ಸಿರುಗುಪ್ಪ ತಾಲೂಕಿನಲ್ಲಿ ಮೂರೇ ಜನ ದೈಹಿಕ ಶಿಕ್ಷಣ ಶಿಕ್ಷಕರು!

| Published : Aug 02 2025, 12:00 AM IST

ಸಿರುಗುಪ್ಪ ತಾಲೂಕಿನಲ್ಲಿ ಮೂರೇ ಜನ ದೈಹಿಕ ಶಿಕ್ಷಣ ಶಿಕ್ಷಕರು!
Share this Article
  • FB
  • TW
  • Linkdin
  • Email

ಸಾರಾಂಶ

ಸಿರುಗುಪ್ಪ ತಾಲೂಕಿನಲ್ಲಿ ಒಟ್ಟು 186 ಸರ್ಕಾರಿ ಶಾಲೆಗಳಲ್ಲಿ ಸುಮಾರು 32,440 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇಡೀ ತಾಲೂಕಿನಲ್ಲಿ ಮೂವರು ದೈಹಿಕ ಶಿಕ್ಷಣ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಲ್ಲಿಕಾರ್ಜುನ ಎಚ್‌.

ಸಿರುಗುಪ್ಪ: ಕ್ರೀಡಾ ಚಟುವಟಿಕೆ ಮೂಲಕ ವಿದ್ಯಾರ್ಥಿಗಳ ಶಾರೀರಿಕ, ಮಾನಸಿಕ ಹಾಗೂ ಸ್ಪರ್ಧಾತ್ಮಕ ಮನೋಭಾವ ವಿಕನಸಗೊಳಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಪ್ರಮುಖ. ಆದರೆ ತಾಲೂಕಿನಲ್ಲಿ ಕೇವಲ ಮೂರೇ ಜನ ದೈಹಿಕ ಶಿಕ್ಷಣ ಶಿಕ್ಷಕರು ಇದ್ದಾರೆ.

ತಾಲೂಕಿನಲ್ಲಿ 76 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿದ್ದು, 93 ಹಿರಿಯ ಪ್ರಾಥಮಿಕ ಶಾಲೆಗಳಿವೆ. 17 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 186 ಸರ್ಕಾರಿ ಶಾಲೆಗಳಲ್ಲಿ ಸುಮಾರು 32,440 ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ತಾಲೂಕಿನ ಪ್ರಾಥಮಿಕ ಶಾಲೆಗಳಿಗೆ 40 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಇಡೀ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಬರೀ ಮೂರು ಜನ ದೈಹಿಕ ಶಿಕ್ಷಕರು ಮಾತ್ರ!

ಇನ್ನು ಸರ್ಕಾರಿ ಪ್ರೌಢಶಾಲೆಗಳಿಗೆ 38 ದೈಹಿಕ ಶಿಕ್ಷಕರ ನೇಮಕವಾಗಿದ್ದು, 12 ಜನರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 26 ಹುದ್ದೆಗಳು ಭರ್ತಿಯಾಗಿಲ್ಲ. ಬರೋಬ್ಬರಿ ಒಂದೂವರೆ ದಶಕದಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಾಗಿಲ್ಲ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಅಭಾವ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ದೈಹಿಕ ಶಿಕ್ಷಕರನ್ನು ಸರ್ಕಾರ ಭರ್ತಿ ಮಾಡಿಕೊಳ್ಳುವ ವರೆಗೆ ಅತಿಥಿ ಶಿಕ್ಷಕರ ನೇಮಕದಂತೆ ಅರ್ಹ ದೈಹಿಕ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂಬ ಬೇಡಿಕೆಯ ಬಗ್ಗೆ ಸರ್ಕಾರ ಈ ವರೆಗೆ ಗಮನ ಹರಿಸಿಲ್ಲ. ಹೀಗಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ದೈಹಿಕ ಚಟುವಟಿಕೆಯಿಂದ ವಂಚಿತವಾದಂತಾಗಿದೆ.

ಹೃದಯ ಸಂಬಂಧಿ ಕಾಯಿಲೆ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಬಹುತೇಕ ದೈಹಿಕ ಚಟುವಟಿಕೆ ಸ್ಥಗಿತವಾಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ದೈಹಿಕ ಕಸರತ್ತು ಶುರುಗೊಳ್ಳಬೇಕು. ನಿತ್ಯ ಕ್ರೀಡಾಕೂಟಗಳಲ್ಲಿ ಭಾಗಿಯಾಗಬೇಕು. ಆದರೆ, ದೈಹಿಕ ಶಿಕ್ಷಕರ ಕೊರತೆಯಿಂದಾಗಿ ಶಾಲೆಗಳಲ್ಲಿನ ಕ್ರೀಡಾ ಸಾಮಗ್ರಿಗಳು ಧೂಳು ತಿನ್ನುತ್ತಿವೆ. ಸಣ್ಣ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ಮಕ್ಕಳಿಗೆ ದೈಹಿಕ ಚಟುವಟಿಕೆ ಆವಶ್ಯಕ. ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಬೇಕು ಎನ್ನುತ್ತಾರೆ ತಾಲೂಕಿನ ರಾರಾವಿ ಗ್ರಾಮದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಓ.ಎಂ. ನೀಲಕಂಠಯ್ಯ.

ವಿದ್ಯಾರ್ಥಿಗಳು ಕ್ರೀಡಾಸಾಧನೆ ಮಾಡಲು ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಕ್ರೀಡಾ ಆದ್ಯತೆಯಿಂದ ಮಾತ್ರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳು ಪ್ರತಿಭೆ ಅನಾವರಣಗೊಳಿಸಲು ಸಾಧ್ಯವಾಗುತ್ತದೆ. ಮಕ್ಕಳ ಮಾನಸಿಕ ಒತ್ತಡ ನಿವಾರಣೆ, ಏಕಾಗ್ರತೆ ಕಾಯ್ದುಕೊಳ್ಳಲು ಕ್ರೀಡೆ ಹೆಚ್ಚು ಸಹಕಾರಿಯಾಗಿದ್ದು, ದೈಹಿಕ ಶಿಕ್ಷಕರ ನೇಮಕದಿಂದ ಮಾತ್ರ ಸಾಧ್ಯವಾಗಲಿದೆ ಎಂದು ಕೆಂಚನಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಅಜ್ಮೀರ್ ಅಭಿಪ್ರಾಯಪಡುತ್ತಾರೆ.

ದೈಹಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ಹೆಚ್ಚು ಮಹತ್ವದ್ದು. ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸುವುದು ಅಷ್ಟೇ ಮುಖ್ಯವಾಗಿದೆ. ದೈಹಿಕ ಕಸರತ್ತು ಮಕ್ಕಳ ಮಾನಸಿಕ ಒತ್ತಡ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಸಿರುಗುಪ್ಪ ದೈಹಿಕ ಶಿಕ್ಷಕ ಪರಿವೀಕ್ಷಕ ಬಿ. ರಮೇಶ್ ಹೇಳಿದರು.