ರೈತರು ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಬೇಕು: ಅಮರನಾರಾಯಣ ಸಲಹೆ

| Published : Jan 26 2024, 01:46 AM IST

ಸಾರಾಂಶ

ಕಬ್ಬು ಮತ್ತು ಭತ್ತಕ್ಕೆ ಜೋತು ಬೀಳದೆ ರೈತರು ಆರ್ಥಿಕವಾಗಿ ಲಾಭ ತಂದು ಕೊಡುವ ಶ್ರೀಗಂಧ ಸೇರಿದಂತೆ ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘದ ಗೌರವಾಧ್ಯಕ್ಷ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ ಗುರುವಾರ ಹೇಳಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಕಬ್ಬು ಮತ್ತು ಭತ್ತಕ್ಕೆ ಜೋತು ಬೀಳದೆ ರೈತರು ಆರ್ಥಿಕವಾಗಿ ಲಾಭ ತಂದು ಕೊಡುವ ಶ್ರೀಗಂಧ ಸೇರಿದಂತೆ ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಬೇಕು ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘದ ಗೌರವಾಧ್ಯಕ್ಷ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ ಗುರುವಾರ ಹೇಳಿದರು.

ಪಟ್ಟಣದ ತೋಟಗಾರಿಕೆ ಇಲಾಖೆ ತರಬೇತಿ ಉತ್ಕೃಷ್ಟ ಕೇಂದ್ರದಲ್ಲಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಶ್ರೀಗಂಧ ಜೊತೆಗೆ ಮಿಶ್ರ ತೋಟಗಾರಿಕೆ ಮತ್ತು ಸುಗಂಧ ದ್ರವ್ಯ ಕೃಷಿ ಪದ್ಧತಿ ಕುರಿತ ಒಂದು ದಿನದ ರೈತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ತಲೆ ತಲೆಮಾರುಗಳಿಂದ ರೈತರು ಕಬ್ಬು ಮತ್ತು ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತರಾಗಿದ್ದಾರೆ. ಇದರಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೃಷಿಕರು ಇಂತಹ ಸಂಕಷ್ಟದಿಂದ ಹೊರಬಂದು ಪರ್ಯಾಯ ಬೆಳೆಗಳಾದ ಶ್ರೀಗಂಧ ಮತ್ತು ತೋಟಗಾರಿಕೆ ಬೆಳೆಗಳ ಪದ್ಧತಿ ಅನುಸರಿಸಬೇಕು ಎಂದು ಸಲಹೆ ನೀಡಿದರು.

ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕೆ ಉತ್ತಮ ಬೆಲೆ ಇದೆ. ಮರ ಮತ್ತು ಅದರ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ಲಭ್ಯವಿದೆ. ರೈತರು ಶ್ರೀಗಂಧ ಬೆಳೆಯಿಂದ ಸುಲಭವಾಗಿ ಆರ್ಥಿಕ ಅಭಿವೃದ್ಧಿ ಸಾಧಿಸಬಹುದು ಎಂದು ತಿಳಿಸಿದರು.

ಶ್ರೀಗಂಧ ವೇದಕಾಲದಿಂದಲೂ ಬಹು ಮಾನ್ಯತೆ ಪಡೆದ ವೃಕ್ಷವಾಗಿದೆ. ಈ ಹಿಂದೆ ಶ್ರೀಗಂಧ ಮರವು ಯಾವುದೇ ಪ್ರದೇಶದಲ್ಲಿ ಇರಲಿ ಅದು ಸರ್ಕಾರದ ಸ್ವತಾಗಿತ್ತು. ನಂತರ ದಿನಗಳಲ್ಲಿ ಅರಣ್ಯ ಕಾಯ್ದೆ 2001ರ ತಿದ್ದುಪಡಿ ಪ್ರಕಾರ ಯಾವ ರೈತರ ಜಮೀನಿನಲ್ಲಿ ಶ್ರೀಗಂಧ ಮರ ಇರುತ್ತದೆ. ಅದು ಜಮೀನಿನ ಮಾಲೀಕನ ಸ್ವತ್ತು ಎಂದು ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಕಾನೂನಿನ ಪ್ರಕಾರ ಬೆಳೆದವರು ಶ್ರೀಗಂಧ ಮರದ ಒಡೆಯರಾಗುತ್ತಾರೆ ಎಂದು ಹೇಳಿದರು.

ಶ್ರೀಗಂಧ ಜೊತೆಗೆ ತೋಟಗಾರಿಕೆ ಬೆಳೆಗಳಾದ ಮಾವು, ಹಲಸು ಮತ್ತು ಸಪೋಟ ಬೆಳಗಳ ಮಧ್ಯೆ ಮಿಶ್ರ ಬೆಳೆಯಾಗಿ ಬೆಳೆದಲ್ಲಿ ಸಸ್ಯ ವೈವಿದ್ಯತೆಯನ್ನು ಕಾಪಾಡುವ ಜೊತೆಗೆ ಗಿಡಗಳು ಬೆಳೆದಂತೆ ತೋಟದ ಮೌಲ್ಯ ಅಧಿಕವಾಗುವುದರೊಂದಿಗೆ 15 ರಿಂದ 20 ವರ್ಷ ಗಳಲ್ಲಿ ಅತ್ಯಧಿಕ ಲಾಭಗಳಿಸುವ ಪರ್ಯಾಯಗಳ ಪದ್ಧತಿಯಾಗಿ ಮಾರ್ಪಾಡಾಗುತ್ತದೆ ಎಂದು ಸಲಹೆ ನೀಡಿದರು.

ಈ ವೇಳೆ ಸಂಘದ ಗೌರವ ಉಪಾಧ್ಯಕ್ಷ , ನಿವೃತ್ತ ಎಸ್ಪಿ ಯು. ಶರಣಪ್ಪ, ಸಂಘದ ಜಿಲ್ಲಾ ಘಟಕದ ಗೌರವ ಜಿಲ್ಲಾಧ್ಯಕ್ಷ ಕಪನಿಗೌಡ, ತಾಲೂಕು ತೋಟಗಾರಿಕೆ ಇಲಾಖೆ ತರಬೇತಿ ಉತ್ಕೃಷ್ಟ ಕೇಂದ್ರದ ಉಪ ನಿರ್ದೇಶಕ ಎಂ.ಎಸ್. ರಾಜು ಹಲವರು ಇದ್ದರು.