ಸಾರಾಂಶ
ಹಾವೇರಿ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ನಗರದ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿ ನಡೆಯಿತು.ಪಂಚಮಿ ಹಬ್ಬದ ಬಳಿಕ ಶ್ರಾವಣ ಮಾಸದಲ್ಲಿ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿ ಜೋರು ನಡೆಯಿತು. ವಾರದ ಸಂತೆ ದಿನವಾದ ಗುರುವಾರ ಪೂಜೆಗಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನತೆ ಮಗ್ನವಾಗಿದ್ದರು. ಹೂವು, ಹಣ್ಣು, ಬಾಳೆಕಂಬ, ತರಕಾರಿ ಖರೀದಿ ಜೋರಾಗಿ ನಡೆಯಿತು. ಸಿಹಿ ತಿಂಡಿಗಳು ಹಾಗೂ ಹೊಸ ಬಟ್ಟೆಗಳೊಂದಿಗೆ ವರಮಹಾಲಕ್ಷ್ಮಿಯನ್ನು ಮನೆಗೆ ಸ್ವಾಗತಿಸಲು ತಯಾರಿ ನಡೆಸಿದರು. ಹಣ್ಣು, ಹೂವು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರೂ ಮಾರುಕಟ್ಟೆಯಲ್ಲಿ ಹಬ್ಬಕ್ಕಾಗಿ ಹೂವು, ಹಣ್ಣುಗಳು ಹಾಗೂ ಬಾಳೆಕಂಬಗಳ ಮಾರಾಟ ಭರ್ಜರಿಯಾಗಿತ್ತು. ಬಾಳೆ ಹಣ್ಣು ಡಜನ್‌ಗೆ ₹50- ₹120, ಸೇಬು ಕೆಜಿಗೆ ₹150- ₹250, ಮೂಸಂಬಿ ಕೆಜಿಗೆ ₹100- ₹150, ದಾಳಿಂಬೆ ₹150- ₹180, ಕಿತ್ತಳೆ ₹200- ₹250, ಚಿಕ್ಕು ₹80, ಸೀತಾಫಲ ₹120, ಮಿಕ್ಸ್ ಹಣ್ಣು(ಐದು) ಕೆಜಿಗೆ ₹150-200, ಗುಲಾಬಿ ಹೂವು ಕೆಜಿಗೆ ₹150- ₹200, ಸುಗಂಧರಾಜ ₹200- ₹250, ಸೇವಂತಿ ₹180- ₹200, ಕಾಕಡಾ ಮಲ್ಲಿಗೆ ಒಂದು ಮಾರಿಗೆ ₹60- ₹80, ಚೆಂಡು ಹೂವು ಕೆಜಿಗೆ ₹30- ₹40, ಬಾಳೆ ಕಂಬ ಒಂದು ಜೊತೆಗೆ ₹40ಕ್ಕೆ ಮಾರಾಟವಾಗುತ್ತಿವೆ. ಬೆಲೆ ಏರಿಕೆಯಾಗಿದ್ದರಿಂದ ಸಾರ್ವಜನಿಕರು ವ್ಯಾಪಾರಿಗಳೊಂದಿಗೆ ಚೌಕಾಸಿ ನಡೆಸಿ ಖರೀದಿಸುವ ದೃಶ್ಯ ಕಂಡುಬಂತು. ವರಮಹಾಲಕ್ಷ್ಮಿ ಹಬ್ಬ ಆಚರಣೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಸೀರೆ ಸೇರಿದಂತೆ ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿದ್ದು, ಪ್ರತಿಯೊಂದು ಅಂಗಡಿಗಳು ಜನದಟ್ಟಣೆಯಿಂದ ಕೂಡಿದ್ದವು. ಲಕ್ಷ್ಮಿ ಪೂಜೆಗಾಗಿ ಸೀರೆ ಖರೀದಿಸುವ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳಲ್ಲಿ ಜನರು ಹೆಚ್ಚಾಗಿ ಕಂಡುಬಂದರು.ಪೂಜಾ ಮುನ್ನಾದಿನವೇ ಎಲ್ಲ ವಸ್ತುಗಳನ್ನು ಜನರು ಖರೀದಿಸಲು ಮಾರುಕಟ್ಟೆಗೆ ಆಗಮಿಸಿದ್ದರಿಂದ ನಗರದ ಎಂ.ಜಿ. ರೋಡ್, ಎಲ್‌ಬಿಎಸ್ ಮಾರುಕಟ್ಟೆಯಲ್ಲಿ ವಾಹನಗಳ ಸಂಚಾರ ಹೆಚ್ಚಳವಾಗಿತ್ತು.