ಸಾರಾಂಶ
ಮೈಸೂರಿನ ಕೃಷ್ಣಕುಮಾರ್ ಸ್ಕೂಟರ್‌ನಲ್ಲಿ ತಮ್ಮ ತಾಯಿಗೆ 98,800 ಕಿ.ಮೀ. ತೀರ್ಥಯಾತ್ರೆ ಮಾಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೆಜಿಎಫ್
ತ್ರೇತಾಯುಗದಲ್ಲಿ ಶ್ರವಣಕುಮಾರ ತನ್ನ ಅಂಧ ತಂದೆ-ತಾಯಿಯರನ್ನು ತಕ್ಕಡಿಯಲ್ಲಿ ಕೂರಿಸಿ, ಹೆಗಲ ಮೇಲೆ ಹೊತ್ತುಕೊಂಡು ತೀರ್ಥಯಾತ್ರೆಗೆ ಹೊರಟ ಕಥೆ ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಮೈಸೂರಿನ ಕೃಷ್ಣಕುಮಾರ್ ‘ಮಾತೃ ಸಂಕಲ್ಪ ಯಾತ್ರೆ’ ಕೈಗೊಂಡಿದ್ದು, ಸ್ಕೂಟರ್‌ನಲ್ಲಿ ತಮ್ಮ ತಾಯಿಗೆ 98,800 (ಸುಮಾರು 1 ಲಕ್ಷ ) ಕಿ.ಮೀ.ತೀರ್ಥಯಾತ್ರೆ ಮಾಡಿಸಿದ್ದಾರೆ. ತಾಯಂದಿರ ದಿನವಾದ ಭಾನುವಾರ ಅವರು ಕೆಜಿಎಫ್‌ಗೆ ಆಗಮಿಸಿದ್ದರು.
ದೇಶ ಪರ್ಯಟನೆ ಮಾಡಬೇಕೆಂಬ 75 ವರ್ಷದ ತಮ್ಮ ತಾಯಿ ಚೂಡಾರತ್ನಾ ಅವರ ಬಯಕೆಯನ್ನು ಈಡೇರಿಸಲು ಕೃಷ್ಣಕುಮಾರ್ ಅವರು 2018ರ ಜನವರಿ 16ರಂದು ತಮ್ಮ ತೀರ್ಥಯಾತ್ರೆಯನ್ನು ಪ್ರಾರಂಭಿಸಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಲವು ರಾಜ್ಯಗಳನ್ನು ಅವರು ಸ್ಕೂಟರ್‌ನಲ್ಲೇ ಸುತ್ತಿದ್ದಾರೆ. ತಮ್ಮ ತಾಯಿಗೆ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಒಡಿಶಾ, ಮಿಜೋರಾಂ, ಮೇಘಾಲಯ, ತ್ರಿಪುರಾ, ಅರುಣಾಚಲ ಪ್ರದೇಶ ರಾಜ್ಯಗಳ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ್ದಾರೆ.ವಿದೇಶಗಳಿಗೂ ಭೇಟಿ:
ಅಲ್ಲದೆ, ನೇಪಾಳ, ಭೂತಾನ್, ಮ್ಯಾನ್ಮಾರ್‌ಗಳಿಗೂ ಸ್ಕೂಟರ್‌ನಲ್ಲೇ ತೆರಳಿ, ತಮ್ಮ ತಾಯಿಗೆ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದ್ದಾರೆ. 2001ರಲ್ಲಿ ಕೃಷ್ಣಕುಮಾರ್ ಅವರಿಗೆ ಅವರ ತಂದೆ ದಕ್ಷಿಣಾಮೂರ್ತಿಯವರು ಈ ಸ್ಕೂಟರ್ ಕೊಡಿಸಿದ್ದರು. 2015ರಲ್ಲಿ ದಕ್ಷಿಣಾಮೂರ್ತಿ ನಿಧನರಾದರು. ತಮ್ಮ ತಂದೆ ಕೊಟ್ಟ ಸ್ಕೂಟರ್‌ನಲ್ಲೇ ಅವರು ತಾಯಿಗೆ ಯಾತ್ರೆ ಮಾಡಿಸುತ್ತಿದ್ದಾರೆ. ಸ್ಕೂಟರನ್ನು ತಮ್ಮ ತಂದೆಯ ಪ್ರತಿರೂಪ ಎಂದೇ ಭಾವಿಸಿ, ತಾಯಿಯನ್ನು ಸ್ಕೂಟರ್ ಮೇಲೆಯೇ ಕುಳ್ಳಿರಿಸಿಕೊಂಡು ದೇಶ ಪರ್ಯಟನೆ ಮಾಡುತ್ತಿರುವುದಾಗಿ ಅವರು ಹೇಳುತ್ತಾರೆ.+++ಮಾತೃಸಂಕಲ್ಪ ಯಾತ್ರೆ:
2018ರಲ್ಲಿ ಮಾತೃ ಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸಿದ 2-3 ವರ್ಷಗಳ ಬಳಿಕ ಕೊರೊನಾ ಬಂದ ಹಿನ್ನೆಲೆಯಲ್ಲಿ ಭೂತಾನ್‌ನಲ್ಲಿ ಒಂದೂವರೆ ತಿಂಗಳ ಕಾಲ ತಂಗಿದ್ದರು. ಲಾಕ್ ಡೌನ್ ಮುಗಿದ ಬಳಿಕ ಪಾಸ್ ಪಡೆದು ಮತ್ತೆ ಪ್ರಯಾಣ ಆರಂಭಿಸಿ, ಮೈಸೂರಿನ ತಮ್ಮ ಮನೆಗೆ ವಾಪಸ್ಸಾಗಿದ್ದರು.ಬಳಿಕ, 2022 ರಲ್ಲಿ ಮತ್ತೆ ಜಮ್ಮು-ಕಾಶ್ಮೀರ, ಉತ್ತರಾಖಂಡ ಸೇರಿದಂತೆ ಈಶಾನ್ಯ ಭಾರತದ ಎಲ್ಲ ತೀರ್ಥಕ್ಷೇತ್ರಗಳ ದರ್ಶನ ಪಡೆದು ಒಂದು ಲಕ್ಷ ಕಿಲೋ ಮೀಟರ್ ಸನಿಹ ಬಂದು ತಲುಪಿದ್ದಾರೆ. ತಾಯಂದಿರ ದಿನವಾದ ಭಾನುವಾರ ಕೆಜಿಎಫ್‌ಗೆ ಬಂದಿದ್ದರು. ಅಲ್ಲಿಂದ ಮೈಸೂರಿಗೆ ತೆರಳಿದ್ದಾರೆ. ಹಲವೆಡೆ ಅವರಿಗೆ ಸನ್ಮಾನಗಳನ್ನು ಮಾಡಲಾಗಿದೆ.
೧೧ಕೆಜಿಎಫ್೧: ಕೆಜಿಎಫ್‌ನಲ್ಲಿ ತಾಯಿಯೊಂದಿಗೆ ಕೃಷ್ಣಕುಮಾರ್.