ಶೂ ಎಸೆತ ಸಂವಿಧಾನ ಮೇಲೆ ನಡೆಸಿದ ದಾಳಿ

| Published : Oct 10 2025, 01:00 AM IST

ಸಾರಾಂಶ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯುವ ಪ್ರಯತ್ನ ಕೇವಲ ವ್ಯಕ್ತಿ ಮೇಲೆ ನಡೆದ ಘಟನೆಯಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ದಾಳಿಗೆ ಸಾಕ್ಷಿಯಾಗಿದ್ದು, ಕೂಡಲೇ ನ್ಯಾಯವಾದಿ ರಾಕೇಶ್ ಕಿಶೋರ್ ಅವರನ್ನು ಬಾರ್ ಕೌನ್ಸಿಲ್‌ನಿಂದ ರದ್ದುಪಡಿಸಿ ಕಾನೂನಿನಡಿ ಬಂಧಿಸಬೇಕು ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಮರೇನಹಳ್ಳಿ ಟಿ. ಬಸವರಾಜ್ ಒತ್ತಾಯಿಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

- ಜಗಳೂರು ತಾಲೂಕು ವಕೀಲರ ಸಂಘ ಅಧ್ಯಕ್ಷ ಟಿ.ಬಸವರಾಜ್ ಆರೋಪ

- - -

ಕನ್ನಡಪ್ರಭ ವಾರ್ತೆ ಜಗಳೂರು

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯುವ ಪ್ರಯತ್ನ ಕೇವಲ ವ್ಯಕ್ತಿ ಮೇಲೆ ನಡೆದ ಘಟನೆಯಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ದಾಳಿಗೆ ಸಾಕ್ಷಿಯಾಗಿದ್ದು, ಕೂಡಲೇ ನ್ಯಾಯವಾದಿ ರಾಕೇಶ್ ಕಿಶೋರ್ ಅವರನ್ನು ಬಾರ್ ಕೌನ್ಸಿಲ್‌ನಿಂದ ರದ್ದುಪಡಿಸಿ ಕಾನೂನಿನಡಿ ಬಂಧಿಸಬೇಕು ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಮರೇನಹಳ್ಳಿ ಟಿ. ಬಸವರಾಜ್ ಒತ್ತಾಯಿಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸರ್ವೋಚ್ಛ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ನ್ಯಾಯವಾದಿ ರಾಕೇಶ್ ಕಿಶೋರ್ ಕೋರ್ಟ್‌ ಕಲಾಪದ ವೇಳೆ ಶೂ ಎಸೆಯಲು ಪ್ರಯತ್ನಿಸಿದ್ದಾರೆ. ಇದು ದಲಿತ ವ್ಯಕ್ತಿ ಉನ್ನತ ಹುದ್ದೆ ಅಲಂಕರಿಸಿರುವುದನ್ನು ಸಹಿಸದೇ ಜಾತಿ ಆಧಾರಿತ ಅಸಹನೆ ಮತ್ತು ದ್ವೇಷ ಸ್ಪಷ್ಟಪಡಿಸುತ್ತದೆ ಎಂದರು.

ಹಿರಿಯ ವಕೀಲ ಡಿ.ಶ್ರೀನಿವಾಸ್ ಮಾತನಾಡಿ, ನ್ಯಾಯಮೂರ್ತಿ ಬಿ.ಆರ್.ಗವಾಯಿ ಪ್ರಜಾಪ್ರಭುತ್ವ ಆಶಯಗಳ ಪ್ರತಿಪಾದಕರಾಗಿದ್ದು, ಅವರ ಮೇಲೆ ಶೂ ಎಸೆಯುವ ಪ್ರಯತ್ನದ ಘಟನೆಗೂ ದೇಶದಲ್ಲಿ ಮೂರು ಸಾವಿರ ವರ್ಷಗಳ ಇತಿಹಾಸದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಆಚರಿಸುತ್ತಿದ್ದ ಮನುಸ್ಮೃತಿ ಗೂ ಹಿನ್ನೆಲೆಯಿದೆ. ಮನುವಾದಿಗಳು ದಲಿತರು, ಅಸ್ಪೃಶ್ಯರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣುತ್ತಿದ್ದರು. ಇದಕ್ಕೆ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರು ಚುಚ್ಚುಮದ್ದನ್ನು ನೀಡಿದ್ದಾರೆ. ಸಂವಿಧಾನದಡಿ ಎಲ್ಲ ವರ್ಗದವರಿಗೂ ಸಿಗುತ್ತಿರುವ ಸಮಾನತೆ, ಸಾಮಾಜಿಕ ನ್ಯಾಯ ದಮನಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮನವಿ ಸ್ವೀಕರಿಸಿದರು. ಸಂಘದ ಕಾರ್ಯದರ್ಶಿ ಪರಶುರಾಮ್, ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ಕೆ.ವಿ. ರುದ್ರೇಶ್, ಭೂಪತಿ, ಮಹಾಂತೇಶ್, ಆರ್.ಓಬಳೇಶ್, ಸಣ್ಣ ಓಬಯ್ಯ, ತಿಪ್ಪೇಸ್ವಾಮಿ, ನಾಗಪ್ಪ, ಸುನಿಲ್, ನಾಗೇಶ್, ಅಂಜಿನಪ್ಪ, ತಿಪ್ಪೇಸ್ವಾಮಿ ಇತರರು ಭಾಗವಹಿಸಿದ್ದರು.

- - - -09ಜೆಜಿಎಲ್1:

ಸಿಜೆಐ ಮೇಲೆ ಶೂ ಎಸೆದ ವ್ಯಕ್ತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಗಳೂರು ತಾಲೂಕು ವಕೀಲರ ಸಂಘದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.