ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಕಾರಣಿಕ ಯುಗಪುರುಷ ಹಾನಗಲ್ ಶ್ರೀಗುರು ಕುಮಾರ ಶಿವಯೋಗಿಗಳು ಸ್ಥಾಪಿಸಿದ ಮದ್ವೀರಶೈವ ಶಿವಯೋಗ ಮಂದಿರ ನಾಡಿನ ಮಠಗಳಿಗೆ ಪೀಠಾಧಿಪತಿಗಳಾಗಲು ಸ್ವಾಮಿತ್ವದ ಸಂಸ್ಕಾರ ನೀಡುವುದರ ಜೊತೆಗೆ ವೀರಕ್ತ ಪರಂಪರೆ ಹಾಗೂ ವೀರಶೈವ ಲಿಂಗಾಯತ ಧರ್ಮದ ಉದ್ಧಾರಕ್ಕಾಗಿ ಶ್ರಮಿಸುತ್ತಿದೆ ಎಂದು ಹಾಲಕೆರೆ-ಗಂಜಿಹಾಳ ಶ್ರೀ ಅನ್ನದಾನೇಶ್ವರ ಮಠದ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.ಸಮೀಪದ ಸುಕ್ಷೇತ್ರ ಮದ್ವೀರಶೈವ ಶಿವಯೋಗಮಂದಿರದಲ್ಲಿ ಕಾರಣಿಕ ಯುಗಪುರುಷ ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳ 94ನೇ ಪುಣ್ಯಸ್ಮರಣೋತ್ಸವ, 114ನೇ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಅಪಾರ ಸಂಖ್ಯೆಯಲ್ಲಿ ಭಕ್ತವರ್ಗ ಹೊಂದಿದ್ದ ಶ್ರೀಗಳು ಇನ್ನುಳಿದ ಸಮಾಜವನ್ನು ಗೌರವಿಸುವುದರ ಜೊತೆಗೆ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಶಿವಯೋಗಿಗಳು, ವೀರಶೈವ ಮತ್ತು ಲಿಂಗಾಯತ ಧರ್ಮ ಒಂದೇ. ಎಲ್ಲರೂ ಒಂದೇ ಮನೋಭಾವನೆಯಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಸ್ವಾಮೀಜಿ ಮಾತನಾಡಿ, ಸಮಾಜವೆಂಬ ವೃಕ್ಷಕ್ಕೆ ಬೆನ್ನೇರಿ ನಿಂತಿರುವ ಸಂತ ವರ್ಗ ಸದೃಢಗೊಳ್ಳಬೇಕು ಎಂಬ ಆಶಯದೊಂದಿಗೆ ಹಾನಗಲ್ಲ ಕುಮಾರ ಸ್ವಾಮೀಜಿ ಇಲ್ಲಿ ಶಿವಯೋಗ ಮಂದಿರ ಸ್ಥಾಪಿಸಿದರು. ಕೇವಲ ಮಠಗಳಿಗೆ, ಧಾರ್ಮಿಕ ಕಾರ್ಯಕ್ಕೆ ಮಾತ್ರ ಸೀಮಿತವಾಗದೆ ಸಮಾಜದಲ್ಲಿ ನೂನ್ಯತೆ ತೊಲಗಿಸಬೇಕೆಂಬ ಆಶಯ ಹೊಂದಿದ್ದರು ಎಂದ ಅವರು, ಶಿವಯೋಗಮಂದಿರ ಸಂಸ್ಥೆ ಅಧ್ಯಕ್ಷ ಲಿಂ.ಡಾ. ಸಂಗನಬಸವ ಸ್ವಾಮೀಜಿ ಕುಮಾಶ್ರೀಗಳ ಆಶಯದಂತೆ ಶಿವಯೋಗಮಂದಿರವನ್ನು ಸಾಕಷ್ಟು ಅಭಿವೃದ್ಧಿಪಡಿಸಿ ನಾಡಿನ ಉದ್ದಗಲಕ್ಕೂ ಶಿವಯೋಗಮಂದಿರ ಸಂಸ್ಥೆ ಪರಿಚಯಿಸಿದರು ಎಂದರು.ಚಿಕ್ಕತೊಟ್ಟಲಕೇರಿಯ ಶಿವಲಿಂಗ ಸ್ವಾಮೀಜಿ, ಕಾಶಿನಾಥ ಶ್ರೀಗಳು, ನಂದವಾಡಗಿ ಶ್ರೀಗಳು, ವಟುಸಾಧಕರು ವೇದಿಕೆ ಮೇಲಿದ್ದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಕುಮಾರಗೌಡ ಜನಾಲಿ, ಪಿಕಾರ್ಡ್ ಬ್ಯಾಂಕ ಅಧ್ಯಕ್ಷ ಮಹಾಂತೇಶ ಮಮದಾಪೂರ, ಶರಣಗೌಡ ಪಾಟೀಲ, ಮಹೇಶ ಹೊಸಗೌಡರ, ಎಂ.ಬಿ. ಹಂಗರಗಿ, ಎಂ.ಡಿ. ಯಲಿಗಾರ, ಡಾ.ಆರ್.ಸಿ. ಭಂಡಾರಿ, ಮುಕ್ಕಣ್ಣ ಜನಾಲಿ, ಕುಮಾರ ರೋಣದ, ಬಿ.ವಿ. ಭಂಡಾರಿ, ಪಂಪಣ್ಣ ಕಾಚೆಟ್ಟಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.ಷಟ್‌ಸ್ಥಲ ದ್ವಜಾರೋಹಣ; ಕಾರ್ಯಕ್ರಮಕ್ಕೂ ಮುನ್ನ ಕಾರಣಿಕ ಯುಗಪುರುಷ ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಷಟ್‌ಸ್ಥಲ ದ್ವಜಾರೋಹಣವನ್ನು ಶಿರಸಿ ಬಣ್ಣದ ಮಠದ ಶ್ರೀಗಳ ಅಮೃತ ಹಸ್ತದಿಂದ ನೆರವೇರಿತು. ನಂತರ ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಭಾವಚಿತ್ರದ ಲಘು ರಥೋತ್ಸವ ಜರುಗಿತು. ಸುತ್ತಮುತ್ತಲಿನ ಗ್ರಾಮಗಳ ಭಜನಾ ಮಂಡಳಿಯವರು, ಡೊಳ್ಳು ವಾದನ ವಾದ್ಯ ಮೇಳದೊಂದಿಗೆ ಜರುಗಿತು.