ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವೇದಿಕೆಗಳ ಮೇಲೆ, ಬೀದಿಗಳಲ್ಲಿ ವಿಶ್ವಶಾಂತಿ ಎಂದು ಘೋಷಣೆ ಕೂಗುವುದರಿಂದ ಜಗತ್ತು ಬದಲಾಗುವುದಿಲ್ಲ. ಸನ್ನಿವೇಶಗಳು ಹೇಗೆಯೇ ಇರಲಿ, ನಾವು ಪ್ರೀತಿಯಿಂದ, ನೆಮ್ಮದಿಯಿಂದ ಇರುವುದು ಕಲಿಯಬೇಕು ಎಂದು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.

ನಗರದ ಹೂರವಲಯದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು,

ಜಗತ್ತಿನಲ್ಲಿ ಸಮಾಜ, ರಾಷ್ಟ್ರ ಅಥವಾ ವಿಶ್ವ ಎಂಬುದು ಸ್ವತಂತ್ರವಾಗಿ ಅಸ್ತಿತ್ವದಲ್ಲಿಲ್ಲ. ನೀವೊಬ್ಬರು, ನಾನೊಬ್ಬರು ಸೇರಿದರೆ ಮಾತ್ರ ಇಲ್ಲಿ ಸಮಾಜ ನಿರ್ಮಾಣವಾಗುತ್ತದೆ. ವ್ಯಕ್ತಿಗತವಾಗಿ ನಮ್ಮಲ್ಲಿ ಪ್ರೀತಿ, ಕರುಣೆ ಹಾಗೂ ಅರಿವು ಮೂಡಿದಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಯುವಕರೆಂದರೆ ವಯಸ್ಸಿನ ಮಿತಿಯಲ್ಲ, ನಮ್ಮಲ್ಲಿ ಜೀವಂತಿಕೆ ಇರುವವರೆಗೂ ನಾವೆಲ್ಲರೂ ಯುವಕರೇ ಆಗಿರುತ್ತೇವೆ. ಮಾನವ ಕೇವಲ ಪ್ರಾಣಿಜನ್ಯ ಪ್ರವೃತ್ತಿಗಳಿಂದ ಬದುಕುವ ಜೀವಿ ಅಲ್ಲ. ಆತ ತಾನು ಹೇಗೆ ಬಾಳಬೇಕು ಎಂಬುದನ್ನು ಅರಿತಿರುವ ಅಸ್ತಿತ್ವದ ಸ್ವರೂಪ. ಪ್ರಾಣಿಗಳು ಕೇವಲ ಪ್ರಚೋದನೆಗಳಿಗೆ ಪ್ರತಿಕ್ರಿಯಿಸುತ್ತ ಪ್ರಕೃತಿಯ ಸಹಜ ಪ್ರವೃತ್ತಿಯಂತೆ ಬದುಕುತ್ತವೆ. ಆದರೆ ಮಾನವನಿಗೆ ಜೀವನದಲ್ಲಿ ಎದುರಾಗುವ ಯಾವುದೇ ಸನ್ನಿವೇಶದಲ್ಲೂ ತಾನು ಹೇಗೆ ಇರಬೇಕು ಎಂದು ನಿರ್ಧರಿಸುವ ಅದ್ಭುತ ಸಾಮರ್ಥ್ಯವಿದೆ.


ಜೀವ ವಿಕಾಸದ ಹಾದಿಯಲ್ಲಿ ಅನೇಕ ಹಂತಗಳನ್ನು ದಾಟಿ ನಾವಿಂದು ಅತ್ಯುನ್ನತ ಮಟ್ಟದ ಪ್ರಜ್ಞೆಯನ್ನು ಪಡೆದುಕೊಂಡಿದ್ದೇವೆ. ಆದರೆ ಇಂದಿನ ಆಧುನಿಕ ವಿಜ್ಞಾನ ಹಾಗೂ ಡಿಎನ್‍ಎ ಸಂಶೋಧನೆಗಳು ಹೇಳುವಂತೆ, ಮಾನವ ಮತ್ತು ಚಿಂಪಾಂಜಿಯ ಡಿಎನ್‍ಎ ರಚನೆಗಳ ನಡುವೆ ಕೇವಲ ಶೇ.1.23ರಷ್ಟು ಮಾತ್ರ ವ್ಯತ್ಯಾಸವಿದೆ. ಶಾರೀರಿಕವಾಗಿ ನಾವು ಚಿಂಪಾಂಜಿಗೆ ಅತ್ಯಂತ ಹತ್ತಿರವಾಗಿದ್ದರೂ, ಬುದ್ಧಿಶಕ್ತಿ ಹಾಗೂ ಜಾಗೃತಿಯಲ್ಲಿ ಜಗತ್ತಿನಲ್ಲಿಯೇ ಭಿನ್ನ ಹಾಗೂ ಉನ್ನತ ಸ್ಥಾನದಲ್ಲಿದ್ದೇವೆ. ಈ ಅದ್ಭುತ ಬುದ್ಧಿಶಕ್ತಿಯನ್ನು ನಾವಿಂದು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬುದು ಚಿಂತಿಸಬೇಕಾದ ವಿಷಯವಾಗಿದೆ. ನಮ್ಮ ಬುದ್ಧಿಶಕ್ತಿಯೇ ನಮಗೆ ಸಮಸ್ಯೆಯಾಗಬಾರದು, ಅದು ನಮ್ಮ ಏಳ್ಗೆಯ ಪರಿಹಾರವಾಗಬೇಕು ಎಂದರು.

ಭೂಮಿಯ ಮೇಲಿರುವ ಎಲ್ಲಾ ಯಂತ್ರೋಪಕರಣ ಹಾಗೂ ತಂತ್ರಜ್ಞಾನಗಳಿಗಿಂತ ಮನುಷ್ಯನ ದೇಹ ಮತ್ತು ಮನಸ್ಸಿನ ತಂತ್ರಜ್ಞಾನವೇ ಅತ್ಯಂತ ಶ್ರೇಷ್ಠ ಹಾಗೂ ಅತ್ಯುನ್ನತವಾದುದಾಗಿದೆ. ಆದರೆ ಇದರ ಸರಿಯಾದ ಬಳಕೆಯ ವಿಧಾನ ತಿಳಿಯದೆ ನಾವಿಂದು ಬದುಕಿನುದ್ದಕ್ಕೂ ಹೆಣಗಾಡುತ್ತಿದ್ದೇವೆ. ಪ್ರಾಣಿಗಳಾಗಿದ್ದರೆ ತಮಗೆ ಇಷ್ಟಬಂದ ಹಾಗೆ ತಿಂದು, ತಮಗೆ ಬೇಕಾದ ಕಡೆ ಮಲಗಿ, ಸಂತಾನೋತ್ಪತ್ತಿ ನಡೆಸಿ ಕೊನೆಗೆ ಮರಣ ಹೊಂದುತ್ತಿದ್ದವು. ಅದರಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ. ಆದರೆ, ಮನುಷ್ಯನಿಗೆ ಅಷ್ಟೇ ಸಾಲುವುದಿಲ್ಲ. ಪ್ರಾಣಿಗಳಂತೆ ದಿನನಿತ್ಯದ ಕ್ರಿಯೆಗಳನ್ನು ನಡೆಸಿದರೂ ಬದುಕಿನಲ್ಲಿ ಏನೋ ಒಂದು ಅಪೂರ್ಣತೆಯ ಭಾವ ಕಾಡುತ್ತಲೇ ಇರುತ್ತದೆ. ತಿನ್ನುವುದು, ಮಲಗುವುದು, ಸಂತಾನೋತ್ಪತ್ತಿ ಮಾಡುವುದು ನಮ್ಮ ದೈಹಿಕ ಮತ್ತು ಮಾನಸಿಕ ಅಸ್ತಿತ್ವದ ಪ್ರಕ್ರಿಯೆಗಳಷ್ಟೇ ಹೊರತು ಇಡೀ ಜೀವ ಬದುಕುವ ಸಂಪೂರ್ಣ ಮಾರ್ಗವಲ್ಲ ಎಂದು ಸದ್ಗುರು ಅಭಿಪ್ರಾಯಪಟ್ಟರು.

ಆಧ್ಯಾತ್ಮ ಎಂದರೆ ಕೇವಲ ದೇವಸ್ಥಾನ, ಚರ್ಚ್ ಅಥವಾ ಮಸೀದಿಗಳಿಗೆ ಭೇಟಿ ನೀಡುವುದಲ್ಲ. ಕಲೆ, ಕ್ರೀಡೆ ಅಥವಾ ಯಾವುದೇ ಕೆಲಸದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದೇ ನಿಜವಾದ ಆಧ್ಯಾತ್ಮಿಕ ಪ್ರಕ್ರಿಯೆ. ಕಲೆ, ಸಂಗೀತ ಮತ್ತು ಕ್ರೀಡೆಗಳು ನಮ್ಮಿಂದ ಇಂತಹ ಪರಮಾವಧಿಯ ತೊಡಗಿಸಿಕೊಳ್ಳುವಿಕೆಯನ್ನು ಬೇಡುತ್ತವೆ. ಈ ಆಳವಾದ ತೊಡಗಿಸಿಕೊಳ್ಳುವಿಕೆಯೇ ಆಧ್ಯಾತ್ಮ ಎಂದು ಸ್ಪಷ್ಟಪಡಿಸಿದರು.

ಚಿತ್ರದುರ್ಗ ಜಿಲ್ಲೆಯು ಕರ್ನಾಟಕದ ಕೇಂದ್ರ ಭಾಗದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿ ಹಾದು ಹೋಗುತ್ತವೆ. ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಸನ್ನಿಧಿ ನಿರ್ಮಾಣವಾಗಿರುವ ಮಾದರಿಯಲ್ಲೇ ಚಿತ್ರದುರ್ಗ ದಲ್ಲೂ ಭವ್ಯ ಆಧ್ಯಾತ್ಮಿಕ ಕೇಂದ್ರವೊಂದು ನಿರ್ಮಾಣವಾಗಬೇಕು ಎಂದು ಸ್ಥಳೀಯ ಭಕ್ತರು ಹಾಗೂ ಪೀಠದ ಅನುಯಾಯಿಗಳು ಸದ್ಗುರುಗಳಲ್ಲಿ ಆಶಯ ವ್ಯಕ್ತಪಡಿಸಿದರು.

ಆರಂಭದಲ್ಲಿ ಶಿವಶರಣ ಮಾದಾರ ಚನ್ನಯ್ಯನವರನ್ನು ಸ್ಮರಿಸುತ್ತಾ ಮಹಾಕಾಲ ಯೋಗೀಶ್ವರ ಎಂಬ ಶ್ಲೋಕವನ್ನು ಹಾಡುವ ಮೂಲಕ ಸದ್ಗುರುಗಳು ಸಭಿಕರನ್ನು ಮಂತ್ರಮುಗ್ಧಗೊಳಿಸಿದರು. ನಂತರ ತಮ್ಮದೇ ಆದ ವಿಶಿಷ್ಟ ಹಾಸ್ಯ ಹಾಗೂ ಆಳವಾದ ಆಧ್ಯಾತ್ಮಿಕ ಚಿಂತನೆಗಳ ಮೂಲಕ ನೆರೆದಿದ್ದವರ ಗಮನ ಸೆಳೆದರು.

ಮುರುಘಾ ಮಠದ ಡಾ ಬಸವಕುಮಾರ ಸ್ವಾಮೀಜಿ, ಅಥಣಿ ಶಿವಯೋಗಾಶ್ರಮದ ಶಿವಬಸವ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಕಬೀರಾನಂದ ಮಠದ ಶಿವಲಿಂಗಾನಂದ ಶ್ರೀಗಳು ಉಪಸ್ಥಿತರಿದ್ದರು.