ಸಾರಾಂಶ
ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಕಾರ್ಯಕ್ರಮದ ಅಂಗವಾಗಿ ಆಯುರ್ವೇದದಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಕಾರ್ಯಕ್ರಮದ ಅಂಗವಾಗಿ ಆಯುರ್ವೇದದಲ್ಲಿ ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ.ಮಮತಾ ಕೆ.ವಿ.ಮಾತನಾಡಿ, ಕ್ರೀಡಾಪಟುಗಳ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಆಯುರ್ವೇದ ಮುಖ್ಯ ಪಾತ್ರವಹಿಸುತ್ತದೆ. ಕ್ರೀಡೆಗೆ ಸಂಬಂಧಪಟ್ಟ, ಹೊರದೇಶಗಳಲ್ಲಿ ವಾಸಿಯಾಗದ ಕಾಯಿಲೆಗಳನ್ನು ಕೇರಳ ರಾಜ್ಯದ ಆಯುರ್ವೇದ ಚಿಕಿತ್ಸೆಗಳಿಂದ ನಿವಾರಿಸಲಾಗಿದೆ. ಹಾಗಾಗಿ ಸಂಸ್ಥೆಯ ಎಲ್ಲಾ ವಿಭಾಗಗಳಿಂದ ಅಲ್ಪಾವಧಿಯಲ್ಲೂ ಅತ್ಯಂತ ಸಂಕ್ಷಿಪ್ತ ರೀತಿಯಲ್ಲಿ ಮುಖ್ಯ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ಜರ್ಮನಿಯ ವಿದ್ಯಾರ್ಥಿಗಳೂ ಇದರ ಸದುಪಯೋಗ ಪಡೆಯುತ್ತಿದ್ದಾರೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ಆಗಮಿಸಿರುವ ವಿದ್ಯಾರ್ಥಿಗಳು ಸಿದ್ಧಾಂತಿಕ ಹಾಗು ಪ್ರಾಯೋಗಿಕ ಪಠ್ಯ ಕ್ರಮವನ್ನು ಕೂಲಂಕಷವಾಗಿ ತಿಳಿದು ತಮ್ಮ ಜೀವನ ಹಾಗೂ ಕಾರ್ಯಕ್ಷೇತ್ರದಲ್ಲಿ ಆಯುರ್ವೇದ ಅಳವಡಿಸಬೇಕೆಂದು ಕರೆ ನೀಡಿದರು.ಅಂತಾರಾಷ್ಟ್ರೀಯ ವಿದ್ಯಾರ್ಥಿ ಕೋಶದ ಸಹಾಯಕ ಡೀನ್ ಡಾ. ಅನಿರುದ್ಧ ಅವರು ತರಬೇತಿ ಕಾರ್ಯಕ್ರಮದ ಕಾರ್ಯವೈಖರಿಗಳನ್ನು ವಿವರಿಸಿ, ಮಾರ್ಚ್ 10ರಿಂದ 29ರ ವರೆಗಿನ ತರಬೇತಿ ರೂಪುರೇಷೆ ತಿಳಿಸಿದರು. ಒಂಭತ್ತು ಮಂದಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಪರಿಚಯ ಮಾಡಿಕೊಂಡರು.
ಅಂತಾರಾಷ್ಟ್ರೀಯ ವಿದ್ಯಾರ್ಥಿ ಕೋಶದ ಡೀನ್ ಡಾ. ಪ್ರಸನ್ನ ಮೊಗಸಾಲೆ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಡಾ.ಸಹನಾ ಶಂಕರಿ ಧನ್ಯವಾದ ಸಮರ್ಪಿಸಿದರು. ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಶರಣ್ಯ ಹಾಗೂ ಡಾ.ಗೀತಾಂಜಲಿ ಪ್ರಾರ್ಥಿಸಿದರು. ಸ್ವಸ್ಥವೃತ್ತ ವಿಭಾಗದ ಡಾ.ಸೌಮ್ಯ ಭಟ್ ನಿರೂಪಿಸಿದರು.