ಮಾದೇಶ್ವರ ಬೆಟ್ಟದಲ್ಲಿ ಸಡಗರ ಸಂಭ್ರಮದ ಶಿವರಾತ್ರಿ ಜಾತ್ರೆ

| Published : Mar 09 2024, 01:33 AM IST

ಸಾರಾಂಶ

ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆ ಸಡಗರ ಸಂಭ್ರಮದಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರುಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರೆ ಸಡಗರ ಸಂಭ್ರಮದಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯುತ್ತಿರುವ ಐದು ದಿನಗಳ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಿನ್ನೆಲೆ ವಿವಿಧ ಉತ್ಸವ ಪೂಜಾ ಕಾರ್ಯಕ್ರಮಗಳು ಶಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನ್ನಿಧ್ಯದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿತು. ಮಹಾಶಿವರಾತ್ರಿ ಹಬ್ಬದ ಸಡಗರ ಸಂಭ್ರಮದಲ್ಲಿ ಮಲೆ ಮಾದೇಶ್ವರನ ದೇವಾಲಯದಲ್ಲಿ ವಿಶೇಷವಾಗಿ ಫಲಪುಷ್ಪ ತರಕಾರಿಗಳಿಂದ ಸಿಂಗಾರಗೊಳಿಸಲಾಗಿದ್ದ ದೇವಾಲಯದ ಪ್ರಾರಂಭ ಮತ್ತು ದೇವಾಲಯದ ಹೊರಗೆ ಹೂವಿನ ಅಲಂಕಾರ ನೋಡುಗರನ್ನು ತನ್ನತ್ತ ಸೆಳೆಯುವಂತೆ ಅಲಂಕಾರ ಮಾಡಲಾಗಿತ್ತು.ಪೂಜೆ ಹಾಗೂ ಉತ್ಸವಗಳು: ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾದೇಶ್ವರನಿಗೆ ಎಣ್ಣೆ ಮಜ್ಜನ ಹಾಗೂ ದೂಪದ ಅಭಿಷೇಕ ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿಯೊಂದಿಗೆ ಪೂಜೆ ನಡೆಯಿತು ಜೊತೆಗೆ ಚಿನ್ನದ ರಥೋತ್ಸವ ಹಾಗೂ ಬೆಳ್ಳಿ ರಥೋತ್ಸವ ಮತ್ತು ರುದ್ರಾಕ್ಷಿ ಮಂಟಪೋತ್ಸವ ಬಸವ ವಾಹನ ಉತ್ಸವ ಹುಲಿವಾಹನ ಉತ್ಸವ ಹರಕೆ ಹೊತ್ತ ಭಕ್ತರಿಂದ ದೂಪದ ಸೇವೆ ಪಂಜಿನ ಸೇವೆ ಉರುಳು ಸೇವೆ ಮತ್ತು ಮುಡಿಸೇವೆ ವಿವಿಧ ಸೇವೆಗಳೊಂದಿಗೆ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಲ್ಲಿ ಭಕ್ತಸಾಗರ ನಿವೇದನೆ ಮಾಡಿಕೊಂಡಿತು. ಜಗಮಗಿಸಿದ ವಿದ್ಯುತ್ ದೀಪಾಲಂಕಾರ: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ವಿಶೇಷವಾಗಿ ದೇವಾಲಯ ಹಾಗೂ ಗೋಪುರ ಮತ್ತು ಸುತ್ತಲೂ ವಿಶೇಷ ವಿದ್ಯುತ್ ದೀಪಾಲಂಕಾರ ಜಗಮಗಿಸುವಂತೆ ನೋಡುಗರ ಕಣ್ಮನ ಸೆಳೆಯಿತು.ಭಕ್ತ ಸಾಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಮಲೆ ಮಹದೇಶ್ವರನ ಭಕ್ತರು ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆ ಸೇರಿದಂತೆ ವಿವಿಧ ತಾಲೂಕುಗಳಿಂದಲೂ ಸಹ ಭಕ್ತರು ಮಹಾಶಿವರಾತ್ರಿ ಪ್ರಯುಕ್ತ ಶಿವನ ದರ್ಶನ ಪಡೆದು ಪುನೀತರಾದರು. ತುಂಬಿ ತುಳುಕಿದ ವಸತಿಗೃಹಗಳು: ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ತಮಿಳುನಾಡಿನಿಂದಲೂ ಸಹ ಲಕ್ಷಾಂತರ ಭಕ್ತರು ಆಗಮಿಸಿರುವ ಹಿನ್ನೆಲೆಯಲ್ಲಿ ಮಲೆಮಾದೇಶ್ವರ ಬೆಟ್ಟದ ಗಿರಿ ದರ್ಶಿನಿ ನಾಗಮಲೆ ಭವನ ಶಂಕ್ರಮ್ಮನ ನಿಲಯ ವಿವಿಧ ಭವನಗಳಲ್ಲಿ ಭಕ್ತರು ರೂಂ ಕಾಯ್ದಿರಿಸುವ ಮೂಲಕ ಮಹಾಶಿವರಾತ್ರಿ ಜಾಗರಣೆಗೆ ಅಣಿಗೊಳಿಸಿಕೊಂಡರು.ಎಸ್ಪಿ ಪರಿಶೀಲನೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಭದ್ರತೆಯನ್ನು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಗುರುವಾರ ರಾತ್ರಿ ಭೇಟಿ ನೀಡಿ ಮಲೆ ಮಹದೇಶ್ವರನ ದರ್ಶನ ಪಡೆದು ಶ್ರೀ ಕ್ಷೇತ್ರದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಭದ್ರತೆಯನ್ನು ಕಟ್ಟುನಿಟ್ಟಾಗಿ ಯಾವುದೇ ಲೋಪದೋಷವಿಲ್ಲದಂತೆ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಇದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಲೆ ಮಹದೇಶ್ವರ ಬೆಟ್ಟದ ದೇವಾಲಯ ಬಸ್ ನಿಲ್ದಾಣ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆಯ ಕ್ರಮ ಕೈಗೊಳ್ಳಲಾಗಿದೆ.

ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಐದು ದಿನಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಸುರಕ್ಷತಾ ದೃಷ್ಟಿಯಿಂದ ಹಾಗೂ ಅಪಘಾತಗಳನ್ನು ತಡೆಗಟ್ಟುವ ಸದುದ್ದೇಶದಿಂದ ಜಿಲ್ಲಾ ಆಡಳಿತ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳನ್ನು ಶ್ರೀ ಕ್ಷೇತ್ರಕ್ಕೆ ನಿಷೇಧಗೊಳಿಸಿ ತಾಲೂಕಿನ ಕೌದಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಬರುವ ಪ್ರಕಾಶ್ ಗಾರ್ಡನ್ ನಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.