ವರ್ಷದಲ್ಲಿ ಸಂಪುರ್ಣಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಮನವಿ ಸಲ್ಲಿಸಿರುವುದಾಗಿ ಮಾಜಿ ಸಚಿವ ಬಿ. ಶಿವರಾಂ ತಿಳಿಸಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಹಳೇಬೀಡು ಭಾಗದ ಕೆರೆಗಳಿಗೆ ನೀರು ತುಂಬಿಸುವ ರಣಗಟ್ಟ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಗಮನಸೆಳೆದು, ಕಾಮಗಾರಿಯನ್ನು ತ್ವರಿತವಾಗಿ ಮತ್ತು ವೈಜ್ಞಾನಿಕವಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ ಎಂದರು.ಮಹತ್ವಾಕಾಂಕ್ಷಿ ಯೋಜನೆ:

ರಣಘಟ್ಟ ಯೋಜನೆಯು ಹಳೇಬೀಡು ಹೋಬಳಿಯ ಹಲವು ಕೆರೆಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರ ಕ್ರಿಯಾಯೋಜನೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿ, ಗುರುತ್ವಾಕರ್ಷಣೆ ಆಧಾರದ ಮೇಲೆ ನೀರು ಹರಿಸಲು ಅನುಕೂಲವಾಗುವಂತೆ ಯೋಜನೆಗೆ ಸೂಕ್ತ ರೂಪುರೇಷೆ ತಯಾರಿಸಲಾಗಿದೆ. ಆದರೆ ಕಾಮಗಾರಿ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದರು.ಹಣವಿದ್ದರೂ ಕಾಮಗಾರಿ ವಿಳಂಬ

ಕುಡಿಯುವ ನೀರು, ಅಂತರ್ಜಲದ ಮಟ್ಟ ಹೆಚ್ಚಿಸುವುದು ಹಾಗೂ ಕೃಷಿಗೆ ಅಗತ್ಯವಾದ ನೀರು ಒದಗಿಸುವುದಕ್ಕೆ ಆದ್ಯತೆ ನೀಡಲು 12.8.2021ರಲ್ಲಿ ₹ 100 ಕೋಟಿ ಅನುದಾನಕ್ಕೆ ಅಂದಿನ ಸರ್ಕಾರ ಅನುಮೋದನೆ ನೀಡಿತ್ತು. 2023ಕ್ಕೆ ತ್ವರಿತವಾಗಿ ಕಾಮಗಾರಿ ಮುಗಿಸಲು ಟೆಂಡರ್‌ ಪ್ರಕ್ರಿಯೆಯನ್ನು ಮುಗಿಸಲಾಗಿತ್ತು. ಆದರೆ 2026 ಮುಗಿಯುತ್ತಾ ಬಂದರೂ ರಣಗಟ್ಟ ಯೋಜನೆಗೆ ಕೇವಲ 58. 80 ಕೋಟಿ ರು. ಮಾತ್ರ ಖರ್ಚು ಮಾಡಲಾಗಿದೆ ಸುರಂಗ ಮಾರ್ಗದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.6 ಕೆರೆಗಳಿಗೆ ಭರ್ತಿ ನೀರು

ರಣಘಟ್ಟ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡರೆ ತಾಲೂಕಿನ 6 ಕೆರೆಗಳು ಹಾಗೂ ಚಿಕ್ಕಮಗಳೂರಿನ ಭಾಗದ 2 ಕೆರೆಗಳು ಭರ್ತಿಯಾಗಲಿವೆ. ಮುಂದಿನ 25 ವರ್ಷಗಳಲ್ಲಿ ಕರ್ನಾಟಕವನ್ನು ಹಸಿರು ನಾಡನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ರೈತರೊಂದಿಗೆ ಸಮಾಲೋಚನೆ ನಡೆಸಿ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಣಗಟ್ಟ ಯೋಜನೆಗೆ ಆದ್ಯತೆ ನೀಡಬೇಕಿದೆ. ಎಂಜಿನಿಯರ್‌ ಹಾಗೂ ಗುತ್ತಿಗೆದಾರರ ಕಿತ್ತಾಟದಿಂದ ವಿಳಂಬವಾಗಿತ್ತು ಎಂದು ತಿಳಿದುಬಂದಿದೆ. ಈಗ ಸಮಸ್ಯೆ ಬಗೆಹರಿದಿದ್ದು ತ್ವರಿತಗತಿಯಲ್ಲಿ ವೇಗ ನೀಡಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು ಮುಂದಿ‌ನ ವರ್ಷದಲ್ಲಿ ಕಾಮಗಾರಿ ಮುಗಿಸುವಂತೆ ಸಂಬಂಧಿಸಿದ ಸಚಿವರ ಗಮನಕ್ಕೆ ತರಲಾಗಿದೆ ಎಂದರು.ಸೋತೆ ಎಂದು ಮನೆಯಲ್ಲಿ ಕೂತಿಲ್ಲ : ಇನ್ನು ಹಾಲಿ, ಮಾಜಿ ಶಾಸಕರನ್ನು ಒವರ್‌ಟೇಕ್ ಮಾಡುತ್ತಿದ್ದೇನೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ನನ್ನ ಸಾಮರ್ಥ್ಯದಿಂದ ಎತ್ತಿನಹೊಳೆ ಯೋಜನೆ ತಾಲೂಕಿಗೆ ಬಂದಿದೆ, ಜೊತೆಗೆ ವಿದ್ಯುತ್ ಉಪಕೇಂದ್ರಗಳು ಮಂಜೂರಾಗಿದೆ . ತಾವು ಸೋತೆ ಎಂದು ಮನೆಯಲ್ಲಿ ಕೂರದೇ ಪ್ರತಿನಿತ್ಯ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುತ್ತಿದ್ದೇನೆ. ನನ್ನ ಸಾಮರ್ಥ್ಯ ದಿಂದ ಮಾಡಿದ ಕೆಸವನ್ನು ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ. ತಾವು ಬೇಲೂರಿಗೆ ಬಂದಾಗಿನಿಂದ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇದೆ. ಈಗಲೂ ಸಾಕಷ್ಟಿದೆ . ಅದನ್ನು ನಾನು ಬೆಳೆಸಲು ಹೋಗುವುದಿಲ್ಲ, ಹಾಗಂತ ರಾಜಿನೂ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

=========


* ಬಾಕ್ಸ್ ನ್ಯೂಸ್: ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಲ್ಲ

ತಾವು ಯಾವುದೇ ಸಂದರ್ಭದಲ್ಲಿ ಮಾಜಿ ಶಾಸಕ. ದಿ. ವೈ ಎನ್ ರುದ್ರೇಶ್ ಗೌಡರ ಅವಧಿಯಲ್ಲಿ ಬಗರ್‌ಹುಕುಂ ಹಗರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಲ್ಲ. ಆ ಸಂದರ್ಭದಲ್ಲಿ ಹೆಚ್ಚು ಪ್ರಕರಣ ದಾಖಲಾಗಿವೆ ಎಂದು ಹೇಳಿದ್ದೇನೆ. ಆದರೆ ಅದನ್ನೇ ತಪ್ಪಾಗಿ ಅರ್ಥೈಸಲಾಗಿದೆ. ಇನ್ನು ತಮ್ಮ ಕಿರುಕುಳದಿಂದ ರುದ್ರೇಶ್ ಗೌಡರು ಅಕಾಲಿಕ ಮರಣಕ್ಕೆ ತುತ್ತಾದರು ಎಂದು ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ತಾವು ಬೇಲೂರಿಗೆ ಪ್ರವೇಶ ಮಾಡುವಷ್ಟರಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು ಎಂಬುದು ಗೊತ್ತಿರುವ ವಿಚಾರ ಎಂದರು.