ಕಟ್ಟಕಡೆ ಸಮುದಾಯದವರಿಗೆ ಸಮಾನತೆ ಕಲ್ಪಿಸಿದವರು ಶಿವಶರಣರು: ಗೀತಾ ಸಿ.ಡಿ.

| Published : Jan 17 2024, 01:46 AM IST

ಕಟ್ಟಕಡೆ ಸಮುದಾಯದವರಿಗೆ ಸಮಾನತೆ ಕಲ್ಪಿಸಿದವರು ಶಿವಶರಣರು: ಗೀತಾ ಸಿ.ಡಿ.
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಲೂರು ವೆಂಕಟರಾವ್ ಭವನದಲ್ಲಿ ಶ್ರೀ ಸಿದ್ದರಾಮೇಶ್ವರರ 852ನೇ ಜಯಂತಿ ಆಚರಿಸಲಾಯಿತು.

ಧಾರವಾಡ: ಸಾಮಾನ್ಯ ಮನುಷ್ಯನು ಕೂಡ ಎಲ್ಲರೊಂದಿಗೆ ಬೆರತು ಸಹ ಬಾಳ್ವೆ ಮಾಡಬೇಕೆನ್ನುವುದು 12ನೇ ಶತಮಾನದ ಬಸವಣ್ಣನವರ ಕನಸಾಗಿತ್ತು. ಕಟ್ಟಕಡೆಯ ಸಮುದಾಯದವರಿಗೆ ಸಮಾನತೆ ಕಲ್ಪಿಸಿದವರು ಶಿವಶರಣರು. ಅವರು ತಮ್ಮ ಅನುಭವದ ಮಾತುಗಳನ್ನು ವಚನಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಲೂರು ವೆಂಕಟರಾವ್ ಭವನದಲ್ಲಿ ಜರುಗಿದ ಶ್ರೀ ಸಿದ್ದರಾಮೇಶ್ವರರ 852ನೇ ಜಯಂತಿ ಉದ್ಘಾಟಿಸಿದ ಅವರು, ಶಿವಯೋಗಿ ಸಿದ್ದರಾಮೇಶ್ವರರು ವೇಶವ ಧರಿಸಿ ಫಲವೇನಯ್ಯ, ವೇಷದಂತೆ ಆಚರಣೆ ಇಲ್ಲದಿದ್ದಾಗ ಎನ್ನುವ ವಚನ ಸಾರಿ ಹೇಳಿದ 12ನೇ ಶತಮಾನದ ಖ್ಯಾತ ಶಿವಶರಣರು ಮತ್ತು ವಚನಕಾರರು. ಭೋವಿ ವಡ್ಡರ ಸಮಾಜದವರು ಶ್ರಮ ಜೀವಿಗಳು. ಕಾಯಕದಿಂದ ತಮ್ಮ ಬದುಕನ್ನು ಕಟ್ಟಿಕೊಂಡವರು. ಅಂತಹ ಸಮಾಜದ ಗುರುಗಳಾದ ಶ್ರೀ ಸಿದ್ದರಾಮೇಶ್ವರರು ಬಸವತತ್ವದ ವೈಚಾರಿಕ ಚಿಂತನೆಯಲ್ಲಿ ಅರಳಿದ ಅವರು, ಉಪದೇಶಿಸಿರುವ ಜ್ಞಾನ ಸಂದೇಶಗಳನ್ನು ಅವಲೋಕನ ಮಾಡಿಕೊಳ್ಳುವುದರ ಮೂಲಕ ಅವುಗಳನ್ನು ತನುಮನಗಳಲ್ಲಿ ಕ್ರಿಯಾತ್ಮಕವಾಗಿ ರೂಪಿಸಿಕೊಳ್ಳುವ ಪ್ರಯತ್ನದೊಂದಿಗೆ ಅವರಿಗೆ ಸಲ್ಲಿಸುವ ನಮನ ನಿಜಕ್ಕೂ ಅರ್ಥಪೂರ್ಣ ಎನಿಸುತ್ತದೆ ಎಂದರು.

ಹೊಸಪೇಟೆಯ ವಿಜಯನಗರ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗಾದೆಪ್ಪ ವಿಶೇಷ ಉಪನ್ಯಾಸ ನೀಡಿದರು. ಪಾಲಿಕೆ ಮಾಡಿ ಸದಸ್ಯ ಬಸವರಾಜ ಮುತ್ತಳ್ಳಿ, ಭೋವಿ ಸಮಾಜದ ಮುಖಂಡ ಕಾಶಪ್ಪ ನಾಗಪ್ಪ ಹಿರೇಮನಿ ಮಾತನಾಡಿದರು. ನಂತರ ಸಿದ್ದರಾಮೇಶ್ವರರ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲಕ್ಷ್ಮೀಸಿಂಗನಕೆರೆ ಸಿದ್ದರಾಮಯ್ಯನವರ ದೇವಸ್ಥಾನಕ್ಕೆ ತಲುಪಿ ಮುಕ್ತಾಯವಾಯಿತು. ನಂತರ ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಗಣೇಶ ಮುಧೋಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕುಮಾರ ಬೆಕ್ಕೇರಿ, ಹರೀಶ ವಡ್ಡರ, ಮಂಜುನಾಥ ತಿಮ್ಮಣ್ಣ ಹಿರೇಮನಿ, ಬಸವರಾಜ ಆನೆಗುಂದಿ, ಆನಂದ ವಡ್ಡರ, ಬಸವರಾಜ ರುದ್ರಾಪುರ, ಮಂಜುನಾಥ ಭೋವಿ, ಶ್ರೀನಿವಾಸ ಉಣಕಲ್, ಶ್ರೀನಿವಾಸ ಅವರಳ್ಳಿ, ಮಂಜುನಾಥ ಹಳಿಯಾಳ, ಅರ್ಜುನ ವಡ್ಡರ ಮತ್ತಿತರರು ಇದ್ದರು. ಆರತಿ ದೇವಶಿಕಾಮನಿ ನಿರೂಪಿಸಿದರು. ತುಳಸಪ್ಪ ಪೂಜಾರ ವಂದಿಸಿದರು.