ಸಾರಾಂಶ
ಗೋಕಾಕ : ದಿ.ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ್ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಬೆಳಗಾವಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ಧ ಗೋಕಾಕ ಮತಕ್ಷೇತ್ರದ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು. ಸುರೇಶ ಅಂಗಡಿ ಹಾಗೂ ಜಗದೀಶ ಶೆಟ್ಟರ್ ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಜಿಲ್ಲೆಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.
ಭಾರತೀಯ ಜನತಾ ಪಕ್ಷ ನನಗೆ ಎಲ್ಲ ಸ್ಥಾನಮಾನ ನೀಡಿ ಗೋಕಾಕ ಮತಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ಸಹಕಾರ ನೀಡಿದೆ. ಕೇಂದ್ರದ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟಿದ್ದು, ಅದನ್ನು ಉಳಿಸಲು ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರನ್ನು ಗೆಲ್ಲಿಸಬೇಕು. ಅವರ ಜಯದಿಂದ ನನಗೆ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೂ ಹೆಚ್ಚಿನ ಶಕ್ತಿ ದೊರೆತು ಕ್ಷೇತ್ರದ ಮತ್ತು ಜಿಲ್ಲೆಯ ಅಭಿವೃದ್ಧಿ ಕಾರ್ಯ ಮಾಡಲು ಸಹಕಾರಿಯಾಗುತ್ತದೆ. ನಾನು ಜಾತಿ ರಾಜಕಾರಣ ಮಾಡದೆ ಬಸವತತ್ವದಲ್ಲಿ ವಿಶ್ವಾಸವಿಟ್ಟು ಜನರ ಸೇವೆ ಮಾಡುತ್ತಿದ್ದೇನೆ. ಜನಪ್ರತಿನಿಧಿಗಳಾಗಲು ಎಲ್ಲ ಸಮುದಾಯಗಳ ಆಶೀರ್ವಾದ ಅತಿಅವಶ್ಯ. ಜಾತಿ ರಾಜಕಾರಣಕ್ಕೆ ಮಹತ್ವ ನೀಡದೆ ಬಲಿಷ್ಠ ಭಾರತ ನಿರ್ಮಾಣಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಅಭ್ಯರ್ಥಿ ಬೆಂಬಲಿಸಲು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಮಾತನಾಡಿ, ಕಾಂಗ್ರೆಸ್ ನಾಟಕೀಯ ಹಿಂದುತ್ವ ತೋರಿಸದೇ ಬಿಜೆಪಿ ಸರ್ಕಾರ ಜಾರಿಗೆ ತಂದ ಮತಾಂತರ ಕಾಯ್ದೆ ಹಾಗೂ ಗೋವು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಮೂಲಕ ಪ್ರಾಮಾಣಿಕ ಹಿಂದುತ್ವ ತೋರಿಸುವಂತೆ ಸವಾಲು ಹಾಕಿದ ಅವರು, ಮೋದಿಯವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡುವ 141 ಕೋಟಿ ಜನರ ಕನಸು ನನಸು ಮಾಡುವ ಚುನಾವಣೆ ಇದಾಗಿದ್ದು, ಅದನ್ನು ನನಸಾಗಿಸಲು ಅವರ ಪ್ರತಿನಿಧಿಯಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ, ಎರಡು ಬಾರಿ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ವಿರೋಧಿಗಳ ಟೀಕೆಗಳಿಗೆ ಮಹತ್ವ ನೀಡಬೇಡಿ. ಸುರೇಶ ಅಂಗಡಿಯವರ ಯೋಜನೆಗಳನ್ನು ಪೂರ್ಣಗೊಳಿಸಲು ನನಗೆ ಆಶೀರ್ವದಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ, ಚುನಾವಣೆ ಸಂಚಾಲಕ ಸಂಜಯ ಪಾಟೀಲ ಮಾತನಾಡಿದರು. ವೇದಿಕೆಯ ಮೇಲೆ ಸಂಸದೆ ಮಂಗಲಾ ಅಂಗಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ ಬೆನಕೆ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ, ಗೋಕಾಕ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಬಿಜೆಪಿ ಮುಖಂಡರುಗಳಾದ ಎಮ್ ಬಿ ಜಿರಲಿ, ತುಬಾಕಿ, ಲಕ್ಷ್ಮಣ ತಪಸಿ, ಕೆ ವಿ ಪಾಟೀಲ, ಶಾಮಾನಂದ ಪೂಜೇರಿ, ಮುತ್ತೆಪ್ಪ ಮನ್ನಾಪೂರ, ಶಕೀಲ ಧಾರವಾಡಕರ, ಯುವರಾಜ ಜಾಧವ, ಶಿವಾನಂದ ಪಾಟೀಲ, ಪುಂಡಲೀಕ ವಣ್ಣೂರ ಇದ್ದರು. ರಾಜೇಶ್ವರಿ ಒಡೆಯರ ಒಡೆಯರ ಸ್ವಾಗತಿಸಿದರು. ಬಾಳೇಶ ಗಿಡ್ಡನವರ ವಂದಿಸಿದರು.
ಭಾರತ ವಿಶ್ವಗುರುವಾಗಲು ಮೋದಿ ಬೆಂಬಲಿಸಿ: ನರೇಂದ್ರ ಮೋದಿಯವರ ದಕ್ಷ ಆಡಳಿತದಿಂದ ಜಗತ್ತಿನ ರಾಜಕಾರಣ ನಿರ್ಧರಿಸುವ ಶಕ್ತಿ ದೊರೆತು ಮೋದಿಯವರು ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿ ಬಾಂಬ್ ಸಂಸ್ಕೃತಿ ಮರೆಯಾಗಿ ಜನತೆ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ನಿಮ್ಮ ಒಂದು ಮತ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ ಇನ್ನೂ ದೇಶವನ್ನು ಬಲಿಷ್ಠಗೊಳಿಸಿ ವಿಶ್ವಗುರುವನ್ನಾಗಿಸುತ್ತದೆ. ತಮ್ಮ ಮತವನ್ನು ಬಿಜೆಪಿ ಅಭ್ಯರ್ಥಿಗೆ ನೀಡುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಮನವಿ ಮಾಡಿದರು.