ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಅಂಬೇಡ್ಕರ್ ಸೇವಾ ಸಂಸ್ಥೆ ಹಾಗೂ ಛಲವಾದಿ ಮಹಾಸಭಾ ತಾಲೂಕು ಸಮಿತಿಯಿಂದ ನಿವೃತ್ತ ಐಎಎಸ್ ಅಧಿಕಾರಿ, ಚಿತ್ರನಟ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಸಂಸ್ಥಾಪಕ ಕೆ.ಶಿವರಾಂ ಅವರಿಗೆ ದೀಪ ನಮನ ಸಲ್ಲಿಸಲಾಯಿತು.ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಮದ್ಲೇರ್ ಮಾತನಾಡಿ, ಕೆ.ಶಿವರಾಂ ಅವರು ಬಹುಮುಖ ಪ್ರತಿಭೆಯುಳ್ಳ ಮಹಾನ್ ನಾಯಕರಾಗಿದ್ದರು. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿ ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಕೀರ್ತಿ ತಂದ ಮಹಾನ್ ಸಾಧಕರು. ಐಎಎಸ್ ಮಾಡುವ ಇಂದಿನ ವಿದ್ಯಾರ್ಥಿಗಳಿಗೆ ಶಿವರಾಂ ಒಂದು ರೋಲ್ ಮಾಡೆಲ್ ಆಗಿದ್ದಾರೆ. ತಮ್ಮ ಸುದೀರ್ಘ 37 ವರ್ಷಗಳ ಸೇವಾ ಅವಧಿಯಲ್ಲಿ ಬಡವರು, ಶೋಷಿತರು, ದೀನ, ದಲಿತರ ಏಳಿಗೆಗಾಗಿ ಶ್ರಮಿಸಿದ್ದರು. ಕರ್ತವ್ಯದ ಜತೆಯಲ್ಲಿಯೇ ನಟನೆಯನ್ನು ಮೈಗೂಡಿಸಿಕೊಂಡು ಅನೇಕ ಯಶಸ್ವಿ ಚಿತ್ರಗಳನ್ನು ಕೊಟ್ಟು ಚಿತ್ರರಂಗಕ್ಕೂ ತನ್ನದೇ ಕೊಡುಗೆ ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಹರಿದು ಹಂಚಿ ಹೋಗಿದ್ದ ಛಲವಾದಿ ಸಮುದಾಯವನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾವನ್ನು ಸ್ಥಾಪಿಸಿ ಸಮುದಾಯಕ್ಕೂ ಕೂಡ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ನಮಗೆ ಮತ್ತು ಸಮುದಾಯಕ್ಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಬಸವರಾಜ ಸಾವಕ್ಕನವರ, ನಿವೃತ್ತ ಶಿಕ್ಷಕ ಶ್ರೀಕಾಂತ ಹೊಸಮನಿ, ಸಮಾಜದ ಮುಖಂಡರಾದ ಕುಬೇರಪ್ಪ ಅಟವಾಳಗಿ, ಶ್ರೀಧರ್ ಛಲವಾದಿ, ಮಹೇಶ, ಮುತುರಾಜ ಸಾವಕ್ಕನವರ, ಗುಡ್ಡೆಶ ಎಂ., ಮಣಿಕಂಠ ಎಸ್., ಗೋಪಿ, ಹಂಸದ್ವಜ, ಶಾಂತಮ್ಮ ಎಂ., ವೀಣಾ ಘಂಟೆರ, ನಾಗರತ್ನ, ನಾಗರಾಜ, ಹನುಮಂತ ಎಸ್. ಮತ್ತಿತರರಿದ್ದರು.