ಜಿಲ್ಲೆಯಾದ್ಯಂದ ಮೊಳಗಿದ ಶಿವನಾಮಸ್ಮರಣೆ

| Published : Mar 09 2024, 01:36 AM IST

ಸಾರಾಂಶ

ಶಿವರಾತ್ರಿಯ ನಿಮಿತ್ತ ಬಾಗಲಕೋಟೆ ಜಿಲ್ಲೆಯಾದ್ಯಂತ ಈಶ್ವರ ದೇಗುಲಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದವು. ಸಹಸ್ರಾರು ಜನರು ಶಿವನ ದರ್ಶನ ಪಡೆದರೆ, ಮಹಾಶಿವರಾತ್ರಿಗೆ ಕೋಟೆನಗರಿ ಬಾಗಲಕೋಟೆ ಶಿವನಾಮಸ್ಮರಣೆಯಲ್ಲಿ ಮಿಂದೆದ್ದಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಶಿವರಾತ್ರಿಯ ನಿಮಿತ್ತ ಜಿಲ್ಲೆಯಾದ್ಯಂತ ಈಶ್ವರ ದೇಗುಲಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಹಸ್ರಾರು ಜನರು ಶಿವನ ದರ್ಶನ ಪಡೆದರೆ, ಮಹಾಶಿವರಾತ್ರಿಗೆ ಕೋಟೆನಗರಿ ಬಾಗಲಕೋಟೆ ಶಿವನಾಮಸ್ಮರಣೆಯಲ್ಲಿ ಮಿಂದೆದ್ದಿದೆ. ಬೆಳಗ್ಗೆಯಿಂದಲೂ ವಿಶೇಷ ಪೂಜೆ ಪುನಸ್ಕಾರಗಳನ್ನು ಶಿವ ದೇಗುಲಗಳಲ್ಲಿ ಕೈಗೊಳ್ಳಲಾಗಿತ್ತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಸಿಮೆಂಟ್ ಕ್ವಾರಿ ಬಳಿಯ ಶಿವಾಲಯ, ಎಚ್ಚೆಸ್ಕೆ ಆಸ್ಪತ್ರೆ ಆವರಣದಲ್ಲಿರುವ ಶಿವಾಲಯ, ಕಿಲ್ಲಾ ಓಣಿಯ ಕೇದಾರನಾಥ ದೇಗುಲ, ವಿದ್ಯಾಗಿರಿ ಶಿವನ ದೇವಸ್ಥಾನ, ಎಂಜಿ ರಸ್ತೆಯ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ದೇಗುಲಗಳಲ್ಲಿ ಬೆಳಗ್ಗೆಯಿಂದಲೂ ಭಕ್ತರ ದಂಡು ಕಂಡು ಬಂತು. ಉರಿಬಿಸಿಲನ್ನೂ ಲೆಕ್ಕಿಸದೆ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.

ವಿದ್ಯಾಗಿರಿಯ ಶ್ರೀಸಾಯಿಮಂದಿರದಲ್ಲಿ ವಿಶ್ವ ಹಿಂದು ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಸಾಮೂಹಿಕ ರುದ್ರಾಭಿಷೇಕದಲ್ಲಿ ಹತ್ತಕ್ಕೂ ಅಧಿಕ ದಂಪತಿ ಪೂಜೆ ಸಲ್ಲಿಸಿದರು.

ಮಹಾಶಿವರಾತ್ರಿ ಅಂಗವಾಗಿ ಶಿವಾಲಯದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದವರಿಂದ ಚೈತನ್ಯದೇವಿ, ಶಿವಶಂಕರ ಹಾಗೂ ಶಿವಶರಣೆಯರ ಮಂಟಪ ಪ್ರದರ್ಶನ ಆಯೋಜಿಸಲಾಗಿತ್ತು.

ಸಂಗೀತಮಯವಾದ ನಗರ:

ನವನಗರದ ಹಾನಗಲ್ಲ ಶ್ರೀಕುಮಾರೇಶ್ವರ ಆಸ್ಪತ್ರೆ ಆವರಣದ ಶಿವಾಲಯದಲ್ಲಿ ಸಂಜೆ ಸಿದ್ದರಾಮಯ್ಯ ಮಠಪತಿ ಸೇರಿದಂತೆ ಹಲವು ಹಿರಿ-ಕಿರಿಯ ಗಾಯಕರಿಂದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು.

ನಗರದ ಹೊಳೆ ಆಂಜನೇಯ ದೇವಸ್ಥಾನ ಬಳಿ ಶ್ರೀ ಮಾಧವ ಸೇವಾ ಕೇಂದ್ರದಿಂದ ನಡೆದ ಶಿವಸಂಗೀತ ಸಂಜೆಯಲ್ಲಿ ಹಲವಾರು ಕಲಾವಿದರು ಭಾಗವಹಿಸಿದ್ದರು.

ಸೋಮನಕೊಪ್ಪದಲ್ಲಿ ನಿತ್ಯಶಿವಸ್ಮರಣೆ:ಜಿಲ್ಲೆಯ ಬಾದಾಮಿ ತಾಲೂಕಿನ ಸೋಮನಕೊಪ್ಪ ಗ್ರಾಮದ ಪೂರ್ಣಾನಂದರ ಮಠದಲ್ಲಿ ಕಳೆದ 50 ವರ್ಷಗಳಿಂದ ನಿತ್ಯ ಶಿವಸ್ಮಸರಣೆ ಕಾರ್ಯಕ್ರಮ ನಡೆಯುತ್ತಿದೆ. ಹಗಲು ರಾತ್ರಿ ಎನ್ನದೆ ನಿರಂತರವಾಗಿ ನಿತ್ಯ ಶಿವನಾಮ ಜಪ ನಡೆಸುವ ಗ್ರಾಮಸ್ಥರಲ್ಲಿ ಜಾತಿ ಭೇದ ಕಂಡುಬರಲ್ಲ.