ಮುಂಡಗೋಡ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಿವರಾಜ ಆಯ್ಕೆ

| Published : Dec 11 2024, 12:45 AM IST

ಸಾರಾಂಶ

ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಸಭೆ ನಿಗದಿಪಡಿಸಿ ಚುನಾವಣೆ ನಡಸಲಾಯಿತು.

ಮುಂಡಗೋಡ: ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಿವರಾಜ ಸುಬ್ಬಾಯವರ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಸಭೆ ನಿಗದಿಪಡಿಸಿ ಚುನಾವಣೆ ನಡಸಲಾಯಿತು.

ಈ ಸ್ಥಾನಕ್ಕೆ ಪಪಂ ಸದಸ್ಯರಾದ ರಜಾಖಾನ ಪಠಾಣ ಹಾಗೂ ಶಿವರಾಜ ಸುಬ್ಬಾಯವರ ನಡುವೆ ಪೈಪೋಟಿ ನಡೆದಿತ್ತಾದರೂ ಕೊನೆಯ ಕ್ಷಣದಲ್ಲಿ ಶಿವರಾಜ ಸುಬ್ಬಾಯವರ ಒಬ್ಬರೇ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಜಯಸುಧಾ ಬೋವಿ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ತಾಲೂಕು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಧುರೀಣ ಎಂ.ಎನ್. ದುಂಡಸಿ, ಪಪಂ ಸದಸ್ಯರು ಇದ್ದರು.

ಅಧಿವೇಶನದಲ್ಲಿ ಮರಳಿನ ಸಮಸ್ಯೆಗೆ ಧ್ವನಿ ಎತ್ತಬೇಕು: ಭಾಸ್ಕರ

ಕಾರವಾರ: ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಜನರನ್ನು ಕಾಡುತ್ತಿದೆ. ದುಪ್ಪಟ್ಟು ಹಣ ನೀಡಿ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಬೆಳಗಾವಿಯಲ್ಲಿ ಅಧಿವೇಶ ನಡೆಯುತ್ತಿದ್ದು, ಅಲ್ಲಿ ಜಿಲ್ಲೆಯ ಎಲ್ಲ ಶಾಸಕರು ಮರಳಿನ ಸಮಸ್ಯೆ ಬಗ್ಗೆ ಮಾತನಾಡಿ ಸರ್ಕಾರದ ಗಮನ ಸೆಳೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವರಿಗೆ ಮರಳುಗಾರಿಕೆಗೆ ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನುವ ಮಾಹಿತಿಯಿದೆ. ಈ ರೀತಿ ಮಾಡುವುದರಿಂದ ಮಧ್ಯಮ, ಬಡ ವರ್ಗದವರಿಗೆ ಸಾಕಷ್ಟು ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಅದನ್ನು ನ್ಯಾಯಾಲಯಕ್ಕೆ ಹೋದವರು ಅರಿತುಕೊಳ್ಳಬೇಕು. ಮರಳು ಸಿಗದೇ ಪರದಾಡುವಂತಾಗಿದ್ದು, ಕಟ್ಟಡ ಕೆಲಸಗಳು ನಿಂತಿವೆ. ಜಿಲ್ಲೆಯ ಎಲ್ಲ ಶಾಸಕರು ಚಳಿಗಾಲದ ಅಧಿವೇಶನದಲ್ಲಿ ಮರಳು ಸಿಗದೇ ತೊಂದರೆಯಾದ ಬಗ್ಗೆ ಧ್ವನಿ ಎತ್ತಬೇಕು. ಮರಳಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು. ರಂಜನ್ ದೇವಾಡಿಗ, ಸಂತೋಷ ಮುರುಡೇಶ್ವರ ಇದ್ದರು.