ಮಳಿಗೆ ಮೇಲೆ ದಾಳಿ, 8ಕ್ಕೂ ಅಧಿಕ ಅಂಗಡಿಗಳಿಗೆ ಬೀಗ

| Published : Jul 04 2024, 01:13 AM IST

ಸಾರಾಂಶ

ತಂಬಾಕು ಮಾರಾಟ ಹಾಗೂ ಟೆಸ್ಟಿಂಗ್ ಪೌಡರ್‌ನ ಹುಡುಕಾಟ ನಡೆಸಿ ಸ್ವಚ್ಛತೆ ಪರಿಶೀಲಿಸಿದರು

ಗಜೇಂದ್ರಗಡ: ಪಟ್ಟಣದಲ್ಲಿ ಪುರಸಭೆಯಿಂದ ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ನಡೆಸುವ ಮಳಿಗೆಗಳು, ಟೆಸ್ಟಿಂಗ್ ಪೌಡರ್ ಬಳಕೆ ಹಾಗೂ ಪ್ಲಾಸ್ಟಿಕ್, ತಂಬಾಕು ಉತ್ಪನಗಳ ಮಾರಾಟ ಅಂಗಡಿಗಳ ಮೇಲೆ ತಹಸೀಲ್ದಾರ್ ಕಿರಣಕುಮಾರ ನೇತೃತ್ವದಲ್ಲಿ ದಾಳಿ ನಡೆಸಿ ೮ಕ್ಕೂ ಅಧಿಕ ಅಂಗಡಿಗಳಿಗೆ ಬೀಗ ಜಡಿದ ಘಟನೆ ಬುಧವಾರ ನಡೆದಿದೆ.ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿನ ಎಗ್‌ರೈಸ್ ಅಂಗಡಿ, ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶಿವಾಜಿ ವೃತ್ತದವರೆಗೆ, ಕುಷ್ಟಗಿ ರಸ್ತೆಯಲ್ಲಿ ಎಸ್‌ಬಿಐ ಬ್ಯಾಂಕ್‌ವರೆಗೆ ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಕಿರಾಣಿ ಅಂಗಡಿ ಮತ್ತು ಹೊಟೇಲ್‌ಗಳಿಗೆ ದಾಳಿ ನಡೆಸಿ ಪ್ಲಾಸ್ಟಿಕ್, ತಂಬಾಕು ಮಾರಾಟ ಹಾಗೂ ಟೆಸ್ಟಿಂಗ್ ಪೌಡರ್‌ನ ಹುಡುಕಾಟ ನಡೆಸಿ ಸ್ವಚ್ಛತೆ ಪರಿಶೀಲಿಸಿದರು.

ಬಳಿಕ ಅಂಗಡಿ ನಡೆಸಲು ಪಡೆದ ಪರವಾನಗಿ ಪತ್ರವನ್ನು ಅಂಗಡಿ ಮಾಲಿಕರಿಗೆ ಕೇಳಿದಾಗ ಅರ್ಜಿ ಹಾಕಿದ್ದೇವೆ, ಈ ವರ್ಷದ್ದು ತಗೆದುಕೊಂಡಿಲ್ಲ ಎನ್ನುವ ಉತ್ತರಗಳು ಕೇಳಿ ಬಂದವು. ಹೀಗಾಗಿ ತಹಸೀಲ್ದಾರ್ ಅಂಗಡಿಗಳನ್ನು ಈಗ ಮುಚ್ಚಿ, ಮುಂದೆ ನೋಡೋಣ ಎಂದು ಅಧಿಕಾರಿಗಳಿಗೆ ಆದೇಶಿಸಿದರು. ಕೆಲ ಅಂಗಡಿಕಾರರು ಇಷ್ಟೊಂದು ಅಡುಗೆ ಮಾಡಿದ್ದೇವೆ ಏನು ಮಾಡಬೇಕು ಎಂದು ಅಳಲು ತೋಡಿಕೊಂಡರು. ಬಳಿಕ ಎಲ್ಲ ಅಂಗಡಿಕಾರರು ಮಧ್ಯಾಹ್ನ ತಹಸೀಲ್ದಾರ್ ಕಚೇರಿಗೆ ಬಂದು ಮನವಿ ಮಾಡಿದ ಬಳಿಕ ಟೆಸ್ಟಿಂಗ್ ಪೌಡರ್ ಬಳಸಬಾರದು ಹಾಗೂ ಪರವಾನಗಿ ಪಡೆದು ಅಂಗಡಿ ಆರಂಭಿಸಬೇಕು ಎಂದು ತಹಸೀಲ್ದಾರ್ ಅಂಗಡಿಕಾರರಿಗೆ ಸೂಚಿಸಿದ ಬಳಿಕ ಎಂದಿನಂತೆ ಅಂಗಡಿಗಳು ವ್ಯಾಪಾರ ವಹಿವಾಟು ನಡೆಯಿತು.

ಪಟ್ಟಣದಲ್ಲಿ ಪ್ರಮುಖ ಹೊಟೇಲ್ ಸೇರಿ ಬೀದಿ ಬದಿಯಲ್ಲಿನ ಗೂಡಂಗಡಿ ಹಾಗೂ ಎಗ್ ರೈಸ್ ಅಂಗಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಬಳಕೆ ಮಾಡಲಾಗುತ್ತಿದೆ.ಪರಿಣಾಮ ಪಟ್ಟಣದ ಕಿರಾಣಿ ಅಂಗಡಿ ಹಾಗೂ ಹೊಟೇಲ್‌ಗಳಲ್ಲಿ ಬೇಕಾಬಿಟ್ಟಿಯಾಗಿ ಬಳಸುತ್ತಿರುವ ಟೆಸ್ಟಿಂಗ್ ಪೌಡರ್‌ನಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತಿದ್ದು, ಟೆಸ್ಟಿಂಗ್ ಪೌಡರ್ ಮಾರಾಟಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿಗಳು ಪುರಸಭೆಯಲ್ಲಿ ನಡೆಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮನವಿ ಮಾಡಲಾಗಿತ್ತು.ಇತ್ತ ಪುರಸಭೆಯಿಂದ ಪರವಾನಗಿ ಪಡೆಯದ ಪಟ್ಟಣದಲ್ಲಿರುವ ಅಂಗಡಿಗಳಿಗೆ ಪರವಾನಗಿ ಕಡ್ಡಾಯ ಮಾಡುವುದರ ಜತೆಗೆ ಪ್ಲಾಸ್ಟಿಕ್ ಮತ್ತು ತಂಬಾಕು ಉತ್ಪನಗಳಿಗೆ ಕಡಿವಾಣ ಹಾಕದಿದ್ದರೆ ಯುವ ಸಮೂಹ ಹಾಗೂ ಮುಂದಿನ ಪೀಳಿಗೆ ಸಂಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ಕಾನೂನಿನ ಭಯವಿಲ್ಲದೆ ನಿಮಯಗಳನ್ನು ಗಾಳಿಗೆ ತೂರುತ್ತಿರುವವರ ವಿರುದ್ಧ ತಾಲೂಕಾಡಳಿತ ಶಿಸ್ತು ಕ್ರಮಕ್ಕೆ ಮುಂದಾಬೇಕು ಎಂಬ ಆಗ್ರಹಗಳು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿ ಬಂದಿದ್ದವು.

ಪಟ್ಟಣದ ತಹಸೀಲ್ದಾರ್ ಕಚೇರಿಯ ಎದುರಿನ ಅಂಗಡಿಗಳಿಂದ ಅಧಿಕಾರಿಗಳು ಹೊಟೇಲ್ ಹಾಗೂ ಅಂಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್, ತಂಬಾಕು ಉತ್ಪನಗಳು ಹಾಗೂ ಟೆಸ್ಟಿಂಗ್ ಪೌಡರ್‌ನ ಹುಡುಕಾಟ ನಡೆಸುತ್ತಿದ್ದಾರೆ ಎನ್ನುವ ವಿಷಯ ಕಾಳ್ಗಿಚ್ಚನಂತೆ ಪಟ್ಟಣದಲ್ಲಿ ಕ್ಷಣಾರ್ಧದಲ್ಲಿ ಹರಡಿದ ಪರಿಣಾಮ ಜೋಡು ರಸ್ತೆ, ಕುಷ್ಟಗಿ ರಸ್ತೆ, ರೋಣ ರಸ್ತೆ ಹಾಗೂ ಬಸ್ ನಿಲ್ದಾಣದ ರಸ್ತೆಯಲ್ಲಿನ ಕೆಲ ಅಂಗಡಿಗಳು ಮತ್ತು ಹೊಟೇಲ್ ಹಾಗೂ ಬೀಡಿ ಅಂಗಡಿಗಳಿಗೆ ಬಂದ್ ಮಾಡಿದ್ದು ಕಂಡು ಬಂದಿತು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಅಧಿಕಾರಿಗಳಾದ ಶಿವಕುಮಾರ ಇಲಾಳ, ರಾಘವೇಂದ್ರ ಮಂತಾ, ಉಮೇಶ ಲಮಾಣಿ, ಉಮೇಶ ಅರಳಿಗಿಡದ, ಎನ್.ಎ.ಸಾಂಗ್ಲೀಕರ, ಪ್ರಕಾಶ ಭೂಸನರಮಠ, ಸುರೇಶ ಮಂತಾ ಸೇರಿದಂತೆ ಇತರರು ಇದ್ದರು.