ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಈ ಭಾಗದ ಪ್ರಸಿದ್ಧ ಶಕ್ತಿದೇವತೆಗಳ ಸುಕ್ಷೇತ್ರಗಳಲ್ಲಿ ಒಂದಾದ ಅಂಕಲಗಿ ಗ್ರಾಮದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಮಂಗಳವಾರ ಪಲ್ಲಕ್ಕಿ ಮಹೋತ್ಸವ ನಡೆಯುವ ಮೂಲಕ ಸಂಪನ್ನಗೊಂಡಿತು.ಜಾತ್ರಾ ಮಹೋತ್ಸವ ಸೋಮವಾರ ದಿನ ಮುಂಜಾನೆ ವೈದಿಕ ವಿದ್ವಾನ್ ಆನಂದ ಪುರೋಹಿತ ಮತ್ತವರ ತಂಡದಿಂದ ಶ್ರೀದೇವಿಗೆ ಮಹಾಫಲ ಸಮರ್ಪಣೆ, ಗಣಪತಿ ಪೂಜೆ, ಪುಣ್ಯ ಹವಾಚನ ಮಹಾಸಂಕಲ್ಪ, ದೇವತಾ ಸ್ಥಾಪನೆ, ಗಣಪತಿ ಹೋಮ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ, ಮಂಗಳವಾರ ಶ್ರೀದೇವಿಗೆ ನಾನಾ ದ್ರವ್ಯಗಳಿಂದ ಮಹಾಭಿಷೇಕ, ಸ್ಥಾಪಿತ ದೇವತಾ ಪೂಜೆ, ಶ್ರೀ ಸೂಕ್ತ ಹವನ ಮಹಾಪೂರ್ಣಾಹುತಿ, ಮಹಾಮಂಗಳಾರತಿ ಮುಂತಾದ ಧಾರ್ಮಿಕ ಪೂಜಾ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಸಂಭ್ರಮದ ಮೆರವಣಿಗೆ: ಗ್ರಾಮದ ಪ್ರಮುಖ ಬೀದಿಗಳಲ್ಲಿ ಐದಾರು ಗಂಟೆಗಳ ಕಾಲ ಜರುಗಿದ ಶ್ರೀ ಲಕ್ಷ್ಮೀದೇವಿಯ ಪಲ್ಲಕ್ಕಿ ಉತ್ಸವದಲ್ಲಿ ಭಕ್ತರು ಬಂಡಾರದಲ್ಲಿ ಮಿಂದೆದ್ದು ಭಕ್ತಿ ಪರಾಕಾಷ್ಠೆ ಮೆರೆದರು.ವಯಸ್ಸು, ಲಿಂಗ, ಮತ ಭೇದವಿಲ್ಲದೆ ಸ್ಥಳೀಯರನ್ನೊಳಗೊಂಡಂತೆ ಸುತ್ತಲಿನ, ದೂರ ದೂರದ ಊರುಗಳಿಂದ ಆಗಮಿಸಿದ್ದ ನೂರಾರು ಭಕ್ತರು ಭಂಡಾರ ಹಚ್ಚುತ್ತಾ, ವಾದ್ಯಗಳು ಹಾಗೂ ಹಾಡುಗಳಿಗೆ ಹೆಜ್ಜೆಹಾಕುತ್ತಾ, ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಡೊಳ್ಳಿನ ಮೇಳದವರು, ಊರಿನ ಯುವಕರ ಪಡೆ ಹಾಗೂ ಕಲಾದಗಿಯಿಂದ ಗೊಂಧಳಿ ಸಮಾಜದವರು ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಭಂಡಾರ ಎರಚುತ್ತ ಪಲ್ಲಕ್ಕಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಅನ್ನ ಪ್ರಸಾದವಾಗಿ ಶೇಂಗಾ ಚಟ್ನಿ, ಉಪ್ಪಿನಕಾಯಿ, ಕೋಸಂಬರಿ, ಉದರ ಮಾದಲಿ, ಬುಂದೆ, ಚಪಾತಿ, ರೊಟ್ಟಿ, ಬದ್ನಿಕಾಯಿ ಪಲ್ಲೆ, ಅನ್ನಸಾರು, ಅನ್ನಸಂತರ್ಪಣೆ ನಡೆಯಿತು.
ಎತ್ತ ನೋಡಿದರತ್ತ ಭಂಡಾರಮಯ: ಗ್ರಾಮದ ತುಂಬೆಲ್ಲ ಎಲ್ಲಿ ನೋಡಿದರಲ್ಲಿ ಭಂಡಾರವೇ ಭಂಡಾರ. ಭಕ್ತರು ಭಂಡಾರದ ಓಕುಳಿಯನ್ನೇ ಆಡಿದ್ದರು, ರಸ್ತೆಯ ತುಂಬ, ದಾರಿ ಪಕ್ಕದಲ್ಲಿ ಇರುವ ಮನೆಯ ಕಟ್ಟೆಯ ಮೇಲೆ, ಇಡೀ ಗ್ರಾಮವೇ ಭಂಡಾರದಿಂದ ಮೆತ್ತಿಕೊಂಡಂತೆ ಕಂಡು ಬಂತು. ಶ್ರೀ ಲಕ್ಷ್ಮೀದೇವಿಯ ಪಲ್ಲಕ್ಕಿ ಮೆರವಣಿಯಲ್ಲಿ ೧೦,೦೦೦ ಕೆಜಿಗೂ(೧೦ ಟನ್) ಅಧಿಕ ಬಂಡಾರ ಬಳಸಲಾಗಿದೆ ಎಂದು ಅಂದಾಜಿಸಲಾಗಿದೆ.;Resize=(128,128))
;Resize=(128,128))
;Resize=(128,128))
;Resize=(128,128))