ಸಾರಾಂಶ
ಭಟ್ಕಳ: ಶಿವರಾತ್ರಿಯ ಅಂಗವಾಗಿ ಫೆ. 26ರಂದು ಮುರ್ಡೇಶ್ವರದಲ್ಲಿ ಅದ್ಧೂರಿಯಾಗಿ ಶಿವರಾತ್ರಿ ಉತ್ಸವ, ಜಾಗರಣೆಯನ್ನು ಆಚರಿಸಲು ನಿರ್ಧರಿಸಲಾಗಿದ್ದು, ಮುಂದಿನ ವರ್ಷದಿಂದ ಜಿಲ್ಲೆಯ ಪಂಚ ಶಿವಕ್ಷೇತ್ರಗಳಲ್ಲಿಯೂ ಅದ್ಧೂರಿಯಾಗಿ ಶಿವರಾತ್ರಿ ಜಾಗರಣೆಯನ್ನು ಉತ್ಸವವವಾಗಿ ಆಚರಿಸಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ತಾಲೂಕು ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ಶಿವರಾತ್ರಿ ಉತ್ಸವದ ಕುರಿತು ಅಧಿಕಾರಿಗಳು ಮತ್ತು ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಮುರ್ಡೇಶ್ವರದ ಶಿವರಾತ್ರಿ ಉತ್ಸವದ ಬಗ್ಗೆ ಈಗಾಗಲೇ ರೂಪುರೇಷೆಗಳನ್ನು ತಯಾರಿಸಲಾಗಿದೆ. ಸಾರ್ವಜನಿಕರು ಶಿವರಾತ್ರಿ ಆಚರಣೆ ಬಗ್ಗೆ ಯಾವುದೇ ಸಲಹೆ-ಸೂಚನೆಗಳನ್ನು ನೀಡಿದರೂ ಅವುಗಳನ್ನು ಪರಿಗಣಿಸಲಾಗುವುದು ಎಂದರು.ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾತನಾಡಿ, ಸ್ಥಳೀಯ ಅಧಿಕಾರಿಗಳು ಕಳೆದ ವರ್ಷ ಮಾಡಿದಂತೆಯೇ ಎಲ್ಲ ತಯಾರಿಗಳನ್ನು ಮಾಡಿಕೊಂಡು ಯಾವುದೇ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಒದಗಿಸುವ ಆಹಾರ ಮತ್ತು ನೀರಿನ ಗುಣಮಟ್ಟ ಪರೀಕ್ಷಿಸಿಯೇ ನೀಡಬೇಕು. ಪೊಲೀಸ್ ಇಲಾಖೆಯಿಂದ ಹೆಲ್ಫ್ ಡೆಸ್ಕ್, ಸಹಾಯವಾಣಿ ಆರಂಭಿಸಬೇಕು. ಆರೋಗ್ಯ ಇಲಾಖೆಯಿಂದ ಅಂಬುಲೆನ್ಸ್, ವೈದ್ಯರು ಹಾಗೂ ಸಿಬ್ಬಂದಿ ನೇಮಿಸಿ ಮೂರು ಕಡೆಗಳಲ್ಲಿ ಅಚ್ಚುಕಟ್ಟಿನ ವ್ಯವಸ್ಥೆ ಮಾಡಬೇಕು. ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ತಮ್ಮ ವಾಹನ ಸಹಿತವಾಗಿ ತಯಾರಿಯಲ್ಲಿರಬೇಕು. ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಮಾತನಾಡಿ, ಪಾದಯಾತ್ರೆ, ಶಿವನ ಧ್ಯಾನ, ಭಜನಾ ತಂಡಗಳು ಸೇರಿದಂತೆ ಭಕ್ತರ ದಂಡೇ ಹರಿದು ಬರುವುದರಿಂದ ಎಲ್ಲಿಯೂ ನೂಕುನುಗ್ಗಲಾಗದಂತೆ ಬ್ಯಾರಿಕೇಡ್ ಅಳವಡಿಸಿ ಅಗತ್ಯದ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಶಿವರಾತ್ರಿ ಆಚರಣೆಗೆ ಹೆಚ್ಚಿನ ಜನರು ಸೇರುವುದರಿಂದ ದೇಶವಿರೋಧಿ ಶಕ್ತಿಗಳು ತಮ್ಮ ಕೈಚಳಕ ತೋರಿಸದಂತೆ ಹಾಗೂ ಕಳ್ಳರು ತಮ್ಮ ಕೈಕೆಲಸ ಮಾಡದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗುವುದು. ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲಿಗೆ ಕ್ರಮ ವಹಿಸಲಾಗುವುದು. ಮಫ್ತಿಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸುವುದು, ನೂಕುನುಗ್ಗಲು ತಡೆಯಲು ಕ್ರಮ ವಹಿಸುವುದು ಸೇರಿದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಗೊಡದೇ, ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ಹರಡಿಸಲು ಮುಂದಾದರೆ ಅಂಥವರ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಹಾಯಕ ಆಯುಕ್ತೆ ಕಾವ್ಯಾರಾಣಿ ಅವರು, ಶಿವರಾತ್ರಿ ಆಚರಣೆಗೆ ಭಾಗವಹಿಸುವ ಆಹ್ವಾನಿತ ಕಲಾವಿದರ ತಂಡದ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಶುಕ್ರವಾರ ಸಂಜೆಯ ತನಕ ಹೆಸರು ಕೊಡಲು ಅವಕಾಶವಿದೆ ಎಂದರು.
ಡಿವೈಎಸ್‌ಪಿ ಮಹೇಶ, ದೇವಸ್ಥಾನದ ಮೆನೇಜರ್ ಮಂಜುನಾಥ ಶೆಟ್ಟಿ, ನಾಗರಿಕ ವೇದಿಕೆಯ ಎಸ್.ಎಸ್. ಕಾಮತ್, ಡಾ. ಸವಿತಾ ಕಾಮತ್, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿದರು. ಮುರ್ಡೇಶ್ವರ ಸೇರಿದಂತೆ ವಿವಿಧ ಭಾಗದ ಮುಖಂಡರು, ಅಧಿಕಾರಿಗಳಿದ್ದರು.