ಬೆಂಗಳೂರು ಉತ್ತರದಿಂದ ಶೋಭಾ ಉಮೇದುವಾರಿಕೆ

| Published : Apr 04 2024, 01:04 AM IST / Updated: Apr 04 2024, 06:06 AM IST

ಸಾರಾಂಶ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಭ್ಯರ್ಥಿ ಕು.ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸಿ ಈ ಬಾರಿ ಐದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

 ಬೆಂಗಳೂರು :  ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕು.ಶೋಭಾ ಕರಂದ್ಲಾಜೆ ಬುಧವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ ಸಂಜಯನಗರದ ರಾಧಾಕೃಷ್ಣ ದೇವಸ್ಥಾನ ಮತ್ತು ಮೈಸೂರು ಬ್ಯಾಂಕ್‌ ವೃತ್ತದ ಆಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬೃಹತ್‌ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಶಾಸಕರಾದ ಬೈರತಿ ಬಸವರಾಜು, ಕೆ.ಗೋಪಾಲಯ್ಯ, ಎಸ್.ಮುನಿರಾಜು, ಜೆಡಿಎಸ್‌ ಮುಖಂಡ ಜವರಾಯಿಗೌಡ ಮತ್ತಿತರರು ಶೋಭಾ ಅವರಿಗೆ ಸಾಥ್‌ ನೀಡಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಈ ಬಾರಿ ಐದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಬಿಜೆಪಿಗೆ ಒಳ್ಳೇಯ ವಾತಾವರಣ ಇದೆ. ಜೆಡಿಎಸ್‌-ಬಿಜೆಪಿ ಒಟ್ಟಾಗಿರುವುದರಿಂದ ಶಕ್ತಿ ಇಮ್ಮಡಿಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಪರ ವಾತಾವರಣವಿದೆ. ಬಿಜೆಪಿ-ಜೆಡಿಎಸ್‌ ಪರಸ್ಪರ ಸಹಕಾರದಿಂದ 28 ಕ್ಷೇತ್ರಗಳಲ್ಲೂ ದೊಡ್ಡ ಅಂತರದಲ್ಲಿ ಗೆಲುವು ಸಿಗಲಿದೆ. ಇನ್ನು ರಾಷ್ಟ್ರೀಯ ನಾಯಕರ ಪ್ರವಾಸ ಆರಂಭವಾಗಲಿದೆ. ಅವರೆಲ್ಲರ ಆಗಮನದಿಂದ ಕಾರ್ಯಕರ್ತರ ಶಕ್ತಿ, ಉತ್ಸಾಹ ಹೆಚ್ಚಾಗಲಿದೆ ಎಂದು ಹೇಳಿದರು.

ನಮ್ಮ ಕ್ಷೇತ್ರದಲ್ಲಿ 32 ಲಕ್ಷ ಮತದಾರರು ಇದ್ದಾರೆ. 3,335 ಬೂತ್‌ಗಳಿವೆ. ಇಷ್ಟು ದೊಡ್ಡ ಕ್ಷೇತ್ರದಲ್ಲಿ ಪಕ್ಷ ನನಗೆ ಅವಕಾಶ ಮಾಡಿಕೊಟ್ಟಿದೆ. ಕಳೆದ ಚುನಾವಣೆಯಲ್ಲಿ ಸದಾನಂದಗೌಡರು ದೊಡ್ಡ ಅಂತರದಿಂದ ಗೆದ್ದಿದ್ದರು. ಈಗ ಬೈರತಿ ಬಸವರಾಜ್‌, ಗೋಪಾಲಯ್ಯ ಅವರಂತಹ ನಾಯಕರ ಆಗಮನವು ನಮಗೆ ಹೆಚ್ಚಿನ ಶಕ್ತಿ ನೀಡಿದೆ. ಜೆಡಿಎಸ್‌ ಪಕ್ಷವು ಎನ್‌ಡಿಎಗೆ ಸೇರಿರುವುದು ನಮ್ಮ ಬಲ ಹೆಚ್ಚಿಸಿದೆ. ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ನೋಡಲು ಜನ ಬಯಸಿದ್ದಾರೆ. ಮನೆ-ಮನೆಗೆ ತೆರಳಿ ಮೋದಿ ಸಾಧನೆಗಳನ್ನು ತಿಳಿಸಬೇಕು. ಮತದಾನದ ಪ್ರಮಾಣ ಹೆಚ್ಚಿಸುವ ಗುರಿ ಇದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸದಾನಂದಗೌಡರು ನಮ್ಮ ಜೊತೆ ಎಲ್ಲಾ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಚಾಮರಾಜನಗರ ಕ್ಷೇತ್ರಕ್ಕೆ ನಿಯೋಜನೆ ಮಾಡಿರುವುದರಂದ ಅವರು ಅಲ್ಲಿಗೆ ಹೋಗಿದ್ದಾರೆ. ಶಾಸಕ ಎಸ್.ಟಿ ಸೋಮಶೇಖರ್ ನಿರ್ಧಾರ ಇನ್ನೂ ತಿಳಿಸಿಲ್ಲ. ಅವರು ಬಿಜೆಪಿ ಶಾಸಕರು. ಹಾಗಾಗಿ ಬಿಜೆಪಿಗೆ ಕೆಲಸ ಮಾಡಬೇಕು ಎಂದು ಕೇಳುತ್ತೇನೆ. ಮನಸ್ಸು, ದೇಹ ಒಂದೇ ಕಡೆ ಇರಿಸಿಕೊಂಡು ಕೆಲಸ ಮಾಡಿ ಎನ್ನುತ್ತೇನೆ ಎಂದು ಹೇಳಿದರು.

ಶೋಭಾ ಕರಂದ್ಲಾಜೆ ಬಳಿ1 ಕೇಜಿ ಚಿನ್ನದ ಬಿಸ್ಕಟ್‌

ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ₹13.88 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ₹4.06 ಕೋಟಿ ಸಾಲವನ್ನು ಹೊಂದಿದ್ದಾರೆ. ಒಂದು ದ್ವಿಚಕ್ರ ವಾಹನ ಹೊರತುಪಡಿಸಿದರೆ ಯಾವುದೇ ವಾಹನಗಳಿಲ್ಲ. ₹9.23 ಕೋಟಿ ಮೌಲ್ಯದ ಚರಾಸ್ತಿ, ₹4.65 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಿದ್ದಾರೆ.ವಿವಿಧ ಬ್ಯಾಂಕ್‌ಗಳಲ್ಲಿ ₹62.47 ಲಕ್ಷ ಠೇವಣಿ ಹೊಂದಿದ್ದು, ₹1.71 ಲಕ್ಷ ನಗದು ಇದೆ. ₹68.40 ಲಕ್ಷ ಮೌಲ್ಯದ ಒಂದು ಕೇಜಿ ಚಿನ್ನದ ಬಿಸ್ಕಟ್‌, ₹40 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ.