ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಭಾರತೀಯ ಪರಂಪರೆ, ಸಂಸ್ಕೃತಿಯ ಇತಿಹಾಸದ ಪುಟಗಳಲ್ಲಿ ವಿವಿಧ ಹಬ್ಬಗಳ ಆಚರಣೆಗೆ ವಿಶಿಷ್ಟ ಸ್ಥಾನಮಾನವಿದೆ. ಶಿವರಾತ್ರಿ ದಿನದಂದು ಭಾರತಿಯರೆಲ್ಲರೂ ಮಡಿ-ಉಡಿಯಿಂದ, ಧ್ಯಾನ, ಪೂಜೆ-ಪುನಸ್ಕಾರ, ಸಂತರ್ಪಣೆ ಅರ್ಚನೆ, ಉಪವಾಸ ಹೀಗೆ ಅನೇಕ ದೈವಾಂಶ ಶಕ್ತಿಯ ಮಾರ್ಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬದುಕನ್ನು ಹಸನಾಗಿಸುವ ಕಾರ್ಯ ಮಾಡುತ್ತಾರೆ ಎಂದು ಚಿಂತಕ ಡಾ. ಕಲ್ಯಾಣರಾವ್ ಪಾಟೀಲ ಹೇಳಿದರು.ಧಾರವಾಡ ಕಟ್ಟೆ ವೆಬಿನಾರ್ ಮೂಲಕ ಆಯೋಜಿಸಿದ್ದ ಮಹಾಶಿವರಾತ್ರಿ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.
ಪ್ರಕೃತಿ ಬದಲಾಗುತ್ತ ನಮ್ಮನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಪ್ರತಿ ತಿಂಗಳು ಬರುವ ಹುಣ್ಣಿಮೆ, ಅಮಾವಾಸ್ಯೆಗಳು ವಾತಾವರಣದಲ್ಲಿನ ಬದಲಾವಣೆಯ ಕುರಿತಾದ ತಿಳಿವಳಿಕೆಯನ್ನು ಸೂಚಿಸುತ್ತವೆ. ವರ್ಷ ಪೂರ್ತಿ ದುಡಿಮೆ ಮಾಡಿದ ರೈತರು, ಶ್ರಮಿಕ ವರ್ಗದ ಇಂದು ಶಾಂತಿ, ನೆಮ್ಮದಿ, ದಾನ-ಧರ್ಮದ ಹೆಸರಿನಲ್ಲಿ ಅನೇಕ ಪವಿತ್ರ ಕೆಲಸಗಳಲ್ಲಿ ಭಾಗಿಯಾಗಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ ಎಂದರು.ಪ್ರೊ. ರೋಹಿಣಾಕ್ಷ ಶಿರ್ಲಾಲು ಮಾತನಾಡಿ, ನಮ್ಮೊಳಗೆ ಹುದುಗಿ ಹೋಗಿರುವ ದೈವಾಂಶ ಶಕ್ತಿಯನ್ನು ಜಾಗೃತಗೊಳಿಸುವ ಸಲುವಾಗಿ ಶಿವರಾತ್ರಿಯ ಆಚರಣೆ ಮಹತ್ವದ ಪಾತ್ರ ವಹಿಸಿದೆ. ಸಮುದ್ರ ಮಂಥನ ಮಾಡಿದ ಶಿವನು ಇಡೀ ಜಗತ್ತಿನ ಒಳಿತಿಗಾಗಿ ಹಾಲಾಹಲವನ್ನೇ ತನ್ನ ಕಂಠದಲ್ಲಿ ಇರಿಸಿಕೊಂಡು ನೀಲಕಂಠನಾದ ಎಂಬ ಕಥೆ ನೈಜವಾಗಿದೆ. ಸಂಸ್ಕೃತಿಕವಾಗಿ ಪೂರ್ವಜರು ಈ ಶಿವನ ಶಕ್ತಿಯಿಂದ ಭಾರತ ಒಂದಾಗಿದೆ ಎಂದು ಹೇಳುವುದರ ಮೂಲಕ ಶಿವನ ಶಕ್ತಿಯನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ಭಾರತದ ರಕ್ತ ಮಾಂಸಖಂಡಗಳಲ್ಲಿ ಈ ಶಿವನ ಪಾತ್ರಗಳು ಪೂರ್ಣತ್ವದ ಸತ್ಯಗಳಾಗಿ ನಿಂತಿವೆ. ರಾಮನಲ್ಲಿ ಶಿವ, ಶಿವನಲ್ಲಿ ಕೃಷ್ಣನನ್ನು ಕಾಣುವ ಈ ಮೂರು ರೀತಿಯ ಮಾರ್ಗಗಳು ನಮ್ಮನು ದೈವಿಕತೆಯ ನೆಲೆಗೆ ಕರೆದುಕೊಂಡು ಹೋಗುತ್ತವೆ ಎಂದರು.
ಲೇಖಕ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ದೇಹದ ಶುಚಿತ್ವದ ಜೊತೆಗೆ ಆತ್ಮದ ಶುಚಿತ್ವವಾಗಬೇಕು. ಶ್ರದ್ಧೆ ಭಕ್ತಿ, ನಂಬಿಕೆ, ದೃಢತೆ ಇವುಗಳನೆಲ್ಲಾ ಮೈಗೂಡಿಸಿಕೊಳ್ಳಬೇಕು. ಇತಿಹಾಸದ ಸುವರ್ಣ ಕಾಲದಲ್ಲಿಯೂ ಇದರ ಆಚರಣೆ ಮುಂದುವರಿದಿದೆ. ದ್ರಾವಿಡ, ಹರಪ್ಪ ನಾಗರಿಕತೆ ಸಂಸ್ಕೃತಿಗಳಲ್ಲಿ ಶಿವನ ಆರಾಧನೆಯೂ ಇತ್ತು ಎನ್ನುವುದು ಇತಿಹಾಸಕಾರರಿಂದ ತಿಳಿಯುತ್ತದೆ. ಭಾರತ ಮತ್ತು ಭಾರತದಾಚೆಗೂ ಶಿವನ ಆಚರಣೆ, ಪೂಜೆ-ಪುನಸ್ಕಾರ, ಸಂತರ್ಪಣೆ ಅರ್ಚನೆ ಇವುಗಳೆಲ್ಲ ನಡೆಯುತ್ತಿವೆ ಎಂದರು.ಧಾರವಾಡ ಕಟ್ಟೆಯ ಗೌರವಾಧ್ಯಕ್ಷ ಪ್ರೊ. ಬಸವರಾಜ ಡೋಣೂರ, ಬದುಕಿನ ನಾನಾ ಮಜಲುಗಳನ್ನು ನೋಡಿ ಬೆಳೆಯುವ ನಾವು, ಅಲ್ಲಿನ ಸರಿ- ತಪ್ಪುಗಳ, ಆಡಂಬರದ ಜೀವನ ಸಾಗಿಸುವ ಭರದಲ್ಲಿ, ಇಂಥ ಶ್ರೇಷ್ಠ ಕೆಲಸಗಳನ್ನೇ ಮರೆತಿದ್ದೇವೆ. ಕಾವ್ಯ ,ಪುರಾಣ ಪುಣ್ಯಕಥೆಗಳನ್ನು ಓದಿ, ಕೇಳುವುದರ ಜೊತೆಗೆ ಸತ್ಯ ಪಾತ್ರಗಳ ನಿಜಾಂಶವನ್ನು ತಿಳಿಯುತ್ತೇವೆ. ಬದಲಾದ ಕಾಲಘಟ್ಟದಲ್ಲಿ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳನ್ನೆಲ್ಲ ಮರೆತು ಸಾಗುವುದು ಸರಿಯಲ್ಲ ಎಂದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಪ್ರೊ. ಬಿ.ಬಿ. ಪೂಜಾರಿ ವಹಿಸಿದ್ರು. ಶಂಕರ ಪಾಗೋಜಿ, ಡಾ. ಶೀತಲ್ ರೆಡ್ಡಿ, ಡಾ. ಸಂಗನಗೌಡ ಹಿರೇಗೌಡ, ಮಧು ಬಿರಾದಾರ, ಸಿದ್ದಣ್ಣ ವಾಡೇದ, ಎ.ಬಿ. ಪಾಟೀಲ, ರಾಘವೇಂದ್ರ ಸಿ.ಎಸ್, ಆನಂದ ಪೂಜಾರ್, ದೇವಿಂದ್ರಪ್ಪ ನಡಿಯಾಳ, ಶಾಂತ ಎಂ.ಕೆ, ಮುರಗೆಪ್ಪ ಆರ್.ಎಚ್, ಶಿವರಾಜ ಸಣಮನಿ ಹಾಗೂ ಸುಜಾತಾ ನಾಯ್ಕ್ ಕವನ ವಾಚನ ಮಾಡಿದರು.ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ದಾನರಡ್ಡಿ, ಕಾರ್ಯದರ್ಶಿ ಶಿವರಾಜ ಸಣಮನಿ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ಇದ್ದರು.