ಧಾರವಾಡದಲ್ಲಿ ಶಿವನಾಮವೇ ಶಿವರಾತ್ರಿ...!

| Published : Feb 27 2025, 12:35 AM IST

ಸಾರಾಂಶ

ಶಿವನಿಗೆ ಪೂಜೆ, ಮಹಾ ಶಿವರಾತ್ರಿ, ಸೋಮೇಶ್ವರ ದೇವಸ್ಥಾನ, ಶಿವಲಿಂಗ ದರ್ಶನ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ

ಧಾರವಾಡ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಇಲ್ಲಿಯ ಶ್ರೀ ಕ್ಷೇತ್ರ ಸೋಮೇಶ್ವರ ದೇವಸ್ಥಾನ ಸೇರಿದಂತೆ ಧಾರವಾಡದ ಹತ್ತು-ಹಲವು ಶಿವನ ದೇವಸ್ಥಾನದಲ್ಲಿ ಶಿವರಾತ್ರಿ ಅರ್ಥಪೂರ್ಣವಾಗಿ ಆಚರಣೆಗೊಂಡಿತು.

ಶಿವನ ಆರಾಧನೆಗೆ ವಿಶೇಷ ದಿನವಾದ ಮಹಾ ಶಿವರಾತ್ರಿಯನ್ನು ಧಾರವಾಡದಲ್ಲಿ ಬುಧವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಶಿವನ ದೇವಸ್ಥಾನಗಳಲ್ಲಿ ಶಿವಲಿಂಗ ದರ್ಶನ, ಪೂಜೆ-ಪುನಸ್ಕಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಭಕ್ತ ಸಮೂಹವು ಶಿವನಾಮ ಸ್ಮರಿಸಿ ಕೃತಾರ್ಥರಾದರು.

ಸೋಮೇಶ್ವರ ದೇವಸ್ಥಾನ, ಕೆಲಗೇರಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ಉದ್ಭವ ಶಿವಲಿಂಗಕ್ಕೆ ನಸುಕಿನ ಜಾವದಿಂದಲೇ ಅಭಿಷೇಕ, ವಿಶೇಷ ಪೂಜೆ, ಬಿಲ್ವಾರ್ಚನೆ ಪ್ರಾರಂಭಿಸಲಾಗಿತ್ತು. ಬೆಳಗ್ಗೆಯೇ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಬಿಸಿಲನ್ನೂ ಲೆಕ್ಕಿಸದೆ ಕಿ.ಮೀ ಉದ್ದದ ಸರದಿಯಲ್ಲಿ ನಿಂತು ಶಿವನ ದರ್ಶನ ಪಡೆದರು. ಇದಲ್ಲದೇ ಜಯನಗರ ಈಶ್ವರ ದೇವಾಲಯ, ಶ್ರೀನಗರದಲ್ಲಿನ ಶಿವಾಲಯ, ಗಾಂಧಿನಗರದ ಈಶ್ವರ ದೇವಸ್ಥಾನ, ಕಾಮನಕಟ್ಟಿ ಬ್ರಹ್ಮಲಿಂಗೇಶ್ವರ ದೇವಾಲಯ, ಹೆಬ್ಬಳ್ಳಿ ಅಗಸಿ ಈಶ್ವರ ದೇವಾಲಯ, ಎಪಿಎಂಸಿ ಶಂಭುಲಿಂಗೇಶ್ವರ ದೇವಾಲಯ, ಶುಕ್ರವಾರ ಪೇಟ ಮುಖ್ಯ ರಸ್ತೆ ರಾಮಲಿಂಗೇಶ್ವರ ದೇವಸ್ಥಾನ, ಹೊಸ ಓಣಿಯ ಕಲ್ಮೇಶ್ವರ ದೇವಾಲಯ, ತುಂಗಭದ್ರೇಶ್ವರ ದೇವಾಲಯ, ಜೋಶಿ ಗಲ್ಲಿಯ ಸಿದ್ಧರಾಮೇಶ್ವರ ದೇವಾಲಯ, ದೇಶಪಾಂಡೆ ಓಣಿ ತಾರಕೇಶ್ವರ ದೇವಸ್ಥಾನ, ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನ, ವನಸಿರಿನಗರದ ನಾಗೇಶ್ವರ ದೇವಸ್ಥಾನ ಸೇರಿ ನಗರ ಹಾಗೂ ಗ್ರಾಮೀಣ ಪ್ರದೇಶದ ಹಲವು ಶಿವ ದೇವಾಲಯಗಳಲ್ಲಿ ಮಹಾ ಶಿವರಾತ್ರಿಯ ವಿಶೇಷ ಪೂಜೆ ನಡೆಸಲಾಯಿತು.

ದೇವಾಲಯಗಳಲ್ಲಿ ರುದ್ರಾಭಿಷೇಕ, ಶಿವನಾಮ ಧ್ಯಾನದ ಮೂಲಕ ಶಿವನನ್ನು ಆರಾಧಿಸಿದರೆ ಇನ್ನೂ ಕೆಲ ಕಡೆಗಳಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು. ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಶಿವಸ್ಮರಣೆ, ಭಜನೆ ಮೊದಲಾದ ಧಾಮಿರ್ಕ ಕಾರ್ಯಕ್ರಮಗಳು ನೆರವೇರಿದವು. ಗ್ರಾಮೀಣ ಪ್ರದೇಶದಲ್ಲಿ ಶಿವರಾತ್ರಿ ನಿಮಿತ್ತ ಆಯಾ ಗ್ರಾಮದ ಶಿವಲಿಂಗ ದೇವಸ್ಥಾನಗಳಿಗೆ ತೆರಳಿದ ಭಕ್ತರು, ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾಥಿರ್ಸಿದರು. ಉಪಾಸನೆ ಕೈಗೊಂಡು ರಾತ್ರಿ ಇಡೀ ಜಾಗರಣೆ ಮಾಡಿದ ಭಕ್ತರು ಶಿವನಾಮ ಸ್ಮರಿಸಿದರು.

ಇನ್ನು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಕಡಪಾ ಮೈದಾನದಲ್ಲಿ ಆಯೋಜಿಸಿದ್ದ ಶಿವರಾತ್ರಿ ಉತ್ಸವದಲ್ಲಿ ಪುರಾತನ ರಥದಲ್ಲಿ ಸುವರ್ಣ ವರ್ಣದ ಜ್ಯೋತಿರ್ಲಿಂಗ ಗಮನ ಸೆಳೆಯುತ್ತಿದೆ. ಶಿವ ಭಕ್ತರು ಜ್ಯೋತಿರ್ಲಿಂಗ ರಥ ಯಾತ್ರೆಯನ್ನು ವೀಕ್ಷಿಸಿದರು. ಸತ್ತೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ನವಚೇತನ ವೈಭವ ನೃತ್ಯ ಕಾರ್ಯಕ್ರಮ ನಡೆಯಿತು. ಕೊಪ್ಪದಕೇರಿಯ ಶಿವಾಲಯದಲ್ಲಿ ಡಾ. ಎಸ್‌.ಆರ್. ರಾಮನಗೌಡರ ಶಿವರಾತ್ರಿ ನಿಮಿತ್ತ ಭಗವಾ ಧ್ವಜರೋಹಣ ನೆರವೇರಿಸಿದರು.

ಶಿವರಾತ್ರಿಯಲ್ಲಿ ಶಿವನ ನಾಮ ಮಾತ್ರವಲ್ಲದೇ ಉಪವಾಸ ಪ್ರಮುಖ ಪಾತ್ರ ವಹಿಸಿದೆ. ಬುದ್ಧಿಯೋಗವನ್ನು ನಿರಾಕಾರ ಪರಮಪಿತ ಪರಮಾತ್ಮನ ಜೊತೆ ಜೋಡಿಸುವುದೇ ಸತ್ಯ ಉಪವಾಸ. ಭಕ್ತರು ದೇವರ ಚಿಂತನೆ ಮಾಡುತ್ತ ಸ್ಥೂಲ ಜಾಗರಣೆ ಮಾಡುತ್ತಾರೆ. ವಾಸ್ತವಿಕವಾಗಿ ಒಂದು ರಾತ್ರಿ ನಿದ್ರೆಗೆಟ್ಟು ಜಾಗರಣೆ ಮಾಡಿದರೆ ಸಾಲದು. ಈ ಜ್ಞಾನದ ಅಂಧಕಾರದ ರಾತ್ರಿಯಲ್ಲಿ ಸದಾಕಾಲ ಎಚ್ಚರವಾಗಿದ್ದು, ಮಾಯೆಯ ರೂಪವಾದ, ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳ ಮೇಲೆ ವಿಜಯಗಳಿಸಬೇಕು ಎಂಬುದು ಇದರ ಅರ್ಥವಾಗಿದೆ. ಹೀಗೆ ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿದುಕೊಂಡು ನಿಜವಾದ ರೀತಿಯಲ್ಲಿ ಜಾಗರಣೆ ಹಾಗೂ ಉಪವಾಸ ಮಾಡಿದರೆ ವಿಶ್ವ ಪರಿವರ್ತನೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿಗಳು ಶಿವರಾತ್ರಿ ಉಪವಾಸದ ಬಗ್ಗೆ ಹೇಳುತ್ತಾರೆ.