ಸಮ ಸಮಾಜ ನಿರ್ಮಾಣ ಶಿವಶರಣರ ಕನಸು

| Published : Nov 17 2024, 01:17 AM IST

ಸಾರಾಂಶ

ದ್ವೇಷ, ಅಸೂಯೆ, ಜಾತಿ ತಾರತಮ್ಯ ಮೇಲು ಕೀಳು ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವುದು ಎಲ್ಲ ಶಿವಶರಣರ ಕನಸಾಗಿದ್ದು, ಅವರ ಮೇಲ್ಪಂಕ್ತಿ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಆಗ ಮಾತ್ರ ಶಿವಶರಣರ ಕನಸು ನನಸಾಗಲು ಸಾಧ್ಯ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ದ್ವೇಷ, ಅಸೂಯೆ, ಜಾತಿ ತಾರತಮ್ಯ ಮೇಲು ಕೀಳು ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವುದು ಎಲ್ಲ ಶಿವಶರಣರ ಕನಸಾಗಿದ್ದು, ಅವರ ಮೇಲ್ಪಂಕ್ತಿ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಆಗ ಮಾತ್ರ ಶಿವಶರಣರ ಕನಸು ನನಸಾಗಲು ಸಾಧ್ಯ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು. ತಾಲೂಕಿನ ಜಂಗಮ ಕ್ಷೇತ್ರ ಸುರಗೀಹಳ್ಳಿಯ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ತಿಕ ದೀಪೋತ್ಸವ ಹಾಗೂ ಲಿಂ.ಶ್ರೀ ಮನಿಪ್ರ ವಿರೂಪಾಕ್ಷ ಮಹಾಸ್ವಾಮಿಗಳ ಗದ್ದುಗೆ ಪ್ರತಿಷ್ಠಾಪನೆ ಹಾಗೂ ಮಾಸಿಕ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಯೋತಿಯಿಂದ ಜ್ಯೋತಿ ಬೆಳಗುವಂತೆ ಮನುಷ್ಯನಲ್ಲಿನ ದ್ವೇಷ, ಅಸೂಯೆ,ಅ ಹಂಕಾರ ಮತ್ತಿತರ ದುಷ್ಟ ಶಕ್ತಿಗಳನ್ನು ಹೋಗಲಾಡಿಸಿ ಸತ್ಯ ಶುದ್ಧ, ಕಾಯಕದಿಂದ ಆದರ್ಶ ಬದುಕನ್ನು ರೂಡಿಸಿಕೊಳ್ಳಬೇಕು ಎಂದ ಅವರು, ಶ್ರೀ ಮಠದ ಜೀರ್ಣೋದ್ಧಾರಕ್ಕೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನೀಡಿದ ಅನುದಾನ ಇದೀಗ ಭಕ್ತರ ಶ್ರದ್ಧಾ ಕೇಂದ್ರವಾಗಿದೆ ಎಂದು ಹೇಳಿದರು.

ವಿ.ಪ ಸದಸ್ಯ ಧನಂಜಯ ಸರ್ಜಿ ಶ್ರೀ ಮಠದ ಮೂಕೇಶ್ವರ ಪ್ರಭೆ ಪತ್ರಿಕೆ ಬಿಡುಗಡೆ ಮಾಡಿ, ವಿಜ್ಞಾನ ಮತ್ತು ಆಧ್ಯಾತ್ಮ ನಮ್ಮ ಸಮಾಜದ ಎರಡು ಕಣ್ಣುಗಳು, ಹಿರಿಯರು ಪುರಾತನ ಕಾಲದಿಂದ ಅನುಸರಿಸಿಕೊಂಡು ಬರುತ್ತಿರುವ ಗರ್ಭದಾನದಿಂದ ಹಿಡಿದು, ಹಬ್ಬ ಹರಿದಿನಗಳಲ್ಲಿ ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಮಾಡುತ್ತಿರುವ ಪದ್ಧತಿಗಳು ಆರೋಗ್ಯಪೂರ್ಣ ಸಮಾಜಕ್ಕೆ, ವಿಜ್ಞಾನಕ್ಕೆ ಹತ್ತಿರವಾಗಿವೆ ಎಂದರು. ಈ ಸಂದರ್ಭದಲ್ಲಿ ಕೂಡಲದ ಶ್ರೀ ಗುರುಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಾದರಹಳ್ಳಿ ಶ್ರೀ ಸಿದ್ಧಲಿಂಗ ಸ್ವಾಮಿಗಳು, ಹೇರೂರು ಗುಬ್ಬಿ ನಂಜುಂಡೇಶ್ವರ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಾಯಿತು. ನಂತರ ಗುರುಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ, ತದನಂತರ ಸಹಸ್ರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.ವೇದಿಕೆಯಲ್ಲಿ ಮೂಲೆಗದ್ದೆ ಸದಾನಂದಾಶ್ರಮದ ಶ್ರೀ ಅಭಿನವ ಚನ್ನಬಸವ ಶ್ರೀ, ಅಖಿಲ ಭಾರತ ವೀರಶೈವ ಸಮಾಜ ಸಭಾ ಸದಸ್ಯ ಎನ್.ವಿ ಈರೇಶ್, ತಾ. ವೀರಶೈವ ಮಹಾಸಭಾ ಅಧ್ಯಕ್ಷ ಸುಧೀರ್ ಮಾರವಳ್ಳಿ, ಆರಾಧನಾ ಸಮಿತಿ ಸದಸ್ಯೆ ವೀಣಾ ಹಿರೇಮಠ್, ತಾ. ಮರಾಠ ಸಮಾಜದ ಅಧ್ಯಕ್ಷ ಗುರುರಾಜ್ ಜಗತಾಪ್‌ ಮತ್ತಿತರರು ಉಪಸ್ಥಿತರಿದ್ದರು.