ಕಷ್ಟಪಟ್ಟು ನಿರ್ಮಿಸುವ ದೇವಸ್ಥಾನಗಳಲ್ಲಿ ನಿರಂತವಾಗಿ ಪೂಜೆಗಳು ನಡೆದರೆ ಮಾತ್ರ ಊರಿಗೆ ಹಾಗೂ ನಾಡಿಗೆ ಒಳ್ಳೆಯದಾಗುತ್ತದೆ. ಹಾಗಾಗಿ ದೇವಸ್ಥಾನವನ್ನು ಕಟ್ಟುವುದು ಎಷ್ಟು ಮುಖ್ಯವೋ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದೂ ಕೂಡ ಅಷ್ಟೇ ಮುಖ್ಯ.
ಕನ್ನಡಪ್ರಭ ವಾರ್ತೆ ನಾಗಮಂಗಲ
ದೇವರನ್ನು ಎಷ್ಟು ಶ್ರದ್ಧೆ ಭಕ್ತಿಯಿಂದ ಪೂಜಿಸುತ್ತೇವೆಯೋ ಅಷ್ಟೇ ಮುಖ್ಯವಾಗಿ ಗ್ರಾಮಸ್ಥರು ಊರಿನ ಅಭಿವೃದ್ಧಿ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ತೆಂಗಿನಭಾಗ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಬೀರೇಶ್ವರಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹಳ್ಳಿಗಳಲ್ಲಿ ದೇವಸ್ಥಾನಗಳನ್ನು ಕಟ್ಟುವುದರಿಂದ ಯಾರಿಗೆ ಏನು ಲಾಭ ಎನ್ನುವುದಕ್ಕಿಂತ ಪ್ರತಿಯೊಬ್ಬರ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ ಎಂದರು.
ಕಷ್ಟಪಟ್ಟು ನಿರ್ಮಿಸುವ ದೇವಸ್ಥಾನಗಳಲ್ಲಿ ನಿರಂತವಾಗಿ ಪೂಜೆಗಳು ನಡೆದರೆ ಮಾತ್ರ ಊರಿಗೆ ಹಾಗೂ ನಾಡಿಗೆ ಒಳ್ಳೆಯದಾಗುತ್ತದೆ. ಹಾಗಾಗಿ ದೇವಸ್ಥಾನವನ್ನು ಕಟ್ಟುವುದು ಎಷ್ಟು ಮುಖ್ಯವೋ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದೂ ಕೂಡ ಅಷ್ಟೇ ಮುಖ್ಯ ಎಂದರು.ದೇವಸ್ಥಾನ ನಿರ್ಮಾಣ ಸೇರಿದಂತೆ ಹಳ್ಳಿಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡುವಾಗ ಗ್ರಾಮಸ್ಥರ ನಡುವೆ ಒಗ್ಗಟ್ಟು ಅತಿ ಮುಖ್ಯ. ಪ್ರೀತಿ ವಿಶ್ವಾಸದಿಂದ ಯಾವುದೇ ಕೆಲಸ ಮಾಡಬಹುದು, ವೈಯುಕ್ತಿಕ ವೈಷಮ್ಯದಿಂದ ಹಳ್ಳಿಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಗ್ರಾಮಸ್ಥರ ಶ್ರಮದ ಫಲವಾಗಿ ದೇವಸ್ಥಾನ ನಿರ್ಮಾಣಗೊಂಡು ಇಂದು ಲೋಕಾರ್ಪಣೆಯಾಗಿದೆ. ಬೀರೇಶ್ವರಸ್ವಾಮಿ ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತರು ಬಂದು ಹೋಗುವ ಹಿನ್ನೆಲೆಯಲ್ಲಿ ಹೆತ್ತಗೋನಹಳ್ಳಿ ತೆಂಗಿನಭಾಗ ಮುಖ್ಯ ರಸ್ತೆಯಿಂದ ದೇವಸ್ಥಾನದ ಮುಂಭಾಗದ ವರೆಗೆ ಶೀಘ್ರದಲ್ಲಿಯೇ ಡಾಂಬರು ರಸ್ತೆ ನಿರ್ಮಿಸಿಕೊಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.ಇದಕ್ಕೂ ಮುನ್ನ ತಾಲೂಕಿನ ದಡಗ ಗ್ರಾಮದಲ್ಲಿ ಶ್ರೀವೀರಭದ್ರೇಶ್ವರಸ್ವಾಮಿ, ಶ್ರೀಕೊಲ್ಲಾಪುರದಮ್ಮದೇವಿ ದೇವಸ್ಥಾನ ಉದ್ಘಾಟನೆ, ಕೆ.ಮಲ್ಲೇನಹಳ್ಳಿ ಗ್ರಾಮದಲ್ಲಿ ಬೃಂದಾವನ ಸಹಿತ ಶ್ರೀಕೃಷ್ಣಸ್ವಾಮಿ, ಸಪ್ತಮಾತೃಕೆಯರ ಸಹಿತ ಶ್ರೀ ಬಂಬೂರಮ್ಮದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ನೂತನ ದೇವಸ್ಥಾನ ಉದ್ಘಾಟನೆ, ಗಂಗನಹಳ್ಳಿಯಲ್ಲಿ ಶ್ರೀ ಮಾರಮ್ಮದೇವಿ ದೇವಾಲಯ ಹಾಗೂ ನೂತನ ಹೆಬ್ಬಾಗಿಲು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ತಾಪಂ ಮಾಜಿ ಸದಸ್ಯರಾದ ರಾಜು, ಜವರಪ್ಪ, ಮುಖಂಡರಾದ ಸುನಿಲ್ ಲಕ್ಷ್ಮೀಕಾಂತ್, ರವಿಭೋಜೇಗೌಡ, ಯೋಗೇಶ್, ಶಿವರಾಜು, ಅಲ್ಪಹಳ್ಳಿ ಕೃಷ್ಣೇಗೌಡ, ಆರ್.ಕೃಷ್ಣೇಗೌಡ, ಸಂಪತ್‌ಕುಮಾರ್ ಸೇರಿದಂತೆ ಹಲವರು ಇದ್ದರು.