ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ತಾಲೂಕು ಆಸ್ಪತ್ರೆಯ ವೈದ್ಯರ ನೇಮಕ ಹಾಗೂ ಆಸ್ಪತ್ರೆಯ ಆಡಳಿತ ಅವ್ಯವಸ್ಥೆ ಖಂಡಿಸಿ ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ತಾಲೂಕು ಆಸ್ಪತ್ರೆಯ ವೈದ್ಯರ ನೇಮಕ ಹಾಗೂ ಆಸ್ಪತ್ರೆಯ ಆಡಳಿತ ಅವ್ಯವಸ್ಥೆ ಖಂಡಿಸಿ ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಮಾತನಾಡಿ, ಒಂದು ತಿಂಗಳ ಹಿಂದೆ ಆಸ್ಪತ್ರೆಯ ಸಿಬ್ಬಂದಿಗಳ ಕುಂದುಕೊರತೆಯ ಮತ್ತು ಬಡ ಜನರ ಸಮಸ್ಯೆಗಳ ಕುರಿತು ಶಾಸಕರ ಗಮನಕ್ಕೆ ತರಲಾಗಿ ಪರಿಹರಿಸಲು ಸಮಯವನ್ನು ನೀಡಲಾಗಿತ್ತು. ತಾಲೂಕಿನ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಅಂದು ನಾವು ಪ್ರತಿಭಟನೆ ಮಾಡಿದ್ದೆವು. ಆದರೆ ಈವರೆಗೆ ಸಮಸ್ಯೆಗಳು ಬಗೆಹರಿದಿಲ್ಲ. ಬಡಜನರಿಗೆ ತಲುಪಬೇಕಾಗಿದ್ದ ವೈದ್ಯ ಸೇವೆಗಳು, ಕರ್ತವ್ಯ ನಿರ್ವಹಿಸಬೇಕಿದ್ದ ವೈದ್ಯರ ಕೊರತೆಗಳು, ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರಾಗಿದ್ದಾರೂ ಕೈ ತಪ್ಪಿ ಹೋಗಿರುವ ಆಡಳಿತ ವ್ಯವಸ್ಥೆ ಇವೆಲ್ಲದರ ಅರಿವಿರದೆ ಶಾಸಕರು ಮೌನ ವಹಿಸಿದ್ದಾರೆಯೋ ನಿರ್ಲಕ್ಷ್ಯ ವಹಿಸುತ್ತಿದ್ದಾರೆಯೋ ತಿಳಿಯುತ್ತಿಲ್ಲ ಎಂದರು.ತಾಲೂಕಿನ ಮತ್ತು ಜನರ ಕುಂದು ಕೊರತೆಯನ್ನು ಚರ್ಚಿಸುವ ವೇದಿಕೆಯಾದ ಕೆಡಿಪಿ ಸಭೆಯು ಕೂಡ ಇಂದು ಕೇವಲ ನಾಮಕಾವಸ್ತೆಯಾಗಿ ನಡೆಯುತ್ತಿದೆ. ಮನೆ ಮನೆಗೆ ಬಂದು ಆರೋಗ್ಯ ಸೇವೆ ನೀಡುವ ಸಂಚಾರಿ ಆರೋಗ್ಯ ಯೋಜನೆಗೆ ಇಂದು ಸಿಬ್ಬಂದಿಗಳಿಲ್ಲದೆ ಮುಚ್ಚಲಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಿ ೧೩ ವೈದ್ಯ ಸಿಬ್ಬಂದಿಗಳು ತಕ್ಷಣವೇ ನಿಯೋಜಿಸಬೇಕು. ಹೆರಿಗೆ ತಜ್ಞರು ಅರವಳಿಕೆ , ಮಕ್ಕಳ ತಜ್ಞರನ್ನು ಹೆಚ್ಚು ಸಮಯ ತೆಗೆದುಕೊಳ್ಳದೆ ತಕ್ಷಣವೇ ನಿಯೋಜಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯ ಕೆ.ಜಿ. ನಾಯ್ಕ ಮಾತನಾಡಿದರು.ತಾಲೂಕು ನಿಕಟ ಪೂರ್ವ ಅಧ್ಯಕ್ಷ ಮಾರುತಿ ನಾಯ್ಕ, ಜಿಲ್ಲಾ ವಿಶೇಷ ಆಹ್ವಾನಿತ ಗುರುರಾಜ ಶಾನಭಾಗ, ತಾಲೂಕ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ ಮಾತನಾಡಿದರು. ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಣ್ಣಪ್ಪ ನಾಯ್ಕ ಕಡಕೇರಿ, ಬಿಜೆಪಿ ಬಿಜೆಪಿ ಜಿಲ್ಲಾ ವಿಶೇಷ ಅಹ್ವಾನಿತ ಸುರೇಶ್ ನಾಯ್ಕ ಬಾಲಿಕೊಪ್ಪ, ಓಬಿಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ನಾಯ್ಕ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ ಮಡಿವಾಳ, ಯುವ ಮೋರ್ಚಾ ಪ್ರಧಾನ, ಕಾರ್ಯದರ್ಶಿ ಮಂಜುನಾಥ ಭಟ್ಟ, ಬಿಜೆಪಿ ಸಾಮಾಜಿಕ ಜಾಲತಾಣದ ಸದಸ್ಯ ದಿನೇಶ ಹೆಗಡೆ, ಮುಂತಾದವರು ಉಪಸ್ಥಿತರಿದ್ದರು.
ನಂತರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಧರಣಿನಿರತರನ್ನು ಭೇಟಿ ಮಾಡಿ ವೈದ್ಯರ ನೇಮಕಕ್ಕೆ ಪ್ರಕ್ರಿಯೆಗಳು ನಡೆಯುತ್ತಿದ್ದು ಸದ್ಯದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.------
26ಎಸ್ಡಿಪಿ2- ಸಿದ್ದಾಪುರದಲ್ಲಿ ಬಿಜೆಪಿ ಮಂಡಲದ ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ನೀಡಲಾಯಿತು.