ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಆ. 15ರಂದು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹನೂರು
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಆ. 15ರಂದು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.ಈ ಪ್ರಕರಣದ ತನಿಖೆಯನ್ನು ಪೋಲಿಸ್ ಇಲಾಖೆ ಹಾಗೂ ಮಾಜಿ ಸ್ಟೇಟ್ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಸಿಐಡಿಗೆ ಶೂಟ್‌ಔಟ್ ಪ್ರಕರಣವನ್ನು ವಹಿಸಿದ ಬೆನ್ನಲ್ಲೇ, ಸಿಐಡಿ ಅಧಿಕಾರಿಗಳು ಹನೂರಿನಲ್ಲಿ ಬೀಡು ಬಿಟ್ಟಿದ್ದಾರೆ. ತನಿಖೆಗಾಗಿ ಈಗಾಗಲೇ ನಾಲ್ಕು ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ (ಐಬಿ) ತಾತ್ಕಾಲಿಕ ಕಚೇರಿ ತೆರೆದು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಪ್ರಮುಖ ಭಾಗವಾಗಿ ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವಿಚಾರಣೆ ಮಂಗಳವಾರ ನಡೆದಿದೆ. ಎಪಿಸಿ ಕಳ್ಳ ಬೇಟೆ ತಡೆ ಶಿಬಿರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಚರ್ಸ್, ಫಾರೆಸ್ಟ್ ಗಾರ್ಡ್ ಹಾಗೂ ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸರ್ ಸೇರಿದಂತೆ ಎಲ್ಲ ಸಿಬ್ಬಂದಿಯ ಹೇಳಿಕೆಗಳನ್ನು ಸಿಐಡಿ ಅಧಿಕಾರಿಗಳು ದಾಖಲಿಸಿಕೊಳ್ಳುತ್ತಿದ್ದಾರೆ.ಇದಕ್ಕೂ ಮೊದಲು ಸಿಐಡಿ ತಂಡ ಶೂಟೌಟ್ ನಡೆದ ಕರಡಿಕಲ್ಲು ಒಡ್ಡು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಸಂಪೂರ್ಣ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಗುಂಡು ಹಾರಿಸಿದ ದೂರ, ಗುಂಡು ಹಾರಿಸಲು ಕಾರಣ, ಅದು ಆತ್ಮರಕ್ಷಣೆಗಾಗಿ ನಡೆದಿದೆಯೇ ಅಥವಾ ಉದ್ದೇಶಪೂರ್ವಕವಾಗಿದೆಯೇ ಮೂವರನ್ನು ಬಲಿ ಪಡೆದಿದ್ದಾರೆಯೇ ಎಂಬುದರ ಬಗ್ಗೆ ಸಿಐಡಿ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದೆ. ಮರಣೋತ್ತರ ವರದಿ, ಎಫ್‌ಎಸ್‌ಎಲ್ ವರದಿ, ಘಟನಾ ಸ್ಥಳದಲ್ಲಿದ್ದ ಬಂದೂಕು, ಗುಂಡುಗಳ ಇನ್ನಿತರ ಪರಿಕರಗಳ ಬಗ್ಗೆ ಬ್ಯಾಲಿಸ್ಟಿಕ್ ವರದಿ ಆಧರಿಸಿ ತನಿಖೆ ನಡೆಯುತ್ತಿದೆ.
ಅರಣ್ಯ ಇಲಾಖೆ ನಡೆಸಿದ ಶೂಟೌಟ್ ನಿಂದ ಮೂವರು ಬಲಿಯಾದ ಕುಟುಂಬಸ್ಥರ ಹೇಳಿಕೆ, ಅರಣ್ಯ ಇಲಾಖೆ ನೀಡಿರುವ ದೂರು, ಕೊಳ್ಳೇಗಾಲ, ಹನೂರು ಮತ್ತು ರಾಮಾಪುರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನೂ ಆಧರಿಸಿ ಸಿಐಡಿ ತನಿಖೆಯನ್ನು ಎಲ್ಲಾ ಆಯಾಮಗಳಲ್ಲಿ ನಡೆಸುತ್ತಿದ್ದು, ಶೀಘ್ರದಲ್ಲೇ ಸತ್ಯಾಂಶ ಹೊರಬರುವ ನಿರೀಕ್ಷೆಯಿದೆ.