ಕನ್ನಡಪ್ರಭ ವಾರ್ತೆ ಹೊಸಕೋಟೆ

ರಕ್ತದಾನವು ಜೀವದಾನಕ್ಕೆ ಸಮಾನವಾಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ಭಾಗಿಯಾಗಬೇಕು ಎಂದು ಹೊಸಕೋಟೆ ಲಯನ್ಸ್ ಅಧ್ಯಕ್ಷ ಎಚ್.ಎಸ್.ಅನಿಲ್ ಕುಮಾರ್ ತಿಳಿಸಿದರು.

ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಲಯನ್ಸ್, ಸಿವಿ ರಾಮನ್ ನಗರ ಆಸ್ಪತ್ರೆ, ಹೊಸಕೋಟೆ ಸಾರ್ವಜನಿಕರ ಆಸ್ಪತ್ರೆ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಅಪಘಾತಗಳು, ಶಸ್ತ್ರಚಿಕಿತ್ಸೆಗಳು ಹಾಗೂ ತುರ್ತು ಚಿಕಿತ್ಸೆಗಳ ಸಂದರ್ಭದಲ್ಲಿ ರಕ್ತದ ಅಗತ್ಯ ಹೆಚ್ಚಾಗಿರುವುದರಿಂದ ರಕ್ತದಾನಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಲಯನ್ಸ್ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ದೇಶದ ಉದ್ದಗಲಕ್ಕೂ ಆಯೋಜಿಸುವ ಮೂಲಕ ರಕ್ತದ ಬೇಡಿಕೆ ಪೂರೈಸಲು ಅಲ್ಪ ಪ್ರಯತ್ನವನ್ನು ಮಾಡಲಾಗುತ್ತಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಯುವ ಸಮೂಹ ರಕ್ತದಾನ ಮಾಡುವಲ್ಲಿ ಮುಂದಾಗಬೇಕು. ಇದೊಂದು ಮಾನವೀಯ ಸೇವೆಯಾಗಿದೆ ಎಂದು ತಿಳಿಸಿದರು.

ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಅನ್ಬುಸೆಲ್ವಂ ಮಾತನಾಡಿ, ಕೊರೋನಾ ಮಹಾಮಾರಿ ನಂತರದ ದಿನಗಳಲ್ಲಿ ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರುತ್ತಿಲ್ಲ. ಹಾಗಾಗಿ ದೇಶದಲ್ಲಿ ರಕ್ತದ ಬೇಡಿಕೆ ಹೆಚ್ಚಾಗಿದೆ. ರಕ್ತದಾನ ಮಾಡಿದರೆ 24 ಗಂಟೆ ಒಳಗೆ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗಲಿದೆ. ಈ ಹಿನ್ನೆಲೆ ರಕ್ತದಾನ ಮಾಡಲು ಆತಂಕ ಬೇಡ, ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಎಂದು ಸಲಹೆ ನೀಡಿದರು.


ಶಿಬಿರದಲ್ಲಿ ಯುವಕರು, ಮಹಿಳೆಯರು ಹಾಗೂ ವಿವಿಧ ಸಂಘ- ಸಂಸ್ಥೆಗಳ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು. ವೈದ್ಯರ ತಂಡವು ರಕ್ತದಾನಕ್ಕೂ ಮುನ್ನ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆಗಳನ್ನು ನೀಡಿತು. ಒಟ್ಟು ೫೦ ಯುನಿಟ್ ರಕ್ತ ಸಂಗ್ರಹವಾಗಿದ್ದು, ಸಂಗ್ರಹಿಸಿದ ರಕ್ತವನ್ನು ಸರ್ಕಾರಿ ರಕ್ತನಿಧಿಗೆ ಹಸ್ತಾಂತರಿಸಲಾಯಿತು. ರಕ್ತದಾನ ಮಾಡಿದ ಎಲ್ಲ ದಾನಿಗಳಿಗೆ ಪ್ರಶಂಸಾ ಪತ್ರ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಅನ್ಬುಸೆಲ್ವಂ, ಲಯನ್ಸ್ ಕಾರ್ಯದರ್ಶಿ ದಿನಕರ್, ಖಜಾಂಚಿ ಮಹೇಶ್, ಲಯನ್ಸ್ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸಯ್ಯ, ಕಾರ್ಯದರ್ಶಿ ಷಣ್ಮುಗಂ, ನಿರ್ದೇಶಕ ಮುರಳಿ, ಸಿ.ವಿ ರಾಮನ್ ನಗರ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶೀಲಾ ಸೇರಿದಂತೆ ಸಾರ್ವಜನಿಕರು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.