ನ. 21ರಂದು ಕುಷ್ಟಗಿಯ ಶ್ರೀ ಬುತ್ತಿಬಸವೇಶ್ವರ ಸಭಾಭವನದಲ್ಲಿ ನಡೆಯಲಿರುವ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಚಂದಪ್ಪ ಮಲ್ಲಪ್ಪ ಹಕ್ಕಿ ಅವರು ತಮ್ಮ ಸಾಹಿತ್ಯಿಕ ಬದುಕು, ಚುಟುಕು ಸಾಹಿತ್ಯದ ಮಹತ್ವ ಹಾಗೂ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಕುರಿತು ಮಾತನಾಡಿದರು.

ಹನುಮಸಾಗರ: ಚುಟುಕು ಸಾಹಿತ್ಯವು ಮೊನಚಾದ ಮಾತುಗಳ ಮೂಲಕ ವಿಶಾಲವಾದ ಅರ್ಥವನ್ನು ಧ್ವನಿಸುತ್ತ, ಸಮಾಜದಲ್ಲಿನ ಓರೆಕೋರೆಗಳನ್ನು ಕುಟುಕಿ ತಿದ್ದುವ ಪ್ರಬಲ ಅಸ್ತ್ರವಾಗಿದೆ ಎಂದು ಕುಷ್ಟಗಿ ತಾಲೂಕಿನ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ, ಹನುಮಸಾಗರದ ಶಿಕ್ಷಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಮಾಜಿ ಅಧ್ಯಕ್ಷ ಚಂದಪ್ಪ ಮಲ್ಲಪ್ಪ ಹಕ್ಕಿ ಅಭಿಪ್ರಾಯಪಟ್ಟರು.

ನ. 21ರಂದು ಕುಷ್ಟಗಿಯ ಬುತ್ತಿಬಸವೇಶ್ವರ ಸಭಾಭವನದಲ್ಲಿ ನಡೆಯಲಿರುವ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಅವರು ತಮ್ಮ ಸಾಹಿತ್ಯಿಕ ಬದುಕು, ಚುಟುಕು ಸಾಹಿತ್ಯದ ಮಹತ್ವ ಹಾಗೂ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಕುರಿತು ಮಾತನಾಡಿದರು.

ಸಾಹಿತ್ಯವೆಂದರೆ ಕೇವಲ ಅಕ್ಷರಗಳ ಜೋಡಣೆಯಲ್ಲ. ಅದು ಮಾನವನ ಮನಸ್ಸಿನ ಮಿಡಿತ ಹಾಗೂ ಸಮಾಜದ ಸಂವೇದನೆಯ ಪ್ರತಿಬಿಂಬವಾಗಿದೆ. ಸಮಾಜದ ಸಂಸ್ಕೃತಿ, ಸಂಸ್ಕಾರ, ನೋವು, ನಲಿವು, ಹೋರಾಟ ಮತ್ತು ಆಶಯಗಳನ್ನು ಸಾಹಿತ್ಯ ತನ್ನ ಒಡಲಿನಲ್ಲಿ ತುಂಬಿಕೊಂಡಿರುತ್ತದೆ. ಇಂತಹ ಸಾಹಿತ್ಯವನ್ನು ಜನರ ಹೃದಯದಂಗಳಕ್ಕೆ ತಲುಪಿಸುವ ಕಾರ್ಯವಾಗಬೇಕು ಎಂದರು.

ಚುಟುಕು ಸಾಹಿತ್ಯದ ವಿಶೇಷತೆಯೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸ್ಕೃತದ ''''ಚಾಟು'''' ಶಬ್ದದಿಂದ ಚುಟುಕು ಎಂಬ ಪದ ಬಂದಿದೆ. ಕಡಿಮೆ ಪದಗಳಲ್ಲಿ ಚೊಕ್ಕವಾಗಿ ಅಪಾರ ಅರ್ಥವನ್ನು ಅಭಿವ್ಯಕ್ತಿಸುವ ಸಾಹಿತ್ಯ ಪ್ರಕಾರವೇ ಚುಟುಕು ಸಾಹಿತ್ಯ. ಚಮತ್ಕಾರಿಕವಾದ ಮುಕ್ತಕಗಳು, ಮೊನಚಾದ ನುಡಿಗಟ್ಟುಗಳು ಮತ್ತು ರಸವತ್ತಾದ ಅಭಿವ್ಯಕ್ತಿಗಳು ಚುಟುಕುಗಳ ವೈಶಿಷ್ಟ್ಯವಾಗಿವೆ. ಜೇನುನೊಣ ಕಚ್ಚಿದ ನಂತರ ಸಿಹಿಯಾದ ಜೇನುತುಪ್ಪ ನೀಡುವಂತೆ, ಚುಟುಕು ಸಾಹಿತ್ಯವು ತನ್ನ ಮೊನಚಾದ ಮಾತುಗಳಿಂದ ಸಮಾಜವನ್ನು ಕುಟುಕಿ ತಿದ್ದುವ ಕಾರ್ಯ ಮಾಡುತ್ತದೆ ಎಂದು ವಿವರಿಸಿದರು.

ಚುಟುಕು ಸಾಹಿತ್ಯದ ಪಿತಾಮಹರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ಸರ್ವಜ್ಞರು ತ್ರಿಪದಿಗಳ ಮೂಲಕ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದವರು. ಚುಟುಕು ಬ್ರಹ್ಮ ಎಂದೇ ಪ್ರಸಿದ್ಧರಾದ ಕವಿ ದಿನಕರ ದೇಸಾಯಿ ಅವರು ಚೌಪದಿಗಳ ಮೂಲಕ ಚುಟುಕು ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಚುಟುಕು ಸಾಹಿತ್ಯದಲ್ಲಿ ಸಾಧನೆ ಮಾಡಿದ ಕವಿಗಳು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿ.ಪಿ. ರಾಜರತ್ನಂ, ಡಿ.ವಿ.ಜಿ., ಕುವೆಂಪು, ಟಿ.ಜಿ. ಭಟ್, ಬೀಚಿ, ಎಚ್.ಎಚ್. ಬಿಳಿಗಿರಿ, ಅಕ್ಬರ್ ಅಲಿ, ಸಿಪಿಕೆ, ವೈ.ಎನ್.ಕೆ., ಬಿ.ಆರ್. ಲಕ್ಷ್ಮಣರಾವ್, ಡಿ.ವಿ. ಬಡಿಗೇರ, ಎಚ್. ಡುಂಡಿರಾಜ, ಜರಗನಹಳ್ಳಿ ಶಿವಶಂಕರ ಸೇರಿದಂತೆ ಅನೇಕ ಸಾಹಿತಿಗಳು ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಸ್ಮರಿಸಿದರು.

ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಏನನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಾಲೂಕಿನಲ್ಲಿ ನನಗಿಂತ ಹಿರಿಯ ಹಾಗೂ ಅನುಭವಿ ಸಾಹಿತಿಗಳಿದ್ದಾರೆ. ಶರಣಪ್ಪ ವಡಿಗೇರಿ, ವಾಲ್ಮೀಕಿ ಯಕ್ಕರನಾಳ, ಸೇರಿದಂತೆ ಅನೇಕ ಹಿರಿಯ ಸಾಹಿತಿಗಳಿದ್ದರೂ ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಈ ಗೌರವವನ್ನು ನನ್ನ ಸಾಹಿತ್ಯ ಕ್ಷೇತ್ರದ ಸೇವೆ, ಅಲ್ಪಸ್ವಲ್ಪ ಸಾಹಿತ್ಯ ಕೃತಿಗಳು ಹಾಗೂ ಹಿರಿಯ ಸಾಹಿತಿಗಳು, ಕವಿಗಳು, ಸ್ನೇಹಿತರು ಮತ್ತು ಕುಟುಂಬದವರ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದದ ಫಲವೆಂದು ಭಾವಿಸುತ್ತೇನೆ. ಈ ಆಯ್ಕೆಯಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಸಾಹಿತ್ಯ ಸೇವೆಯನ್ನು ಮುಂದುವರಿಸಲು ಈ ಗೌರವ ಪ್ರೇರಣೆ ನೀಡಿದೆ ಎಂದು ಮನದಾಳದ ಮಾತು ಹಂಚಿಕೊಂಡರು.