ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆಚಾರ ವಿಚಾರಗಳೊಂದಿಗೆ ಸಕಲ ಜೀವಿಗಳಿಗಳ ಒಳತಿಗಾಗಿ ಕೆರೆ, ಕಟ್ಟೆ, ಬಾವಿ ನಿರ್ಮಿಸಿ, ನೀರಿನ ಮಹತ್ವ ತಿಳಿಸಿಕೊಡಲು ಶ್ರಮಿಸಿದ ಶಿವಯೋಗಿ ಸಿದ್ಧರಾಮೇಶ್ವರರು ಕಾಯಕಯೋಗಿಯಾಗಿದ್ದರು ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಕಾಯಕವಾಗಲಿ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಮಾಡಬೇಕು ಎಂಬ ನಂಬಿಕೆಯುಳ್ಳ 12ನೇ ಶತಮಾನದ ಶಿವಯೋಗಿ ಸಿದ್ಧರಾಮೇಶ್ವರರು ಕಾಯಕ ಮಾಡುತ್ತಾ, ವಚನಗಳನ್ನು ರಚಿಸಿ ಅವುಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದರು. ಅವರ ಆದರ್ಶಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕಿದೆ ಎಂದರು.
ಎಂ.ಎಲ್.ಸಿ.ಪಿ.ಎಚ್ ಪೂಜಾರ ಮಾತನಾಡಿ, ಸಿದ್ದರಾಮೇಶ್ವರರು ಕೇವಲ ಪ್ರವಚನ ಮಾಡುವ ಯೋಗಿ ಆಗಿರದೇ ಕಾಯಕಯೋಗಿ ಆದವರು. ಕಾಯಕದಲ್ಲೇ ಕೈಲಾಸ ಕಂಡವರು. ಕಾಯಕದೊಂದಿಗೆ ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ, ಒಳ್ಳೆಯ ಸಂದೇಶದ ಕೊಡುಗೆ ನೀಡಿದ ದಾರ್ಶನಿಕ. ಮಾನವೀಯ ಅಂತಃಕರಣ ಹೊಂದಿದ ಶಿವಯೋಗಿ ಸಿದ್ಧರಾಮೇಶ್ವರ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಮಾನವ ಕುಲಕ್ಕೆ ಮಾದರಿಯಾದವರು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ. ಮೇಟಿ ಮಾತನಾಡಿ, ಶಿವ ಶರಣರ ನಡೆ ನುಡಿ ಎರಡೂ ಒಂದೇ ಆಗಿತ್ತು. ಶರಣರು ಸತ್ಯ ಧರ್ಮಕ್ಕೆ ಹೋರಾಡಿದವರು. ಮನುಷ್ಯನು ಎಲ್ಲರೊಂದಿಗೆ ಬೆರೆಯುವುದೇ ನಿಜವಾದ ಧರ್ಮ, ಭೋವಿ ಸಮಾಜ ಹಿಂದುಳಿಯದೇ ಎಲ್ಲರೊಂದಿಗೆ ಬೆರೆತು ಶಿಕ್ಷಣ ಪಡೆದು ಮುಂದೆ ಬರಬೇಕು. ಶಿಕ್ಷಣವಿದ್ದಾಗ ಮಾತ್ರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮುದಾಯದವರು ಅಭಿವೃದ್ಧಿ ಹೊಂದಬೇಕು ಎಂದರು.
ಬದಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ ವಿಶೇಷ ಉಪನ್ಯಾಸ ನೀಡಿದರು. ಶ್ರೀದರ ವಂದಾಲ ಹಾಗೂ ತಂಡದವರು ವಚನ ಗಾಯನ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸ್ವಾಗತಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.ಬಾಗಲಕೋಟೆ ತಹಸೀಲ್ದಾರ್ ಅಮರೇಶ ಪಮ್ಮಾರ, ಸಮುದಾಯ ಮುಖಂಡರಾದ ಅಶೋಕ ಲಿಂಬಾವಳಿ, ಸಿದ್ರಾಮಪ್ಪ ಪಾತ್ರೋಟಿ, ಮುತ್ತಪ್ಪ ಪಾತ್ರೋಟಿ ಮತ್ತು ಆರ್. ಎಫ್.ಮುಧೋಳ ಇದ್ದರು.
ಮೆರವಣಿಗೆಗೆ ಚಾಲನೆವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಡಳಿತ ಭವನ ಆವರಣದಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಎಂಎಲ್ ಸಿಪಿಎಚ್ ಪೂಜಾರ ಪೂಜೆ ಸಲ್ಲಿಸಿ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಉಪ ವಿಬಾಗಾಧಿಕಾರಿ ಶ್ವೇತಾ ಬೀಡಿಕರ ಹಾಗೂ ಇತರರು ಇದ್ದರು.