ಸಾರಾಂಶ
ಜಿ.ಮಲ್ಲಿಕಾರ್ಜುನಪ್ಪ ಬಾಸ್ಕೆಟ್ ಬಾಲ್ ಮೆಮೋರಿಯಲ್ ಕಪ್‌ಗೆ ಚಾಲನೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಭವ್ಯ ಭವಿಷ್ಯಕ್ಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡರಲ್ಲೂ ನಿಮ್ಮ ಭವಿಷ್ಯ ಅಡಗಿದೆ. ಪಠ್ಯದ ಮುಖೇನ ಜ್ಞಾನ ಪಡೆದರೆ, ಕ್ರೀಡೆಯಂಥ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ, ಸಾಧನೆ ಮಾಡಬಹುದು ಎಂದು ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಹೇಳಿದರು.ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಜಿ.ಮಲ್ಲಿಕಾರ್ಜುನಪ್ಪ ಸ್ಮರಣಾರ್ಥ ಜಿ. ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಕಪ್ ಶೀರ್ಷಿಕೆಯಡಿ ಆಯೋಜಿಸಿದ್ದ ರಾಜ್ಯಮಟ್ಟದ ಪದವಿ ವಿದ್ಯಾರ್ಥಿಗಳ ಪುರುಷ, ಮಹಿಳೆಯರು ಹೊನಲು ಬೆಳಕಿನ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದಾವಣಗೆರೆ, ಹಾಸನ, ಮೈಸೂರು, ಧಾರವಾಡ, ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವೈದ್ಯಕೀಯ, ಎಂಜಿನಿಯರಿಂಗ್, ದಂತ ವೈದ್ಯಕೀಯ ಸೇರಿದಂತೆ ಎಲ್ಲ ಪದವಿ ಕಾಲೇಜುಗಳಿಂದ ಸುಮಾರು 30 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಈಗಾಗಲೇ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಕಷ್ಟು ತಂಡಗಳು ಭಾಗವಹಿಸಿರುವುದೇ ಸಾಕ್ಷಿ. ಪಂದ್ಯಾವಳಿಯಲ್ಲಿ ಭಾಗವಹಿಸಲಿಚ್ಚಿಸುವ ಕ್ರೀಡಾಪಟುಗಳಿಗೂ ಸ್ಥಳದಲ್ಲೇ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದರು.ಸಂಶೋಧನಾ ವಿಭಾಗದ ಡೀನ್ ಡಾ. ಕೆ.ಎನ್. ಭರತ್, ಡಾ. ಎಚ್.ಎಸ್. ಕಿರಣಕುಮಾರ, ಜಿ.ಬಿ.ಅಜ್ಜಯ್ಯ, ಪ್ರಾಚಾರ್ಯರು, ನಿರ್ದೇಶಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನ.30ರಂದು ಸಮಾರೋಪ:ಪಂದ್ಯಾವಳಿಯ ಸಮಾರೋಪ ನ.30ರ ಸಂಜೆ 7 ಗಂಟೆಗೆ ನಡೆಯಲಿದೆ. ವಿಜೇತರಿಗೆ ಜಿಎಂ ವಿವಿ ಕುಲಾಧಿಪತಿ ಜಿ.ಎಂ. ಲಿಂಗರಾಜು ಬಹುಮಾನ ವಿತರಿಸುವರು. ಕುಲಸಚಿವ ಡಾ. ಬಿ.ಎಸ್. ಸುನೀಲಕುಮಾರ, ಡಾ. ಕೆ.ಎನ್. ಭರತ್, ಡಾ. ಎಚ್.ಎಸ್. ಕಿರಣಕುಮಾರ, ಜಿ.ಬಿ.ಅಜ್ಜಯ್ಯ ಇತರರು ಭಾಗವಹಿಸುವರು.
- - - -29ಕೆಡಿವಿಜಿ 37, 38: ದಾವಣಗೆರೆಯ ಜಿಎಂ ವಿವಿಯಲ್ಲಿ ನಡೆದ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಕುಲಪತಿ ಡಾ.ಎಸ್.ಆರ್.ಶಂಕಪಾಲ್ ಉದ್ಘಾಟಿಸಿದರು.