ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ ದೇಶದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಕ್ರಮ ಖಂಡಿಸಿ ದಾವಣಗೆರೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದವು.
ಬುಧವಾರ ರಾತ್ರಿ ನಗರದ ಹದಡಿ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದವರೆಗೆ ಪ್ರತಿಭಟನೆ ನಡೆಸಿದ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಪ್ಪಿತಸ್ಥನ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ.ಉಮೇಶ್ ಮಾತನಾಡಿ, ದೇಶದಲ್ಲಿ ಮನುವಾದಿಗಳ ಅಟ್ಟಹಾಸ ಮಿತಿಮೀರಿದೆ. ಈ ದೇಶದ ಸರ್ವೋಚ್ಛ ನ್ಯಾಯಾಧೀಶರ ಮೇಲೆ ವಕೀಲ ಶೂ ಎಸೆದಿರುವುದು ಖಂಡನೀಯ. ಇಂತಹ ಘಟನೆಗಳನ್ನು ದೇಶದ ಯಾವುದೇ ಭಾಗದಲ್ಲಿ ನಡೆಯದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ತಪ್ಪಿತಸ್ಥ ವಕೀಲನ ವಿರುದ್ಧ ಅತ್ಯಂತ ಕಠಿಣ ಕ್ರಮ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕೂಡಲೇ ಸದಸ್ಯತ್ವ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಬ್ಯಾಂಕ್ ಉದ್ಯೋಗಿ, ಕಾರ್ಮಿಕ ಮುಖಂಡ ರಾಘವೇಂದ್ರ ಕೆ. ನಾಯರಿ ಮಾತನಾಡಿ, ಸುಪ್ರೀಂ ಕೋರ್ಟ್ ವಕೀಲರಾಗಿ ರಾಕೇಶ್ ಕಿಶೋರ್ ಸಿಜೆಐ ಮೇಲೆ ಶೂ ಎಸೆದಿದ್ದಾರೆ. ಈ ಘಟನೆ ಇಡೀ ದೇಶವೇ ತಲೆತಗ್ಗಿಸುವಂತಹ ಕೃತ್ಯ ಎಂದು ಹೇಳಿದರು.ಪ್ರತಿಭಟನೆಯಲ್ಲಿ ವಿಶ್ವನಾಥ್ ಬಿಲ್ವ, ಆರ್.ಮಂಜಪ್ಪ, ವಿ.ಲಕ್ಷ್ಮಣ, ಆವರಗೆರೆ ಚಂದ್ರು, ಮಧು ತೊಗಲೇರಿ, ಸುನೀತ್ ಕುಮಾರ್, ರಾಜು ಕರನಹಳ್ಳಿ, ಆನಂದ, ರಮೇಶ್ ಗೋಶಾಲೆ, ಸಿದ್ದೇಶ್ ಆವರಗೆರೆ, ದಾದಾಪೀರ್, ರಂಗಸ್ವಾಮಿ, ಮಂಜುಳ, ಕುಸುಮ, ಪವಿತ್ರಾ, ಸತೀಶ್ ಅರವಿಂದ್, ಟಿ.ಅಸ್ಗರ್, ಆದೀಲ್‌ಖಾನ್, ದಾದಾಪೀರ್ ಇತರರು ಇದ್ದರು.
- - --9ಕೆಡಿವಿಜಿ34:
ಸುಪ್ರೀಂ ಕೋರ್ಟ್ ಸಿಜೆಐ ಮೇಲೆ ಶೂ ಎಸೆತ ಕ್ರಮ ಖಂಡಿಸಿ ಪ್ರಗತಿಪರ ಸಂಘಟನೆಗಳಿಂದ ದಾವಣಗೆರೆಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.