ಸಾರಾಂಶ
ಕನ್ನಡಪ್ರಭ ವಾರ್ತೆ ಬೀರೂರು
ಮತಗಳ್ಳತನದ ಮೂಲಕ ದೇ ಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ ಬುಡಮೇಲು ಮಾಡುತ್ತಿದೆ. ಈ ಅಕ್ರಮದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜನಜಾಗೃತಿ ಮೂಡಿಸಬೇಕು ಎಂದು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್ ಹೇಳಿದರು.ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ಬುಧವಾರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ‘ಓಟ್ ಚೋರಿ’ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಸೂಕ್ತ ಎಂಬುದನ್ನು ಸ್ವಾತಂತ್ರ‍್ಯ ಹೋರಾಟಗಾರರು ೧೯೪೭ಕ್ಕೂ ಮುನ್ನವೇ ಅರಿತಿದ್ದರು. ನಿಷ್ಪಕ್ಷಪಾತ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಸ್ವಾಯತ್ತತೆ ನೀಡಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಚುನಾವಣಾ ಆಯೋಗದ ಸಾಂವಿಧಾನಿಕ ಚೌಕಟ್ಟಿಗೆ ಧಕ್ಕೆ ಉಂಟಾಗಿರಲಿಲ್ಲ. ಆದರೆ, ಬಿಜೆಪಿ ಅಧಿಕಾರ ಹಿಡಿದ ಬಳಿಕ ಚುನಾವಣಾ ಆಯೋಗವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ ಎಂದು ದೂರಿದರು.ಶಾಸಕ ಕೆ.ಎಸ್.ಆನಂದ್ ಮಾತನಾಡಿ, ‘ಮತಗಳ್ಳತನ ಮಾಡುವ ಮೂಲಕ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಮತದಾರರ ಪಟ್ಟಿಯಲ್ಲಿ ಸುಳ್ಳು ಹೆಸರು ಇರುವುದನ್ನು ಕಾಂಗ್ರೆಸ್ ಸಾಕ್ಷ್ಯ ಸಮೇತ ಜನರ ಮುಂದಿಟ್ಟಿದೆ. ಒಬ್ಬ ಮತದಾರ ಹಲವು ಕ್ಷೇತ್ರಗಳಲ್ಲಿ ಮತ ಚಲಾವಣೆ ಮಾಡಿರುವುದು ಪತ್ತೆಯಾಗಿದೆ. ಇದರ ವಿಡಿಯೊ ದಾಖಲೆಗಳನ್ನು ಬಿಡುಗಡೆ ಮಾಡಲು ಚುನಾವಣಾ ಆಯೋಗ ಮೀನ–ಮೇಷ ಎಣಿಸುತ್ತಿದೆ. ಆಯೋಗ ಪಾರ‍್ಶಕ ಹಾಗೂ ಪ್ರಾಮಾಣಿಕ ನಡವಳಿಕೆ ಹೊಂದಿದ್ದರೆ ಈ ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದರು.
ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ. ಪ್ರತಿಯೊಬ್ಬರ ಮತದಾನದ ಹಕ್ಕು ಕಾಪಾಡುವುದು ಆಯೋಗದ ಜವಾಬ್ದಾರಿ. ನಿಷ್ಪಕ್ಷಪಾತವಾಗಿ ರ‍್ಯರ‍್ವಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಆದರೆ, ಆಯೋಗ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಆಶಯಗಳನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ ಎಂದರು.ಕಾಂಗ್ರೆಸ್ ಕಾರ್ಯಕರ್ತರು ಬೂತ್‌ಮಟ್ಟದಿಂದ ಹಿಡಿದು ಕ್ಷೇತ್ರದ ಮತಪಟ್ಟಿಯನ್ನು ಆಗಾಗ ಪರಿಶೀಲನೆ ನಡೆಸಬೇಕು. ಸದ್ಯದಲ್ಲಿಯೇ ಗ್ರಾಮ ಪಂಚಾಯಿತಿ ಮತ್ತು ಪುರಸಭೆ ಚುನಾವಣೆಗಳು ಎದುರಾಗಲಿದ್ದು ಈಗಿನಿಂದಲೇ ಮತಪಟ್ಟಿಯನ್ನು ತರಿಸಿಕೊಂಡು ಅದರಲ್ಲಿ ನಿಮ್ಮವರ ಹೆಸರು ಏನಾದರೂ ಅದಲು ಬದಲಿಯಾಗಿದ್ದರೇ ಸರಿಪಡಿಕೊಳ್ಳಿ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್ ಮಾತನಾಡಿ, ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಈ ಸಹಿ ಅಭಿಯಾನದ ಮುಖಾಂತರ ಎಚ್ಚೆತ್ತುಕೊಂಡು ಮತಗಳವು ಮಾಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಬೇಕು ಎಂದರು.ಪುರಸಭೆ ಮಾಜಿ ಅಧ್ಯಕ್ಷ ವಿ.ಜಯರಾಂ, ಸದಸ್ಯರಾದ ಗಂಗಾಧರ್, ಮಾನಿಕ್ ಭಾಷ, ಬಿ.ಕೆ.ಶಶಿಧರ್, ಎಲೆರವಿಕುಮಾರ್, ರಾಜು, ಲೋಕೇಶಪ್ಪ, ಯುತ್ ಕಾಂಗ್ರೆಸ್ ಅಧ್ಯಕ್ಷ ಮನೋಹರ್, ಅಲ್ಪಸಂಖ್ಯಾತರ ರಾಜ್ಯ ಕಾರ್ಯದರ್ಶಿ ಆರೀಫ್, ಜಿಯಾವುಲ್ಲಾ, ಮುಖಂಡರಾದ ಬಾವಿಮನೆ ಮಧು, ಗಂಟೆಕುಮಾರ್ ಸೇರಿದಂತೆ ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಸಿದ್ದರು.