ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತುಡಾ.ಶಿವರಾಮ ಕಾರಂತ ಟ್ರಸ್ಟ್ ಸಹಯೋಗದಲ್ಲಿ ಮತ್ತು ಬಸ್ರೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ‘ಡಾ. ಕಾರಂತರ ಪರಿಚಯ - ರಂಗವಲ್ಲಿಯ ಮೂಲಕ ಕಾರಂತರು ಕಾರ್ಯಕ್ರಮ ಸೋಮವಾರ ಜರುಗಿತು. ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾರಂತರನ್ನು ಸರಳ ರೀತಿಯಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ರಂಗವಲ್ಲಿಯ ಮೂಲಕ ಕಾರಂತರು ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಕಾರಂತರ ಮೇರು ವ್ಯಕ್ತಿತ್ವದ ಕುರಿತು ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವುದು ಅತೀ ಅವಶ್ಯ ಎಂದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಬಸ್ರೂರು ಶಾರದಾ ಕಾಲೇಜಿನ ಕನ್ನಡ ವಿಭಾಗ ಉಪನ್ಯಾಸಕಿ ಮಮತಾ ಕಂಡ್ಲೂರು, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರಲ್ಲದೇ, ಕಾರಂತರ ಸಂಪೂರ್ಣ ಜೀವನ ಚರಿತ್ರೆಯ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಸ್ವಾರಸ್ಯಕರವಾಗಿ ವಿವರಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಜಿ.ಎಸ್ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಚೋಮನ ದುಡಿ ಚಲನಚಿತ್ರದ ಔಚಿತ್ಯವನ್ನು ವಿವರಿಸಿದರು. ಟ್ರಸ್ಟ್ ನ ಸದಸ್ಯರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಡಾ. ಭಾರತಿ ಮರವಂತೆ ನಿರೂಪಿಸಿ, ಶಿಕ್ಷಕ ಶೇಖರ ಪೂಜಾರಿ ವಂದಿಸಿದರು.