ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ವಿವಿಧ ಹೋಬಳಿಗಳಲ್ಲಿ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಜೋರಾಗಿ ನಡೆಯುತ್ತಿದ್ದು, ಬುಧವಾರ ನಗರದ ವಿದ್ಯಾಶಂಕರ ಪ್ರೌಢಶಾಲೆಯಲ್ಲಿ ಎ–ವಲಯ ಮಟ್ಟದ ಕಾರಂಜಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್, ವಿದ್ಯಾರ್ಥಿಗಳಲ್ಲಿರುವ ಅಡಗಿದ ಪ್ರತಿಭೆಗಳನ್ನು ಅನಾವರಣಗೊಳಿಸಿ, ಅವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿಯನ್ನು ರೂಪಿಸಿದೆ. ಆತ್ಮವಿಶ್ವಾಸದಿಂದ ನಿಮ್ಮ ಕಲೆಯನ್ನು ತೀರ್ಪುಗಾರರ ಮುಂದೆ ಪ್ರದರ್ಶಿಸಿ, ತಾಲೂಕು–ಜಿಲ್ಲಾ–ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಕೀರ್ತಿ ತರುವ ಸಾಮರ್ಥ್ಯವು ನಿಮ್ಮೆಲ್ಲರಿಗೂ ಇದೆ ಎಂದು ಹೇಳಿದರು.ಸರ್ಕಾರಿ ನೌಕರರ ಸಂಘದ ನಿರ್ದೇಶಕಿ ಕಮಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳ ಕಲಿಕೆಯ ಹಾದಿಯಲ್ಲಿ ಮೊಬೈಲ್ ವ್ಯಸನ ಗಂಭೀರ ಅಡ್ಡಿಯಾಗುತ್ತಿದೆ. ಭವಿಷ್ಯ ಸುಂದರವಾಗಬೇಕಾದರೆ ಶಿಕ್ಷಣವೇ ಆಧಾರ. ಸತ್ಪ್ರಜೆಗಳಾಗಿ ರಾಷ್ಟ್ರದ ಶಕ್ತಿಯಾಗಬೇಕು ಎಂದು ಸಲಹೆ ನೀಡಿದರು. ಶಿಕ್ಷಣ ಸಂಯೋಜಕ ಮಲ್ಲೇಶ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ವಿವಿಧ ಸ್ಪರ್ಧೆಗಳ ಮಹತ್ವವನ್ನು ವಿವರಿಸಿದರು. ಧಾರ್ಮಿಕ ಪಠಣ ನೈತಿಕತೆಯನ್ನು ಬೆಳೆಸುತ್ತದೆ, ಜಾನಪದ ಗೀತೆ ಜನಜೀವನದ ಸರಳತೆಯನ್ನು ಪ್ರತಿಬಿಂಬಿಸುತ್ತದೆ, ನೃತ್ಯ ಮತ್ತು ಕಲೆಗಳು ನಮ್ಮ ಪುರಾತನ ಸಾಂಸ್ಕೃತಿಕ ಸಂಪತ್ತಾಗಿದೆ. ಚಿತ್ರಕಲೆ ರವಿವರ್ಮರನ್ನು ನೆನಪಿಸುವ ಕಲೆಯ ಮೆರವಣಿಗೆ. ಆಶುಭಾಷಣ ಸ್ಪರ್ಧೆ ವೇದಿಕೆ ಭಯವನ್ನು ನಿವಾರಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಪ್ರತಿಭೆಯನ್ನು ಹೊರತರುವ ಅವಕಾಶ ಬಳಸಿಕೊಳ್ಳಬೇಕು ಎಂದರು.ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ದೇವರಾಜ್ ಮಾತನಾಡಿ, ಪ್ರತಿಭೆಯನ್ನು ಉಳಿಸಿ ಬೆಳೆಸಲು ಶಿಕ್ಷಣ ಇಲಾಖೆ ಕೈಗೊಂಡಿರುವ ಉತ್ತಮ ಯೋಜನೆಗಳಲ್ಲಿ ಪ್ರತಿಭಾ ಕಾರಂಜಿ ಪ್ರಮುಖ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಿಆರ್‌ಪಿ ಪುಷ್ಪಲತಾ, ಇಸಿಒ ತ್ರಿಮೂರ್ತಿ, ಸಿಆರ್‌ಪಿ ವಿಷ್ಣುವರ್ಧನ್, ಮುಖ್ಯ ಶಿಕ್ಷಕ ಅರುಣ್ ಕುಮಾರ್ ಮತ್ತು ಶಿಕ್ಷಕರ ವೃಂದ ಉಪಸ್ಥಿತರಿದ್ದರು.ಅವಕಾಶವಂಚಿತ ಮಕ್ಕಳ ಪೋಷಕರ ಆಕ್ರೋಶ:ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮಕ್ಕಳು ತಮ್ಮ ಹಾಡು, ನೃತ್ಯ, ಚಿತ್ರಕಲೆ, ರಸಪ್ರಶ್ನೆ, ಭಾಷಣ ಸೇರಿದಂತೆ ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಲು ವೇದಿಕೆಯಾಗಿ ಪರಿಣಮಿಸಿದೆ. ಆದರೆ ನಗರದ ಸಂತ ಮೇರಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ಸಿಗದಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.ಬುಧವಾರ ವಿದ್ಯಾಶಂಕರ ಪ್ರೌಢಶಾಲೆಯಲ್ಲಿ ನಡೆದ ಎ–ವಲಯದ ಪ್ರೌಢಶಾಲಾ ಪ್ರತಿಭಾ ಕಾರಂಜಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆದರೆ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಸಂತ ಮೇರಿ ಪ್ರೌಢಶಾಲೆಯಿಂದ ಮಕ್ಕಳು ಭಾಗವಹಿಸದಿರುವುದು ಎಲ್ಲರ ಗಮನ ಸೆಳೆದಿತು. ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಕಳುಹಿಸದಿದ್ದರೆಂದು ಪೋಷಕರ ವಾಗ್ದಾಳಿ ಮುಂದುವರಿದಿದೆ.ವಿದ್ಯಾರ್ಥಿಗಳಿಗೆ ನೃತ್ಯ, ಭಾವಗೀತೆ, ಚಿತ್ರಕಲೆ, ಭಾಷಣ ಹಾಗೂ ಧಾರ್ಮಿಕ ಪಠಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಮರ್ಥ್ಯವಿದ್ದರೂ ಅವರಿಗೆ ಅವಕಾಶ ತಪ್ಪಿಸಿರುವುದು ಸಮುದಾಯದಲ್ಲಿ ಆಕ್ರೋಶ ಮೂಡಿಸಿದೆ. ನಮ್ಮ ಮಕ್ಕಳಿಗೆ ಏಕೆ ಅವಕಾಶ ಕೊಡಲಿಲ್ಲ? ಇದು ಶಾಲೆಯ ನಿರ್ಲಕ್ಷ್ಯವೇ? ಅಥವಾ ಶಿಕ್ಷಣ ಇಲಾಖೆಯೇ ಶಾಲೆಯನ್ನು ದೂರ ಇಟ್ಟಿದೆಯೇ? ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದು ಯಾಕೆ? ಎಂಬ ಪ್ರಶ್ನೆಗಳು ಪೋಷಕರಿಂದ ಕೇಳಿಬರುತ್ತಿವೆ.ನಮ್ಮ ಮಕ್ಕಳನ್ನು ವಂಚಿಸಲಾಗಿದೆ. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಪಷ್ಟೀಕರಣ ನೀಡಬೇಕು. ಮಕ್ಕಳಿಗೆ ನ್ಯಾಯ ವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))