ಕನ್ನಡಪ್ರಭ ವಾರ್ತೆ ಹಲಗೂರು

ಇಲ್ಲಿನ ನಡುಕೇರಿ ಶ್ರೀ ವೀರಭದ್ರಸ್ವಾಮಿ 15ನೇ ವಾರ್ಷಿಕೋತ್ಸವ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವವನ್ನು ಅಪಾರ ಭಕ್ತಾದಿಗಳೊಡನೆ ವಿಜೃಂಭಣೆಯಿಂದ ಎರಡು ದಿನಗಳ ಕಾಲ ಆಚರಿಸಲಾಯಿತು. ಗುರುವಾರ ಸಂಜೆ ದೇವಸ್ಥಾನದ ಆವರಣದಲ್ಲಿ ವಿವಿಧ ಪೂಜೆಗಳೊಂದಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.

ಶುಕ್ರವಾರ ಬೆಳಗಿನ ಜಾವ ವೀರಭದ್ರೇಶ್ವರ ದೇವರ ಮೂರ್ತಿಯನ್ನು ಶುಚಿಗೊಳಿಸಿ ಹಾಲಿನ ಅಭಿಷೇಕ, ರುದ್ರಾಭಿಷೇಕ ,ಪಂಚಾಮೃತ ಅಭಿಷೇಕಗಳನ್ನು ನಡೆಸಿ, ವಿವಿಧ ರೀತಿಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಬೃಹನ್ಮಠದಲ್ಲಿ ಮುತ್ತೈದೆಯರು ತಂದಿದ್ದ ಕಳಸಗಳಿಗೆ ಸ್ವಾಮೀಜಿಗಳವರ ಸಮ್ಮುಖದಲ್ಲಿ ಪೂಜೆ, ಪುನಸ್ಕಾರ ನಡೆಸಿದ ಮೇಲೆ ಕಲಶವನ್ನು ಹೊತ್ತು ಮುತ್ತೈದೆಯರು ಹೊರಟಾಗ ಜೊತೆಯಲ್ಲಿ ಬಸಪ್ಪ ದೇವರು ಹಾಗೂ ವೀರಗಾಸೆ ಕುಣಿತದೊಡನೆ ವೀರಭದ್ರ ದೇವರ ಮೂರ್ತಿಯನ್ನು ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ದೇವಸ್ಥಾನದ ಆವರಣಕ್ಕೆ ಬಂದು ಕಳಸದಲ್ಲಿದ್ದ ಗಂಗೆಯನ್ನು ವೀರಭದ್ರ ದೇವಸ್ಥಾನದ ಕಳಶಕ್ಕೆ ಅಭಿಷೇಕ ನಡೆಸಲಾಯಿತು. ನಂತರ ವೀರಭದ್ರ ಸ್ವಾಮಿಗೆ ಗುರುವಿನ ಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಧನಗೂರು ಮಠದ ಶ್ರೀ ಮುಮ್ಮಡಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಶ್ರೀ ವೀರಭದ್ರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಶ್ರೀ ವಿದ್ವಾನ್ ಪ್ರಸಾದ್ ಸಹಯೋಗದೊಂದಿಗೆ ಮಂತ್ರಘೋಷಗಳನ್ನು ಹೇಳುತ್ತಾ ವಿಶೇಷವಾಗಿ ಪೂಜೆ ನೆರವೇರಿಸಿ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.

ಇದೇ ಸಂದರ್ಭದಲ್ಲಿ ಗುರುವಿನ ಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಧನಗೂರು ಮಠದ ಶ್ರೀ ಮುಮ್ಮಡಿ ದೇಶಿ ಕೇಂದ್ರ ಸ್ವಾಮೀಜಿ ಮತ್ತು ಪುರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ


ವೀರಶೈವ ಸಮಾಜದ ಎಚ್. ಎಮ್. ಪಾಲಾಕ್ಷಪ್ಪ, ಎಂ. ಎನ್. ಮಹಾದೇವಸ್ವಾಮಿ (ರವಿ) ಇವರಿಗೆ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ವಿದ್ವಾನ್ ಪ್ರಸಾದ್ ರವರು ವೀರಭದ್ರ ಸ್ವಾಮಿಯ ಭಾವಚಿತ್ರವನ್ನು ಮತ್ತು ಫಲತಾಂಬೂಲ ನೀಡಿ ಸನ್ಮಾನಿಸಿ ಅಭಿನಂದಿಸಿದರು .

ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಮುಖಂಡರು, ಯುವ ಮುಖಂಡರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.