ತಾಲೂಕಿನಾದ್ಯಂತ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಆಚರಣೆ

| Published : Mar 09 2024, 01:32 AM IST

ಸಾರಾಂಶ

ಚಿತ್ರಾವತಿ ನದಿ ದಡದಲ್ಲಿರುವ ಚಂದ್ರಮೌಳೇಶ್ವರ, ದಿನ್ನಹಳ್ಳಿಯ ಉದ್ಬವಮೂರ್ತಿ ಪಾತಾಳೇಶ್ವರ, ಸೋಮೇಶ್ವರದ ವಿಭೂತಿನಾಥ ಬೃಂಗೇಶ್ವರ, ಚೆಂಡೂರಿನ ಕಾಶಿಲಿಂಗವಾದ ಚಂದ್ರಮೌಳೇಶ್ವರ, ಬೀಚಗಾನಹಳ್ಳಿ ಚಂದ್ರಮೌಳೇಶ್ವರ, ಜಂಗಾಲಹಳ್ಳಿ ಚಂದ್ರಮೌಲೇಶ್ವರ ಸೇರಿ ತಾಲೂಕಿನಾದ್ಯಂತ ರುದ್ರದೇವ ಮಹಾಶಿವನಿಗೆ ಮಹಾರುಧ್ರಾಭಿಶೇಕ, ಪಂಚಾಮೃತ ಅಭಿಷೇಕ ಇತ್ಯಾದಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ತಾಲೂಕಿನಾದ್ಯಂತ ಇರುವ ಶಿವನ ದೇವಾಲಯ ಸೇರಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುವ ಮೂಲಕ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಬೆಳಿಗ್ಗಿನಿಂದಲೇ ದೇವರಿಗೆ ಅಭಿಷೇಕ, ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು.

ಶಿವರಾತ್ರಿಯ ದಿನವಾದ ಶುಕ್ರವಾರ ಮುಂಜಾನೆಯಿಂದ ಪಟ್ಟಣದ ಸುರಸದ್ಮಗಿರಿ ಬೆಟ್ಟದ ರಾಮೇಶ್ವರ, ಮಾರುತಿ ವೃತ್ತದ ಚಂದ್ರಮೌಳೇಶ್ವರ, ಸೋಮೇನಹಳ್ಳಿಯ ಚಿತ್ರಾವತಿ ನದಿ ದಡದಲ್ಲಿರುವ ಚಂದ್ರಮೌಳೇಶ್ವರ, ದಿನ್ನಹಳ್ಳಿಯ ಉದ್ಬವಮೂರ್ತಿ ಪಾತಾಳೇಶ್ವರ, ಸೋಮೇಶ್ವರದ ವಿಭೂತಿನಾಥ ಬೃಂಗೇಶ್ವರ, ಚೆಂಡೂರಿನ ಕಾಶಿಲಿಂಗವಾದ ಚಂದ್ರಮೌಳೇಶ್ವರ, ಬೀಚಗಾನಹಳ್ಳಿ ಚಂದ್ರಮೌಳೇಶ್ವರ, ಜಂಗಾಲಹಳ್ಳಿ ಚಂದ್ರಮೌಲೇಶ್ವರ ಸೇರಿ ತಾಲೂಕಿನಾದ್ಯಂತ ರುದ್ರದೇವ ಮಹಾಶಿವನಿಗೆ ಮಹಾರುಧ್ರಾಭಿಶೇಕ, ಪಂಚಾಮೃತ ಅಭಿಷೇಕ ಇತ್ಯಾದಿ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು. ಹಲವು ದೇವಾಲಯಗಳಲ್ಲಿ ಶಿವನ ಆರಾಧನೆ, ಭಜನೆ, ಕೀರ್ತನೆಗಳು ಪಠಣೆ ನಡೆದರೆ, ಇನ್ನು ಕೆಲವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಾಗರಣೆ ಆಚರಿಸಿದರು. ಕೆಲವು ಭಕ್ತಾದಿಗಳು ಉಪವಾಸದ ಮೂಲಕ ವ್ರತಾಚರಣೆ ನೆರವೇರಿಸಿ ಈಶ್ವರನನ್ನು ಪೂಜಿಸಿದರು.

ಪಟ್ಟಣದ ಚಂದ್ರಮೌಳೆಶ್ವರ ದೇವಾಲಯದಲ್ಲಿ ಭಕ್ತಾದಿಗಳು ಶಿವನ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ವಿವಿಧ ಹೂ, ಹಣ್ಣುಗಳು, ತುಳಸಿ ಮಾಲೆಗಳಿಂದ ಸಿಂಗರಿಸಿದ್ದ ಈಶ್ವರನಿಗೆ ಪೂಜೆ ಸಲ್ಲಿಸಿ ತೀರ್ಥ, ಪ್ರಸಾದ ಸ್ವೀಕರಿಸಿ ಆರಾಧಿಸಿದರು. ತಾಲೂಕಿನಾದ್ಯಂತ ಶಿವರಾತ್ರಿ ಪ್ರಯುಕ್ತ ತಳಿರು, ತೋರಣಗಳಿಂದ, ಹೂ ಹಣ್ಣುಗಳು, ತುಳಸಿ ದಳಗಳೊಂದಿಗೆ ಸಿಂಗರಿಸಲಾಗಿದ್ದ ಶಿವನ ದೇವಾಲಯಗಳು ಅಸಂಖ್ಯಾತ ಭಕ್ತರ ಶಿವನಾಮ ಸ್ಮರಣೆಯೊಂದಿಗೆ ಮಾರ್ಧನಿಸಿದವು.