ಜಾನುವಾರುಗಳಿಗೆ ತಗುಲುವಂತಹ ಸಾಮಾನ್ಯ ಕಾಯಿಲೆಗಳಿಂದ ಪಾರು ಮಾಡುವುದು ರೈತರಿಗೆ ಬಹು ದೊಡ್ಡ ಸವಾಲಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಶು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದ್ದು, ಜಾನುವಾರುಗಳಿಗೆ ಕಾಡುವ ರೋಗಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಿ ಪೋಷಣೆ ಮಾಡಲು ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ರೈತರು ಹೈನುಗಾರಿಕೆಯನ್ನೇ ನಂಬಿದ್ದಾರೆ. ಆದರೆ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಜಾನುವಾರುಗಳಿಗೆ ತಗುಲುವಂತಹ ಸಾಮಾನ್ಯ ಕಾಯಿಲೆಗಳಿಂದ ಪಾರು ಮಾಡುವುದು ರೈತರಿಗೆ ಬಹು ದೊಡ್ಡ ಸವಾಲಾಗಿದೆ. ಖಾಲಿ ಇರುವ ಪಶು ವೈದ್ಯರು ಹಾಗೂ ಇತರೆ ಹುದ್ದೆಗಳನ್ನು ಸರ್ಕಾರ ಹಲವು ವರ್ಷಗಳಿಂದ ಭರ್ತಿ ಮಾಡದ ಪರಿಣಾಮ ಪಶು ಇಲಾಖೆಯ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಮತ್ತು ಅನಾರೋಗ್ಯಕ್ಕೆ ತುತ್ತಾದ ರಾಸುಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ಸಮಸ್ಯೆ ಬಿಗಡಾಯಿಸಿದೆ. ಇದರಿಂದಾಗಿ ರಾಸುಗಳಲ್ಲಿ ರೋಗಗಳು ಕಾಣಿಸಿಕೊಂಡು ನಿಯಂತ್ರಣಕ್ಕೆ ಬಾರದೆ ಹಾಲಿನ ಇಳುವರಿ ಸಹ ಕುಂಠಿತಗೊಂಡು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಾಲೂಕಿನಲ್ಲಿ ವೈದ್ಯರು, ಪಶು ವೈಧ್ಯಕೀಯ ಪರೀಕ್ಷಕರು ಸೇರಿದಂತೆ ಒಟ್ಟು 46 ವಿವಿಧ ಹುದ್ದೆಗಳ ಪೈಕಿ ನೇಮಕ ಆಗಿರುವುದು ಕೇವಲ 11 ಮಂದಿ ಮಾತ್ರ. ತಾಲೂಕಿನಲ್ಲಿ 1 ಪಶು ಆಸ್ಪತ್ರೆ, 9 ಪಶು ಚಿಕಿತ್ಸಾ ಕೇಂದ್ರಗಳಿದ್ದು, ಬೂದಿಕೋಟೆ, ಬಲಮಂದೆ, ಕಾಮಸಮುದ್ರ, ಗುಲ್ಲಹಳ್ಳಿ, ತೊಪ್ಪನಹಳ್ಳಿ ಸೇರಿದಂತೆ ಹಲವು ಕೇಂದ್ರಗಳಲ್ಲಿ ವೈದ್ಯರೇ ಇಲ್ಲ.ಚಿಕಿತ್ಸೆ ಸಿಗುತ್ತಿಲ್ಲ:

ಸರ್ಕಾರದಿಂದ ವೈದ್ಯರ ನೇಮಕಾತಿ ಇಲ್ಲದ ಕಾರಣ ಒಬ್ಬ ವೈದ್ಯರಿಗೆ ಎರಡರಿಂದ ಮೂರು ಪಶು ಚಿಕಿತ್ಸಾ ಕೇಂದ್ರಗಳನ್ನು ನೋಡಿಕೊಳ್ಳಲು ನಿಯೋಜನೆ ಮಾಡಲಾಗಿದೆ. ದನಕರುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇರುವ ವೈದ್ಯರಿಂದ ಪಶುಗಳ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡುವುದು ಅಸಾಧ್ಯವಾಗಿದೆ. ಇದರಿಂದ ರಾಸುಗಳಿಗೆ ಅನಾರೋಗ್ಯ ಕಾಣಿಸಿಕೊಂಡರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದೆ ರೈತರ ಜೀವನಕ್ಕೆ ಆಧಾರವಾಗಿರುವ ಜಾನುವಾರುಗಳು ಮರಣ ಹೊಂದುತ್ತಿವೆ.ನಕಲಿ ವೈದ್ಯರ ಹಾವಳಿ:

ರಾಸುಗಳಿಗೆ ಚಿಕಿತ್ಸೆ ನೀಡಲು ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಂದ ನಕಲಿ ವೈದ್ಯರು ರಾಜ್ಯಕ್ಕೆ ಬರುತ್ತಿದ್ದಾರೆ. ಗಡಿ ಗ್ರಾಮಗಳಲ್ಲೇ ಠಿಕಾಣಿ ಹೂಡುವಂತಹ ನಕಲಿ ವೈದ್ಯರು ಚಿಕಿತ್ಸೆ ಹೆಸರಲ್ಲಿ ರೈತರಿಂದ ಸಾವಿರಾರು ರು. ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ.

ಕೋಟ್‌.....ಇಲಾಖೆಯಲ್ಲಿ ಪಶು ವೈದ್ಯರು ಸೇರಿದಂತೆ ಇತರೆ ಅಧೀನ ಸಿಬ್ಬಂದಿಯ ಕೊರತೆ ಇರುವುದರಿಂದ ಸರ್ಕಾರದ ಸೇವೆಗಳನ್ನು ಅರ್ಹರಿಗೆ ತಲುಪಿಸಲು ಕಷ್ಟವಾಗುತ್ತಿದೆ. ಕೆಲವು ಕಡೆ ಹೊರ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಿಸಿಕೊಂಡು ಸೇವೆಗಳನ್ನು ನೀಡಲಾಗುತ್ತಿದೆ. ರೈತರು ಇಲಾಖೆಯ ಸಹಾಯವಾಣಿಗೆ ಕರೆ ಮಾಡಿದರೆ ಅವರ ಮನೆ ಬಾಗಿಲಿಗೆ ಸಂಚಾರಿ ವೈದ್ಯಕೀಯ ವಾಹನ ಹೋಗಿ ರಾಸುಗಳಿಗೆ ಚಿಕಿತ್ಸೆ ನೀಡಲಾಗುವುದು.

ಬಾಬು, ಸಹಾಯಕ ನಿರ್ದೇಶಕರು, ಪಶುಪಾಲನ ಇಲಾಖೆ.