ಸಾರಾಂಶ
ಶಿವಮೊಗ್ಗದ ನಗರದ ಗಾಂಧಿ ಬಜಾರ್ ಉಪ್ಪಾರಕೇರಿಯ 2ನೇ ತಿರುವಿನಲ್ಲಿರುವ ಬಟ್ಟೆ ಮಾರ್ಕೆಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡ ಸ್ಥಳಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದ್ದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೋಮವಾರ ರಾತ್ರಿ ನಗರದ ಗಾಂಧಿ ಬಜಾರ್ ಉಪ್ಪಾರಕೇರಿಯ 2ನೇ ತಿರುವಿನಲ್ಲಿರುವ ಬಟ್ಟೆ ಮಾರ್ಕೆಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡ ಸ್ಥಳಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ತಹಶೀಲ್ದಾರ್ ಗಿರೀಶ್, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಘಟನೆಗೆ ಸಂಬಂಧಿಸಿದಂತೆ ಅಗ್ನಿಶಾಮಕದಳದ ಸಿಬ್ಬಂದಿಯು ತಕ್ಷಣವೇ ಕಾರ್ಯಪ್ರವತ್ತರಾಗಿದ್ದು, ಈ ಹಿನ್ನಲೆಯಲ್ಲಿ ದೊಡ್ಡ ಅನಾಹುತ ತಪ್ಪಿದೆ. ಮುಂದಿನ ದಿನಗಳಲ್ಲಿ ಇಂತಹ ಅಗ್ನಿ ಅನಾಹುತಗಳು ಸಂಭವಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಸೂಚಿಸಿದರು.
ಘಟನೆ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಪರಿಹಾರವನ್ನು ಸಂತ್ರಸ್ತರಿಗೆ ಶೀಘ್ರದಲ್ಲೇ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಕೆ.ಎಸ್.ಈಶ್ವರಪ್ಪ ಭೇಟಿ :
ಅಗ್ನಿ ಅವಘಡ ಸಂಭವಿಸಿದ ಗಾಂಧಿ ಬಜಾರ್‌ನ ಬಟ್ಟೆ ಮಾರ್ಕೆಟ್ ಸ್ಥಳಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.ಇನ್ನೂ ಘಟನಾ ಸ್ಥಳಕ್ಕೆ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್, ಭೇಟಿ ನೀಡಿ ಜಿಲ್ಲಾಡಳಿತ ವತಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.