ಶ್ರದ್ಧಾ ಭಕ್ತಿಯ ಶಿವರಾತ್ರಿ ಆಚರಣೆ, ದೇಗುಲಗಳಲ್ಲಿ ವಿಶೇಷ ಪೂಜೆ

| Published : Feb 27 2025, 12:31 AM IST

ಶ್ರದ್ಧಾ ಭಕ್ತಿಯ ಶಿವರಾತ್ರಿ ಆಚರಣೆ, ದೇಗುಲಗಳಲ್ಲಿ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆಯಿಂದಲೇ ಶಿವ ದೇವಾಲಯಗಳತ್ತ ಬರಲು ಆರಂಭಿಸಿದ ಭಕ್ತರ ದಂಡು ಬರಬರುತ್ತಾ ಜನಸಾಗರವಾಗಿಯಿತು.

ಹಾವೇರಿ: ಮಹಾ ಶಿವರಾತ್ರಿ ನಿಮಿತ್ತ ಜಿಲ್ಲಾದ್ಯಂತ ಬುಧವಾರ ಶಿವನಾಮ ಸ್ಮರಣೆ ಮಾಡುವ ಮೂಲಕ ಶಿವಭಕ್ತರು ಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಎಲ್ಲೆಡೆ ಓಂ ನಮಃ ಶಿವಾಯ ಅನುರಣಿಸಿತು. ನಗರದ ಈಶ್ವರ ದೇವಸ್ಥಾನ, ಪುರಸಿದ್ದೇಶ್ವರ ದೇವಸ್ಥಾನ, ಹುಕ್ಕೇರಿಮಠ, ಈಶ್ವರಿ ವಿಶ್ವವಿದ್ಯಾಲಯ, ವೀರಭದ್ರೇಶ್ವರ ದೇವಸ್ಥಾನ, ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನಗಳ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಶಿವಮೂರ್ತಿಗೆ ಜನತೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಿಂಚನದಲ್ಲಿ ಮಿಂದು ಪುಳಕಿತರಾದರು.ಶಿವರಾತ್ರಿಯ ವಿಶೇಷ ಪೂಜೆಗೆ ಬಹುತೇಕ ಎಲ್ಲ ಕಡೆಗಳಲ್ಲೂ ದೇವಸ್ಥಾನಗಳು ವಿಶೇಷ ಪೂಜೆ ಆಯೋಜಿಸಿದ್ದವು. ಶಿವರಾತ್ರಿ ಆಚರಣೆಗೆ ನಗರದ ಜನತೆ ಸಿದ್ಧತೆಯಲ್ಲಿ ತೊಡಗಿತ್ತು. ಬೆಳಗ್ಗೆಯಿಂದ ಶ್ವೇತ ವಸ್ತ್ರಧಾರಿಗಳ ದಂಡು ವಿಶೇಷವಾಗಿ ಶಿವದೇವಾಲಯಗಳಲ್ಲಿ ಕಂಡುಬಂದಿತು.ಶಿವ ದೇವಾಲಯಗಳಲ್ಲಿ ಮಹಿಳೆಯರು ವಿಶೇಷ ಪೂಜೆಯ ಕಾರ್ಯಗಳಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿತ್ತು. ಅಲ್ಲಲ್ಲಿ ಸಿಗುವ ಬನ್ನಿಗಿಡ, ಪತ್ರಿಗಿಡಗಳಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಧನ್ಯತಾಭಾವ ಮೆರೆದರು. ದೇವಸ್ಥಾನಗಳಲ್ಲಿ ಬಿಲ್ವಾರ್ಚನೆ, ಲಕ್ಷ ಬಿಲ್ವಾರ್ಚನೆ, ಎಲೆಪೂಜೆ, ಕಂಕಣಪೂಜೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕದಲ್ಲಿ ಭಕ್ತರು ತೊಡಗಿದ್ದರು.ಬೆಳಗ್ಗೆಯಿಂದಲೇ ಶಿವ ದೇವಾಲಯಗಳತ್ತ ಬರಲು ಆರಂಭಿಸಿದ ಭಕ್ತರ ದಂಡು ಬರಬರುತ್ತಾ ಜನಸಾಗರವಾಗಿಯಿತು. ಮಧ್ಯಾಹ್ನದ ಸುಡು ಬಿಸಿಲಿಗೆ ಕೊಂಚ ವಿರಳ ಎನ್ನಿಸಿದರೂ ಮೂರು ಗಂಟೆ ಬಳಿಕ ಮತ್ತೆ ಜಾಗರಣೆ ಹಾಗೂ ಸಂಜೆಯ ವಿಶೇಷ ಪೂಜೆಗೆ ಸಿದ್ಧತೆ ನಡೆದಿತ್ತು. ಶಿವನಿಗೆ ಪಂಚಾಮೃತ, ಹಾಲು, ತುಪ್ಪ, ಹಣ್ಣುಗಳು, ವಿವಿಧ ಖಾದ್ಯಗಳ ನೈನೇಧ್ಯ ಮಾಡಿ ಭಕ್ತಿಯ ಪರಾಕಾಷ್ಠೆ ಮೆರೆದರು.ಶಿವರಾತ್ರಿಯಂದು ಬಿಲ್ವಪತ್ರೆಗೆ ವಿಶೇಷ ಬೇಡಿಕೆ. ಹೀಗಾಗಿ ನಗರದ ಜನತೆ ಬಿಲ್ವಪತ್ರೆ ಮರಗಳಿದ್ದಲ್ಲಿಗೆ ತೆರಳಿದ ಭಕ್ತರು ಕೈಗೆ ನಿಲುಕಿದಷ್ಟು ಬಿಲ್ವಪತ್ರೆಯನ್ನು ಕೊಯ್ದರು. ಕೆಲವರು ಏಣಿ ಹಿಡಿದು ಮರವೇರಿ ಪತ್ರೆ ಸಂಗ್ರಹಿಸಿದರು. ಸಿಂದಗಿಮಠ ಹಾಗೂ ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮ ಹಾಗೂ ಜಾಗರಣೆಯಲ್ಲೂ ಜನತೆ ಪಾಲ್ಗೊಂಡಿದ್ದರು.ಬಿಸಿಲು, ಸೆಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶಿವರಾತ್ರಿಯ ದಿನವಾದ ಬುಧವಾರವೂ ಝಳ ವಿಪರೀತವಾಗಿತ್ತು. ಶಿವರಾತ್ರಿ ಅಂಗವಾಗಿ ಉಪವಾಸ, ಉಪಾಸನೆ, ಆರಾಧನೆ ಮಾಡುವವರಿಗೆ ಕೊಂಚ ಕಷ್ಟವಾಯಿತು. ಆದರೂ ಕೈಯಲ್ಲಿ ಜಪಮಾಲೆ ಹಿಡಿದು ಧ್ಯಾನ ಮಾಡುತ್ತಾ ತಾಪ ಮರೆಯುವ ಪ್ರಯತ್ನ ಮಾಡಿದರು. ಹಣ್ಣು, ಹಣ್ಣಿನ ಜ್ಯೂಸ್‌ ಸೇರಿದಂತೆ ಫಲಾಹಾರ ಸೇವಿಸಿ ಜಾಗರಣೆ ಮಾಡಿದರು.

ದ್ವಾದಶ ಜೋತಿರ್ಲಿಂಗಗಳ ದರ್ಶನ...ಸ್ಥಳೀಯ ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಗಜಾನನ ಹಾಗೂ ಆಂಜನೇಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ದ್ವಾದಶ ಜೋತಿರ್ಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂವು, ಬಿಲ್ವಪತ್ರಿಯಿಂದ ದ್ವಾದಶ ಜೋತಿರ್ಲಿಂಗಗಳನ್ನು ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತಾದಿಗಳು ದೇವಸ್ಥಾನಕ್ಕೆ ತೆರಳಿ ದ್ವಾದಶ ಜೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ 12 ಗಂಟೆಗೆ ದ್ವಾದಶ ಜೋತಿರ್ಲಿಂಗಗಳಿಗೆ ಮಹಾ ಮಂಗಳಾರತಿ ಹಾಗೂ ಆಶೀರ್ವಚನ ನಡೆಯಿತು. ಶ್ರದ್ಧಾಭಕ್ತಿಯ ಶಿವರಾತ್ರಿ ಆಚರಣೆ

ರಾಣಿಬೆನ್ನೂರು: ಮಹಾಶಿವರಾತ್ರಿ ಹಬ್ಬವನ್ನು ಬುಧವಾರ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಜನತೆ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಬೆಳಗ್ಗೆಯಿಂದಲೇ ಭಕ್ತಾದಿಗಳು ಈಶ್ವರನ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿರುವ ದೃಶ್ಯ ಎಲ್ಲೆಡೆ ಕಂಡುಬಂದಿತು.ಇಲ್ಲಿನ ಮೆಡ್ಲೇರಿ ಕ್ರಾಸ್, ವಾಗೀಶ ನಗರ, ಅಶೋಕ ಸರ್ಕಲ್, ಗೌರಿಶಂಕರ ನಗರ, ಈಶ್ವರ ನಗರ, ಕೋಟೆ ಪ್ರದೇಶ, ಎರೆಕುಪ್ಪಿ ರಸ್ತೆ, ಸಿದ್ದೇಶ್ವರ ನಗರ ಮುಂತಾದ ಕಡೆ ಭಕ್ತಾದಿಗಳು ದೇವರಿಗೆ ಪೂಜೆ, ಅಭಿಷೇಕ ಮಾಡಿಸಿ ತಮ್ಮ ಭಕ್ತಿ ಸೇವೆ ಸಲ್ಲಿಸಿದರು.

ಅಶೋಕ ಸರ್ಕಲ್ ಬಳಿಯ ಈಶ್ವರ ದೇವಸ್ಥಾನದಲ್ಲಿ ಪ್ರತ್ಯೇಕವಾಗಿ ಈಶ್ವರಲಿಂಗ ಇಟ್ಟು ಭಕ್ತಾದಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು ಹಾಗೂ ಭಕ್ತರಿಗೆ ಕಲ್ಲಂಗಡಿ ಹಣ್ಣು ವಿತರಿಸಲಾಯಿತು. ತಾಲೂಕಿನ ಲಿಂಗದಹಳ್ಳಿ ಮಠದಲ್ಲಿ ಸ್ಫಟಿಕಶಿವಲಿಂಗ ಮತ್ತು ಪಚ್ಚೆ ಶಿವಲಿಂಗಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.ರಾತ್ರಿ ವೇಳೆ ನಗರದ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಶಿವನಾಮ ಸಂಕೀರ್ತನೆ, ಸಂಗೀತ ಕಾರ್ಯಕ್ರಮ ಮತ್ತು ರುದ್ರಾಭಿಷೇಕ ಜರುಗಿದವು. ರಾಜೇಶ್ವರಿ ನಗರ ಹಾಗೂ ಮಾಗೋಡ ರಸ್ತೆ ಪ್ರದೇಶದಲ್ಲಿ ಜಾಗರಣೆ ಪ್ರಯುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿತ್ತು.