ಪ್ರಮೋದ ಗಡಕರ
ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿಯ ನೆಹರು ನಗರದಲ್ಲಿ ನಿರ್ಮಾಣವಾಗಬೇಕಿದ್ದ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ಕನಸು 8 ವರ್ಷ ಕಳೆದರೂ ಮುಂದಕ್ಕೆ ಸಾಗದೇ ಅರ್ಧಕ್ಕೇ ನಿಂತಿದೆ. ಬೆಳಗಾವಿ ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿರುವ ಈ ಯೋಜನೆಯೂ ಅನುದಾನದ ಕೊರತೆಯಿಂದ ನನೆಗುದಿಗೆ ಬಿದ್ದಿದೆ.
ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಖಾಸಗಿ ಮಾರುಕಟ್ಟೆಯಲ್ಲಿನ ಜನದಟ್ಟಣೆಯನ್ನು ಕಡಿಮೆ ಮಾಡಿ, ವ್ಯಾಪಾರಿಗಳಿಗೆ ಸುಸಜ್ಜಿತ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಮಹಾನಗರ ಪಾಲಿಕೆ ಕಳೆದ 2017ರಲ್ಲಿ ನೆಹರು ನಗರದಲ್ಲಿ 2600 ಚದರ ಮೀಟರ್ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಕಾಮಗಾರಿ ಆರಂಭಿಸಿತ್ತು. ಅಂದಿನ ಅಂದಾಜು ವೆಚ್ಚ ₹10 ಕೋಟಿ ಆಗಿತ್ತು. ಬೇಸ್‌ಮೆಂಟ್, ನೆಲಮಹಡಿ, ಮೊದಲ ಮಹಡಿ ಸೇರಿ 100 ಮಳಿಗೆಗಳ ಯೋಜನೆಯನ್ನು ರೂಪಿಸಲಾಗಿತ್ತು. ಅಲ್ಲದೇ, 50 ಬೈಕ್, 40 ಕಾರ್ ಪಾರ್ಕಿಂಗ್, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕಟ್ಟಡ ಮಾತ್ರ 8 ವರ್ಷಗಳು ಕಳೆದರೂ ಇನ್ನುವರೆಗೂ ಪೂರ್ಣವಾಗಿಲ್ಲ ಎನ್ನುವುದೇ ಬೆಳಗಾವಿ ಜನರ ಬೇಸರ.ಅರ್ಧ ಕಟ್ಟಡ, ಪೂರ್ಣ ನಷ್ಟ: ಕಾಂಪ್ಲೆಕ್ಸ್ ನಿರ್ಮಾಣ ಕಾಮಗಾರಿ ಆರಂಭವಾಗಿ 8 ವರ್ಷ ಕಳೆದರೂ ಬೇಸ್‌ಮೆಂಟ್, ನೆಲಮಹಡಿ, ಮೊದಲ ಮಹಡಿ ಅರ್ಧದಷ್ಟು ಮಾತ್ರ ನಿರ್ಮಾಣವಾಗಿದೆ. ನಿವೇಶನ ಬದಲಾವಣೆ, ಕೋವಿಡ್ ಲಾಕ್‌ಡೌನ್ ನಂತರ ಇದೀಗ ಕಾಮಗಾರಿಗೆ ಅನುದಾನದ ಕೊರತೆ ಕಾಡುತ್ತಿದೆ. ಈವರೆಗೆ ₹5.36 ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ. ಆದರೆ, ಕಾಮಗಾರಿ ಮುಗಿಸಲು ಇನ್ನೂ ₹ 3,4 ಕೋಟಿ ಬೇಕು ಎಂದು ಹೇಳಲಾಗುತ್ತಿದೆ. ಆದರೆ, ಬೆಳಗಾವಿ ಮಹಾನಗರ ಪಾಲಿಕೆಯ ಖಜಾನೆ ಬರಿದಾಗಿರುವುದರಿಂದ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇಲ್ಲ.ಅಕ್ರಮ ಚಟುವಟಿಕೆಗಳ ತಾಣ:ವ್ಯಾಪಾರಿಗಳಿಗೆ, ಗ್ರಾಹಕರಿಗೆ ವರದಾನವಾಗಬೇಕಿದ್ದ ಈ ಶಾಪಿಂಗ್ ಕಾಂಪ್ಲೆಕ್ಸ್ ಈಗ ಅಕ್ರಮ ಚಟುವಟಿಕೆಯ ತಾಣವಾಗಿ ಪರಿಣಮಿಸಿದೆ. ಅರ್ಧ ನಿರ್ಮಿಸಲಾಗಿರುವ ಕಟ್ಟಡದೊಳಗೆ ಮದ್ಯದ ಬಾಟಲಿಗಳು ಬಿದ್ದಿವೆ. ಅಲ್ಲದೇ, ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ಕೂಡ ಜಾಸ್ತಿಯಾಗಿವೆ. ಸಮೀಪದಲ್ಲೇ ಎಪಿಎಂಸಿ ಪೊಲೀಸ್ ಠಾಣೆ ಇದ್ದರೂ, ಇಲ್ಲಿನ ಚಟುವಟಿಕೆಗಳನ್ನು ತಡೆಯುವವರು ಯಾರು ಇಲ್ಲದಂತಾಗಿದೆ. ಒಟ್ಟು ₹ 10 ಕೋಟಿ ಖರ್ಚು ಮಾಡಿದರೂ ಉಪಯೋಗವಿಲ್ಲದ ಈ ಕಟ್ಟಡವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸ್ಥಳೀಯ ವ್ಯಾಪಾರಿಗಳು, ಸಾರ್ವಜನಿಕರು ಒತ್ತಾಯಿಸಿದ್ದಾರೆ.ಸರ್ಕಾರದಿಂದ ಅನುದಾನ ಬಂದಿದ್ದು, ಶೀಘ್ರದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್‌ನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಶೀಘ್ರ ಟೆಂಡರ್ ಪ್ರಕ್ರಿಯೆ ಶುರು ಮಾಡಲಾಗುವುದು.
ಕಾರ್ತಿಕ.ಎಂ, ಮಹಾನಗರ ಪಾಲಿಕೆ ಆಯುಕ್ತರು.ಇಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ತೆರೆದರೆ ನೂರಾರು ಜನರಿಗೆ ಉದ್ಯೋಗ ಸಿಗುತ್ತದೆ. ಮಾರುಕಟ್ಟೆಯಲ್ಲಿ ದಟ್ಟಣೆ ಕಡಿಮೆಯಾಗಿ ರಸ್ತೆ ಸುರಕ್ಷಿತವಾಗುತ್ತದೆ. ಚುನಾವಣಾ ಭರವಸೆಯಂತೆ ಬಿಡದೆ, ಈಗಲೇ ಕಾಮಗಾರಿ ಆರಂಭಿಸಲಿ.
- ಆನಂದ ದೇಸಾಯಿ,
ಸ್ಥಳೀಯರು.