ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸರ್ಕಾರಿ ಬಸ್‌ಗಳ ಮೂಲಕ ನಾಗರೀಕರು ಪ್ರಯಾಣಿಸುವ ಮೂಲಕ ಸರ್ಕಾರಿ ಬಸ್‌ಗಳು ಗ್ರಾಮೀಣ ಪ್ರದೇಶಕ್ಕೆ ಸುಲಲಿತವಾಗಿ ಓಡಾಡಲು ಸಹಕರಿಸಬೇಕು ಎಂದು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ಹೋಬಳಿಯ ಬೋಳಮಾರನಹಳ್ಳಿಗೆ ಚನ್ನರಾಯಪಟ್ಟಣ ತಾಲೂಕು ಕೇಂದ್ರದಿಂದ ನಿತ್ಯ ಬಸ್ ಓಡಾಡಲು ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಚನ್ನರಾಯಪಟ್ಟಣದಿಂದ ಬೆಳಗ್ಗೆ 7.30ಕ್ಕೆ ಹೊರಟು ಕೆ.ಆರ್.ಪೇಟೆ ತಾಲೂಕು ಅನೆಗೊಳ, ಗೌಡೇನಹಳ್ಳಿ, ಅಂಚೆಬೀರನಹಳ್ಳಿ, ಬೋಳಮಾರನಹಳ್ಳಿ ಕೊಪ್ಪಲು ಮಾರ್ಗವಾಗಿ ಬೋಳಮಾರನಹಳ್ಳಿ ಗ್ರಾಮಕ್ಕೆ ನಿತ್ಯ ಬಸ್ ಸಂಚರಿಸಲಿದೆ ಎಂದರು.
ಗ್ರಾಮಸ್ಥರ ಬಲುದಿನದ ಬೇಡಿಕೆ ಹಿನ್ನೆಲೆಯಲ್ಲಿ ಬಸ್ ಸೇವೆ ಕಲ್ಪಿಸಲಾಗಿದೆ. ಗ್ರಾಮಸ್ಥರು ಸದ್ಭಳಕೆ ಮಾಡಿಕೊಳ್ಳಬೇಕು. ಬಸ್ ಪ್ರಯಾಣ ಸೌಲಭ್ಯ ತಮ್ಮ ಗ್ರಾಮಕ್ಕೆ ಉಳಿಯಲು ಸರ್ಕಾರಿ ಬಸ್‌ನಲ್ಲಿಯೇ ಓಡಾಡಬೇಕು ಎಂದು ತಿಳಿಸಿದರು.ಶಾಲಾ ಕಾಲೇಜು ವಿದ್ಯಾರ್ಥಿಗಳು ನಿತ್ಯ ನಿಗದಿತ ವೇಳೆಗೆ ತರಗತಿಗಳಿಗೆ ಹಾಜರಾಗದೆ ಪರಿತಪಿಸುತ್ತಿದ್ದರು. ವಯೋವೃದ್ಧರು, ಅನಾರೋಗ್ಯ ಪೀಡಿತರಿಗೆ ಸಮಸ್ಯೆ ಕಾಡುತ್ತಿತ್ತು. ಎಲ್ಲವನ್ನು ತಿಳಿದು ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣ ಸದ್ಯಕ್ಕೆ ಬೆಳಗ್ಗೆ ವೇಳೆ ಬಸ್ ಓಡಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಸರ್ಕಾರಿ ಬಸ್ ಸೇವೆ ಉಳಿಯಬೇಕು ಎಂದರೆ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರು ಪ್ರಯಾಣಿಸಬೇಕಿದೆ. ವರಮಾನವಿಲ್ಲದೆ ಬಸ್‌ಗಳ ಓಡಾಟ, ನಿರ್ವಹಣೆ ಆದಾಯವಿಲ್ಲದೆ ನಷ್ಟವಾಗಲಿದೆ ಎಂಬುದನ್ನು ಅರಿತು ಬಸ್ ಸೇವಾ ಸೌಲಭ್ಯ ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.ಕೆ.ಆರ್. ಪೇಟೆ ಶಾಸಕ ಎಚ್.ಟಿ.ಮಂಜು ಮಾತನಾಡಿ, ಗ್ರಾಮೀಣ ಪ್ರದೇಶದ ಎಲ್ಲೆಡೆಯ ಶಾಲಾ ಕಾಲೇಜು, ನಾಗರೀಕರಿಗೆ ಅನುಕೂಲವಾಗಲು ಅಗತ್ಯವಾದ ಸ್ಥಳಗಳಿಗೆ ಬಸ್ ಸೌಲಭ್ಯಕ್ಕೆ ಗಮನಹರಿಸಲಾಗುವುದು. ಸಾರಿಗೆ ಇಲಾಖೆ ನಷ್ಟವಾಗದಂತೆ ನೋಡಿಕೊಳ್ಳುವುದು ನಾಗರೀಕರ ಕರ್ತವ್ಯ ಎಂದು ಮನವಿ ಮಾಡಿದರು.
ಈ ವೇಳೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಅನೆಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ.ಕಿರಣ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಬಿ.ಎಸ್. ಮಂಜುನಾಥ್, ಪುಟ್ಟಸ್ವಾಮಿ, ಚನ್ನರಾಯಪಟ್ಟಣ ಬಸ್ ಡಿಪೋ ಮ್ಯಾನೇಜರ್ ನೂತನ್, ಚಾಲಕ ಮಂಜುನಾಥ್, ಗ್ರಾಮ ಮುಖಂಡರು ಇದ್ದರು.