ಕನ್ನಡಪ್ರಭ ವಾರ್ತೆ ಕಮತಗಿಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರ ಕೊರತೆಯಿಂದ ಪಟ್ಟಣದ ಸ್ವಚ್ಛತೆಗೆ ಸಾಕಷ್ಟು ತೊಂದರೆಯಾಗಿದೆ. 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಪಂನಲ್ಲಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಕೊರತೆ ಕಳೆದ 5 ವರ್ಷಗಳಿಂದ ಕಾಡುತ್ತಿದ್ದು, ನೇಮಕಾತಿ ಮಾತ್ರ ಆಗುತ್ತಿಲ್ಲ.
ಕನ್ನಡಪ್ರಭ ವಾರ್ತೆ ಕಮತಗಿ
ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರ ಕೊರತೆಯಿಂದ ಪಟ್ಟಣದ ಸ್ವಚ್ಛತೆಗೆ ಸಾಕಷ್ಟು ತೊಂದರೆಯಾಗಿದೆ. 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಪಂನಲ್ಲಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಕೊರತೆ ಕಳೆದ 5 ವರ್ಷಗಳಿಂದ ಕಾಡುತ್ತಿದ್ದು, ನೇಮಕಾತಿ ಮಾತ್ರ ಆಗುತ್ತಿಲ್ಲ.ಪಪಂನಲ್ಲಿ ಒಟ್ಟು 49 ಹುದ್ದೆಗಳಿಗೆ ಸರ್ಕಾರದಿಂದ ಮಂಜೂರಾತಿ ದೊರೆತಿದ್ದು, ಸದ್ಯ 10 ಹೊರಗುತ್ತಿಗೆ ಸಿಬ್ಬಂದಿ, 2 ಗುತ್ತಿಗೆ ಸಿಬ್ಬಂದಿ ಸೇರಿ ಒಟ್ಟು 28 ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. ಪಪಂ ಸಿವಿಲ್ ಕಾಮಗಾರಿಗಳನ್ನು ತ್ವರಿತವಾಗಿ ನಿರ್ವಹಿಸಲು ಜೆಇ ಹುದ್ದೆ ಅವಶ್ಯವಾಗಿದ್ದು, ಅದೇ ಹುದ್ದೆಯೇ ಖಾಲಿಯಿದ್ದು, ಸದ್ಯ ಈ ಹುದ್ದೆಗೆ ಪ್ರಭಾರಿಯಾಗಿ ನೇಮಕಗೊಂಡಿದೆ. ಆದರೆ, ಅವರು ವಾರದಲ್ಲಿ 3 ದಿನ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಾರೆ.
ಇನ್ನೂ ಪಟ್ಟಣದ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕಾದ ಕಿರಿಯ ಆರೋಗ್ಯ ನಿರೀಕ್ಷಕರ ಹುದ್ದೆ, 11 ಪೌರಕಾರ್ಮಿಕರ ಹುದ್ದೆ ಸೇರಿ ಒಟ್ಟು 22 ಹುದ್ದೆಗಳು ಖಾಲಿ ಇದ್ದು, ಇನ್ನೂ ಎಫ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕಳೆದ 8 ವರ್ಷಗಳಿಂದ ವೇತನವನ್ನು ಮಾತ್ರ ಇಲ್ಲಿಯೇ ಪಡೆಯುತ್ತಿದ್ದು, ಕೆಲಸವನ್ನು ಬಾಗಲಕೋಟ ನಗರಸಭೆಯಲ್ಲಿ ನಿರ್ವಹಿಸುತ್ತಿದ್ದಾರೆ.ಇನ್ನೋರ್ವ ವಾಟರ್ ಮ್ಯಾನ್ ಸಿಬ್ಬಂದಿ ಸಹ ಕಳೆದ 3 ವರ್ಷಗಳಿಂದ ವೇತನ ಇಲ್ಲಿಯೇ ಪಡೆದು ಕೆಲಸ ಮಾತ್ರ ಕೆರೂರ ಪಪಂನಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಕಚೇರಿಯಲ್ಲಿರುವ ಸಿಬ್ಬಂದಿ ಮೇಲೆ ಕೆಲ ವಿಭಾಗಗಳ ಸೇವೆಗಳನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿರುವುದರಿಂದ ಕೆಲಸದ ಒತ್ತಡದಲ್ಲಿ ಸಿಲುಕಿದ್ದಾರೆ, ಅಲ್ಲದೆ ಕಡತಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಯೂ ದೊರೆಯುತ್ತಿಲ್ಲ.-----ಬಾಕ್ಸ್...
ಪಟ್ಟಣದ ಸ್ವಚ್ಛತೆಗೆ ಪೌರಕಾರ್ಮಿಕರ ಕೊರತೆ: ಪಟ್ಟಣದಲ್ಲಿ ತ್ಯಾಜ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಪೌರಕಾರ್ಮಿಕರ ಕೊರತೆ ಎದುರಾಗಿದ್ದು, ಪಟ್ಟಣದಲ್ಲಿ 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ನಿತ್ಯ 4ರಿಂದ 5 ಟನ್ ಕಸ ಉತ್ಪತ್ತಿ ಆಗುತ್ತಿದೆ. ಅದನ್ನು ವಿಲೇವಾರಿ ಮಾಡಲು ಪಪಂಗೆ ಸವಾಲಾಗಿ ಪರಿಣಮಿಸಿದೆ. ನಿತ್ಯ 600 ನಾಗರಿಕರಿಗೆ ಒಬ್ಬ ಪೌರಕಾರ್ಮಿಕ ಇರಬೇಕು ಎಂಬ ನಿಯಮವಿದೆ. ಆದರೆ, ಪಪಂನಲ್ಲಿ 24 ಪೌರಕಾರ್ಮಿಕರ ಪೈಕಿ ಕೇವಲ 13 ಪೌರಕಾರ್ಮಿಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಪೌರಕಾರ್ಮಿಕರ ಕೊರತೆಯಿಂದಾಗಿ 16 ವಾರ್ಡಗಳಲ್ಲಿ ನಿತ್ಯ ಸ್ವಚ್ಛತೆ ಕೈಗೊಳ್ಳಲು ಆಗುತ್ತಿಲ್ಲ. ಅಲ್ಲದೇ ಪಟ್ಟಣದ ಸುತ್ತ ಮುತ್ತ 1 ಕಿ.ಮೀ ವ್ಯಾಪ್ತಿಯಲ್ಲಿ ನೂತನ ಬಡಾವಣೆಗಳು ನಿರ್ಮಾಣಗೊಂಡಿದ್ದು, ಅಲ್ಲಿಯೂ ಸಹ ಸ್ವಚ್ಛತಾ ಕಾರ್ಯ ನಿಯಮಿತವಾಗಿ ನಡೆಯುತ್ತಿಲ್ಲ.ಪ್ರತಿದಿನ ಬೆಳಗ್ಗೆ 5.30ಗಂಟೆಯಿಂದ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಆರಂಭಿಸುತ್ತಾರೆ. ಮೇನ ಬಜಾರ, ಗಾಂಧಿಚೌಕ, ಬಸ್ ನಿಲ್ದಾಣ ಸೇರಿ 16 ವಾರ್ಡಗಳಲ್ಲಿ ಪೌರಕಾರ್ಮಿಕರು ಕಸ ಗುಡಿಸುತ್ತಾರೆ. ಕೆಲವು ಪೌರಕಾರ್ಮಿಕರು ಟ್ಯಾಕ್ಟರ್ ಗೆ ಕಸ ತುಂಬಿಸುತ್ತಾರೆ. ಊಳಿದವರು ಚರಂಡಿ ಸ್ವಚ್ಛಗೊಳಿಸುತ್ತೇವೆ ಎನ್ನುತ್ತಾರೆ. ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ನಿತ್ಯ ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಈ ಮಧ್ಯೆ ಹಬ್ಬದ ಸಂದರ್ಭಗಳಲ್ಲಿ ಪಟ್ಟಣದಲ್ಲಿ ಹೆಚ್ಚು ತ್ಯಾಜ್ಯ ಉತ್ಪತ್ತಿ ಆಗುತ್ತದೆ. ಪೌರಕಾರ್ಮಿಕರ ಕೊರತೆಯಿಂದಾಗಿ ಇರುವ ಕಾರ್ಮಿಕರ ಮೇಲೆ ಒತ್ತಡ ಉಂಟಾಗುತ್ತಿದೆ ಎಂದು ಪೌರಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.
ಪ್ರಸ್ತುತ 24 ಕಾರ್ಮಿಕರಲ್ಲಿ 13 ಜನ ಪೌರಕಾರ್ಮಿಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ ಖಾಲಿ ಇರುವ 11 ಪೌರಕಾರ್ಮಿಕರನ್ನು ನೇಮಿಸಿದರೆ ಪಟ್ಟಣದ ಸ್ವಚ್ಛತೆಗೆ ಬಹಳಷ್ಟು ಅನಕೂಲವಾಗಲಿದೆ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.ಕಮತಗಿ ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ಸಿಬ್ಬಂದಿ ಮತ್ತು ಪೌರಕಾರ್ಮಿಕರ 10 ಹುದ್ದೆಗಳು ಖಾಲಿ ಇರುವ ಕುರಿತು ಹಾಗೂ ವೇತನವನ್ನು ಇಲ್ಲಿ ಪಡೆದು ಬೇರೆ ಕಡೆ ಕೆಲಸ ಮಾಡುತ್ತಿರುವ ಸಿಬ್ಬಂದಿ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಆದಷ್ಟು ಬೇಗ ಹುದ್ದೆಗಳ ಭರ್ತಿ ಮಾಡುವ ಕುರಿತು ಭರವಸೆ ನೀಡಿದ್ದಾರೆ.-ಎಫ್ ಎನ್ ಹುಲ್ಲಿಕೇರಿ, ಮುಖ್ಯಾಧಿಕಾರಿ, ಪಪಂ, ಕಮತಗಿಕಮತಗಿ ಗ್ರಾಪಂನಿಂದ ಪಟ್ಟಣ ಪಂಚಾಯಿತಿ ಆದಾಗಿನಿಂದಲೂ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಉತಾರಗಳು ಸಿಗದೆ ತೊಂದರೆಯಾಗುತ್ತಿದ್ದು, ಇನ್ನೂ ಪೌರಕಾರ್ಮಿಕರ ಸಂಖ್ಯೆಯು ಸಹ ಕಡಿಮೆ ಇರುವುದರಿಂದ ಪಟ್ಟಣದ ಸ್ವಚ್ಛತೆಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಕೂಡಲೇ ಮೇಲಧಿಕಾರಿಗಳು ಕಚೇರಿಯಲ್ಲಿನ ಖಾಲಿ ಹುದ್ದೆ ಹಾಗೂ ಪೌರಕಾರ್ಮಿಕರ ಹುದ್ದೆ ಭರ್ತಿಮಾಡಿ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು.
- ಬಾಲಪ್ಪ ಮಾದರ, ಸಮಾಜ ಸೇವಕರು, ಕಮತಗಿ