ದೀಪಾವಳಿ ಹಬ್ಬಕ್ಕೆ ಖರೀದಿ ಭರಾಟೆ ಜೋರು

| Published : Oct 20 2025, 01:04 AM IST

ಸಾರಾಂಶ

ರಾಣಿಬೆನ್ನೂರು ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಜನತೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಹೊಸಬಟ್ಟೆ, ಹಬ್ಬದ ಪೂಜೆಗಾಗಿ ವಿವಿಧ ಸಾಮಗ್ರಿ ಖರೀದಿ ಜೋರಾಗಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ.

ರಾಣಿಬೆನ್ನೂರು: ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಜನತೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಹೊಸಬಟ್ಟೆ, ಹಬ್ಬದ ಪೂಜೆಗಾಗಿ ವಿವಿಧ ಸಾಮಗ್ರಿ ಖರೀದಿ ಜೋರಾಗಿದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ.ನಗರದ ಮಾರುಕಟ್ಟೆಯಲ್ಲಿ ಭಾನುವಾರ ಹಬ್ಬಕ್ಕಾಗಿ ಹೊಸ ಬಟ್ಟೆ, ಹಬ್ಬದ ಪೂಜೆಗಾಗಿ ವಿವಿಧ ಸಾಮಗ್ರಿ ಖರೀದಿ ಜೋರಾಗಿದ್ದು, ಹಬ್ಬದ ಸಂಭ್ರಮ ಕಂಡು ಬಂದಿತು. ಹಬ್ಬದ ಮೆರುಗು ನೀಡಲು ಬಗೆಬಗೆಯ ಆಕಾಶ ಬುಟ್ಟಿಗಳ ಖರೀದಿ ಜೋರಾಗಿದ್ದು, ಸಾಂಪ್ರದಾಯಿಕ ಮಣ್ಣಿನ ಹಣತೆಗೂ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ. ಮಾರುಕಟ್ಟೆಯಲ್ಲಿ ಬಣ್ಣ, ಬಣ್ಣದ ವಿಶಿಷ್ಟ ಆಕಾರದ ಆಕಾಶಬುಟ್ಟಿಗಳ ಸಾಲುಗಳು ಪ್ರಮುಖ ಆಕರ್ಷಣೆಯಾಗಿವೆ. ವೈವಿಧ್ಯಮಯ ಆಕಾಶಬುಟ್ಟಿಗಳನ್ನು ಖರೀದಿಸುವ ಭರಾಟೆ ಜೋರಾಗಿ ಸಾಗಿದೆ.ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದ್ದು ಗ್ರಾಹಕರಿಗೆ ಬಿಸಿಮುಟ್ಟಿಸಿದೆ. ಸೇಬುಹಣ್ಣು 1ಕೆಜಿಗೆ 120-150 ರು., ದ್ರಾಕ್ಷಿ ಕೆಜಿಗೆ 200 ರು., ದಾಳಿಂಬೆ ಕೆಜಿಗೆ 150 ರು,, ಮೊಸಂಬಿ ಕೆಜಿಗೆ 80 ರು, ಕಿತ್ತಲೆ ಕೆಜಿಗೆ 60 ರು, ಬಾಳೆಹಣ್ಣು ಒಂದು ಡಜನ್‌ಗೆ 50ರಿಂದ 60 ರು. ದರವಿತ್ತು. ಇನ್ನು ಹೂವಿನ ದರ ಗಗನಮುಖಿಯಾಗಿದ್ದು, ಸೇವಂತಿ, ಕಾಕಡ, ಮಲ್ಲಿಗೆ, ಕನಕಾಂಬರ ಗುಲಾಬಿ, ದುಂಡು ಸೇವಂತಿ ಸೇರಿ ಹಲವು ಹೂಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಎರಡು, ಮೂರು ಪಟ್ಟು ಹೆಚ್ಚಳವಾಗಿದೆ. ಬಟನ್ ಗುಲಾಬಿ ಕೆಜಿಗೆ 350-400 ರು, ಸೇವಂತಿಗೆ ಕೆಜಿಗೆ 400 ರು, ಚೆಂಡು ಹೂ ಕೆಜಿಗೆ 100 ರು, ದುಂಡು ಸೇವಂತಿಗೆ ಕೆಜಿಗೆ 300 ರು, ಗುಲಾಬಿ ಒಂದು ಕಟ್ಟಿಗೆ 150 ರು, ಕಾಕಡಾ ಮಲ್ಲಿಗೆ ಒಂದು ಮಾರಿಗೆ 80 ರು, ಕನಕಾಂಬರ ಒಂದು ಮಾರಿಗೆ 120 ರು, ಸೇವಂತಿ ಒಂದು ಮಾರಿಗೆ 50ರಿಂದ 60 ರು, ಚೆಂಡು ಹೂ ಒಂದು ಮಾರಿಗೆ 30ರಿಂದ 50 ರು. ಹಾಗೂ ಸುಗಂಧಿ ಮಾಲೆ ಗಾತ್ರಕ್ಕೆ ಅನುಗುಣವಾಗಿ 30ರಿಂದ 250 ರು. ಹಾಗೂ ಒಂದು ಜತೆ ಬಾಳೆಕಂಬಕ್ಕೆ 30ರಿಂದ 40 ರು..ವರೆಗೆ ಮಾರಾಟ ಮಾಡಲಾಯಿತು.ಹಬ್ಬದ ಖರೀದಿಗೆ ಪೇಟೆಗೆ ಆಗಮಿಸಿದ್ದ ಜನತೆಗೆ ಮಧ್ಯಾಹ್ನ 4 ಗಂಟೆ ಸುಮಾರು ಅರ್ಧ ಗಂಟೆ ಕಾಲ ಸುರಿದ ಮಳೆ ತೊಂದರೆ ಉಂಟು ಮಾಡಿತು. ಹೀಗಾಗಿ ಗ್ರಾಹಕರು ಹಾಗೂ ಅಂಗಡಿಗಳ ಮಾಲೀಕರು ಪ್ರಯಾಸ ಪಡುವಂತಾಯಿತು.