ಸಾರಾಂಶ
ಅಂಶಿ ಪ್ರಸನ್ನಕುಮಾರ್
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರನ್ನು ಕೇಂದ್ರ ಸ್ಥಾನವನ್ನಾಗಿ ಹೊಂದಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಸುಮಾರು ಒಂದು ಲಕ್ಷ ಮಂದಿಗೆ ಉನ್ನತ ಶಿಕ್ಷಣ ನೀಡುತ್ತಿದೆ. ನ್ಯಾಕ್‌ನಿಂದ ಎ ಪ್ಲಸ್ ಶ್ರೇಣಿ ಪಡೆದಿರುವ ಈ ವಿವಿಯು ದೇಶದಲ್ಲಿ ''''ಇಗ್ನೋ'''' ನಂತರ ಎರಡನೇ ಸ್ಥಾನದಲ್ಲಿದೆ. ಒಂದು ಹಂತದಲ್ಲಿ ತನ್ನ ಭೌಗೋಳಿಕ ವ್ಯಾಪ್ತಿ ಮೀರಿ, ಎಲ್ಲೆಡೆ ಸಂಸ್ಥೆಗಳನ್ನು ಆರಂಭಿಸಿದೆ. ಅಲ್ಲದೆ, ದೂರಶಿಕ್ಷಣ ಮಂಡಳಿ ಅಧೀನಕ್ಕೆ ಬಾರದ ಕೋರ್ಸುಗಳನ್ನು ಆರಂಭಿಸಿದೆ ಎಂಬ ಕಾರಣಕ್ಕಾಗಿ ಮಾನ್ಯತೆ ಕಳೆದುಕೊಂಡು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಆತಂಕಕ್ಕೆ ದೂಡಿದ್ದ ಮುಕ್ತ ವಿವಿ ಇತ್ತೀಚೆಗೆ ಚೇತರಿಸಿಕೊಂಡಿದೆ.
ಮೊದಲು 18 ಕೋರ್ಸುಗಳು ಮಾತ್ರ ಇದ್ದವು. ಯುಜಿಸಿ- ಡಿಇಬಿ 47 ಆಫ್‌ಲೈನ್, 10 ಆನ್ ಲೈನ್ ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿವಿ ಅನುಮೋದಿಸಿದೆ.ಸರ್ಟಿಫಿಕೆಟ್, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಕೋರ್ಸುಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಕಾಯಂ ಅಧ್ಯಾಪಕರಿಗೂ ಮಾರ್ಗದರ್ಶನ ಮಾಡಲು ಅವಕಾಶ ಇರುವುದರಿಂದ ಸಾಕಷ್ಟು ಮಂದಿ ಇಲ್ಲಿ ಪಿಎಚ್.ಡಿ ಕೂಡ ಮಾಡುತ್ತಿದ್ದಾರೆ. ವಿವಿಧ ಸಂಶೋಧನಾ ಸಂಸ್ಥೆಗಳಿಂದ ಅನೇಕ ಸಂಶೋಧನಾ ಅನುದಾನ ಪಡೆದಿದೆ. ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಸಮ್ಮೇಳನ, ಕಾರ್ಯಾಗಾರಗಳನ್ನು ನಡೆಸಿದೆ. ಹಲವಾರು ಕೈಗಾರಿಕಾ ಹಾಗೂ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಕೂಡ ಮಾಡಿಕೊಂಡಿದೆ.
ಮುಕ್ತ ವಿವಿಗೆ 130 ಬೋಧಕರ ಹುದ್ದೆ ಮಂಜೂರಾಗಿದ್ದು, 77 ಮಂದಿ ಕಾಯಂ ಬೋಧಕರು ಇದ್ದಾರೆ. ಅದೇ ರೀತಿ 547 ಬೋಧಕೇತರ ಹುದ್ದೆ ಮಂಜೂರಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಇಲ್ಲ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತಾತ್ಕಾಲಿಕ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಜಿಲ್ಲೆಗೊಂದರಂತೆ ಹಾಗೂ ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ ಒಟ್ಟಾರೆ 36 ಪ್ರಾದೇಶಿಕ ಕೇಂದ್ರಗಳಿವೆ. ಇದಲ್ಲದೆ 139 ಅಧ್ಯಯನ ಕೇಂದ್ರಗಳಿವೆ.ಸುಮಾರು 70 ಕೋಟಿ ರು.ಗಳಷ್ಟು ಆಂತರಿಕ ಆದಾಯ ಇದೆ. ಬೆಂಗಳೂರಿನ ಹಜ್ ಭವನದಲ್ಲಿ ಮುಕ್ತ ವಿವಿಯ ಪ್ರಾದೇಶಿಕ ಕೇಂದ್ರ ತೆರೆಯಲು 10 ಕೋಟಿ ರು. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ. ಅಲ್ಲಿ ಮುಸ್ಲಿಂ, ಕ್ರೈಸ್ತ, ಸಿಖ್, ಜೈನ ಸೇರಿ ಎಲ್ಲಾ ಅಲ್ಪಸಂಖ್ಯಾತರಿಗೂ ಶಿಕ್ಷಣ ನೀಡಲಾಗುತ್ತದೆ. ಇದಲ್ಲದೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಒಳ್ಳಾರಿ ಪ್ರಾದೇಶಿಕ ಕೇಂದ್ರಕ್ಕೆ 9.5 ಕೋಟಿ ರು. ಮಂಜೂರು ಮಾಡಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ರು. ನೀಡಿದೆ.
ಮೂಲ ಸೌಕರ್ಯ ವಿಸ್ತರಣೆಗೆ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸಾಮರ್ಥ್ಯ ಹೆಚ್ಚಿಸಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಚಿತವಾಗಿ 20 ಎಕರೆಗೂ ಹೆಚ್ಚು ಭೂಮಿ ಪಡೆದಿದೆ. ಬೋಧಕ ಸದಸ್ಯರ ಸಂಶೋಧನೆಗಾಗಿ ಪ್ರಾರಂಭಿಕ ಅನುದಾನ ನೀಡುತ್ತಿದೆ. ಪ್ರಾದೇಶಿಕ ಕೇಂದ್ರ ಹಾಗೂ ಕಲಿಕಾರ್ಥಿ ಸಹಾಯ ಕೇಂದ್ರಗಳ ಜಾಲ ಬಲಪಡಿಸಲಾಗಿದೆ.ವಿವಿ ನಡೆದು ಬಂದ ದಾರಿ
ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ‘ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯನ್ನು 1996 ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವಾಗಿ ಪರಿವರ್ತಿಸಲಾಯಿತು.ಪ್ರೊ.ಸಿ.ಅಂಜನಮೂರ್ತಿ, ಡಾ.ಎನ್.ಎಸ್.ರಾಮೇಗೌಡ, ಡಾ.ಕೆ. ಸುಧಾರಾವ್, ಡಾ.ಬಿ.ಎ.ವಿವೇಕ ರೈ, ಪ್ರೊ.ಕೆ.ಎಸ್.ರಂಗಪ್ಪ, ಡಾ.ಎಂ.ಜಿ. ಕೃಷ್ಣನ್, ಡಾ.ಡಿ.ಶಿವಲಿಂಗಯ್ಯ, ಡಾ.ಎಸ್.ವಿದ್ಯಾಶಂಕರ್ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರೊ.ಶರಣಪ್ಪ ವಿ.ಹಲಸೆ ಕುಲಪತಿಯಾಗಿದ್ದಾರೆ. ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿಯಾಗಿದ್ದ ಅವಧಿಯಲ್ಲಿ ಮುಕ್ತ ವಿವಿಗೆ ನೂತನ ಆಡಳಿತ ಭವನ, ವಿಜ್ಞಾನ ಭವನ, ಘಟಿಕೋತ್ಸವ ಭವನ ನಿರ್ಮಿಸಲಾಗಿದೆ. ಪ್ರಸ್ತುತ ನೂತನ ಪರೀಕ್ಷಾ ಭವನ ಕೂಡ ಇದೆ.ನಾನು ಅಧಿಕಾರ ವಹಿಸಿಕೊಂಡ ನಂತರ ''''ನ್ಯಾಕ್'''''''' ನಿಂದ ಎ ಪ್ಲಸ್ ಮಾನ್ಯತೆ ಸಿಕ್ಕಿದೆ. ಮೊದಲು 40 ಸಾವಿರ, ನಂತರ 46 ಸಾವಿರ, ಈಗ 15 ಸಾವಿರ ಸೇರಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆಂತರಿಕ ಆದಾಯವೂ ಚೆನ್ನಾಗಿದೆ. ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳೂ ಚೆನ್ನಾಗಿ ನಡೆಯುತ್ತಿವೆ. ಬೋಧಕ, ಬೋಧಕೇತರಿಗೆ ಬಡ್ತಿ ನೀಡಲಾಗಿದೆ. ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಗೆ ಅನುಗುಣವಾಗಿ ಬೋಧಕ ಹಾಗೂ ಬೋಧಕೇತರರನ್ನು ನೇಮಿಸಲಾಗಿದೆ. ಇದನ್ನು ಕಾಯಂ ನೌಕರರು ವಿರೋಧಿಸುತ್ತಾರೆ. ಇದನ್ನು ಹೊರತುಪಡಿಸಿ ವಿವಿಯು ತುಂಬಾ ಚೆನ್ನಾಗಿ ನಡೆಯುತ್ತಿದೆ. ಸದ್ಯದಲ್ಲೇ ವಿವಿಯ ಸಿಲ್ವರ್ ಜ್ಯುಬಿಲಿ ಆಯೋಜಿಸಲಾಗುವುದು. - ಪ್ರೊ.ಶರಣಪ್ಪ ವಿ. ಹಲಸೆ, ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿವಿಅಕ್ರಮ ನೇಮಕಾತಿ, ಹಣ
ದುರುಪಯೋಗ ಬಗ್ಗೆ ತನಿಖೆಕರ್ನಾಟಕ ಮುಕ್ತ ವಿವಿಗೂ ಹಗರಣಗಳಿಗೂ ಬಿಡಿಸಲಾಗದ ಸಂಬಂಧ. ಆರಂಭದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳೂ ಕೇಳಿ ಬರುತ್ತಲೇ ಇವೆ. ಈಗಲೂ ಅಕ್ರಮ ನೇಮಕಾತಿ ನಡೆದಿದೆ. ಹಣ ದುರುಪಯೋಗವಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಅವರು ತನಿಖೆ ನಡೆಸುತ್ತಿದ್ದಾರೆ. ನೂರಾರು ಮಂದಿ ನೇಮಕ, ಇಡುಗಂಟು ಬಳಸಿ ಕಟ್ಟಡ ನಿರ್ಮಾಣ ಮೊದಲಾದ ಆರೋಪಗಳ ಬಗ್ಗೆ ಅವರು ಪರಿಶೀಲಿಸಿದ್ದಾರೆ.