ಸಾರಾಂಶ
- ಹಿರಿಯ ವಿದ್ವಾಂಸ ಪ್ರೊ.ಸಿ. ನಾಗಣ್ಣ ಬಣ್ಣನೆ
- ಪುಟಾಣಿ ಶ್ರೀಯಾ ರಚನೆಯ ಕೃತಿ ಬಿಡುಗಡೆ ಸಮಾರಂಭ------ಕನ್ನಡಪ್ರಭ ವಾರ್ತೆ ಮೈಸೂರು
ಕಣ್ಣಳತೆಗೆ ಸಿಕ್ಕ ದೃಶ್ಯಗಳನ್ನು ಕಾವ್ಯಾತ್ಮಕ ಗದ್ಯದಲ್ಲಿ ಪಡಿಮೂಡಿಸುವ ಕೌಶಲ್ಯ ಶ್ರೀಯಾಗೆ ಅನಾಯಾಸವಾಗಿ ಒಲಿದು ಬಂದಿದೆ ಎಂದು ಹಿರಿಯ ವಿದ್ವಾಂಸ ಪ್ರೊ.ಸಿ. ನಾಗಣ್ಣ ಬಣ್ಣಿಸಿದರು.ಮೈಸೂರು ಮೂಲದ, ಪ್ರಸ್ತುತ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನೆಲೆಸಿರುವ ಪುಟಾಣಿ ಶ್ರೀಯಾ ಅವರ ಇನ್ಸ್ಪೈರಿಂಗ್ ಎಸ್ಸೇಸ್ ಅಂಡ್ ಪೋಯಮ್ಸ್ ಆಫ್ ಎ ಪ್ರೀ- ಟೀನ್ ಗರ್ಲ್ ಕೃತಿಯನ್ನು ಸೋಮವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಶ್ರೀಯಾಗೆ ಈಗ 13 ವರ್ಷ. ಆಕೆ 10 ವರ್ಷ ಇದ್ದಾಗಲೇ ಈ ರೀತಿಯ ಕವಿತೆ ಹಾಗೂ ಪ್ರಬಂಧಗಳನ್ನು ರಚಿಸಿರುವುದು ಆಶ್ಚರ್ಯ ಮೂಡಿಸುತ್ತದೆ. ಪದಕ್ಕೆ ಪದ ಹದವಾಗಿ ಕೂಡಿ ಬರುವುದರಿಂದ ಆಕೆಯ ವರ್ಣನೆ ಓದುಗರ ಮನಸ್ಸಿಗೆ ಮುದ ನೀಡುತ್ತದೆ. ಭಾವ ಬಂಧುರತೆಗೆ ಕಿಂಚಿತ್ತು ಕೊರತೆಯಿಲ್ಲದದ ಕಾರಣ ಇಲ್ಲಿಯ ಗದ್ಯ ಹೃದ್ಯವಾಗಿದೆ ಎಂದರು.
ವಾಸ್ತವ ಘಟನೆಗಳಿಗೆ ಕಲ್ಪನೆಯ ಬಣ್ಣ ತೊಡಿಸುವುದೆಂದರೆ ಶ್ರೀಯಾಳಿಗೆ ಎಲ್ಲಿಲ್ಲದ ಸಂಭ್ರಮ. ಹಾಗೆಯೇ ಸಾಮಾನ್ಯ ಅನುಭವಗಳನ್ನು ಸಾಮಾನ್ಯ ಸ್ವರದಲ್ಲೇ ನಡೆಸದೆ ಉಸಿರು ಕಟ್ಟಿಸುವ ವಾತಾವರಣಕ್ಕೆ ಅಲ್ಲಿಯ ಜೀವಿಗಳನ್ನು ದೂಡಿ ಪ್ರಕೃತಿ ವಿಕೋಪ, ಬೆಂಕಿಯ ಅವಘಡ, ವಾಹನ ಅಪಘಾತ ಮುಂತಾದ ಸನ್ನಿವೇಶಗಳಲ್ಲಿ ಜೀವಿಗಳು ಬಗೆಬಗೆಯಾಗಿ ಪ್ರತಿಕ್ರಿಯಿಸುವ ಪ್ರಕ್ರಿಯೆಯನ್ನು ಶ್ರೀಯಾ ತನ್ನದೇ ಆದ ವಿಶೇಷ ಗದ್ಯದಿಂದ ಬಿಡಿಸುವ ಕ್ರಮ ಚೋದ್ಯವನ್ನುಂಟು ಮಾಡುತ್ದದೆ ಎಂದರು.ಈ ಸಂಕಲನದಲ್ಲಿರುವ ದ ಎಸ್ಕೇಪ್, ಕಮಿಂಗ್ ಅಲೈವ್, ಕಾರ್ ಕ್ರ್ಯಾಶ್, ಇನ್ ದ ಮಿಡ್ಲ್ ಆಫ್ದ ನೈಟ್, ಎ ಶಾಕ್, ಇನ್ -ಟು ದ ಅಬಿಸ್, ಅಬ್ಯಾಂಡನ್ಡ್ ಪಾರ್ಕ್ -ಪ್ರಬಂಧ, ಕಥೆಗಳು ಇದಕ್ಕೆ ಸಾಕ್ಷಿಯಾಗಿವೆ ಎಂದು ಅವರು ಹೇಳಿದರು.
ಮೆಲ್ಬೋರ್ನ್ ನಿಂದ ಅಡಿಲೇಯ್ಡ್ ಗೆ ಹೊರಟು ಏಳು ದಿನಗಳ ರೋಡ್ ಟ್ರಿಪ್ ನಂತರ ತಾಯಿ ಮತ್ತು ಅಜ್ಜಿಯೊಡನೆ ಶ್ರೀಯಾ ಮಾಡಿದ ಪ್ರವಾಸದ ಅನುಭವವನ್ನು ಓದುವುದೇ ಸೊಗಸು. ಇಷ್ಟು ಚಿಕ್ಕವಯಸ್ಸಿಗೆ ಆ ವರ್ಣನಾ ಕೌಶಲ್ಯ ಹೇಗೆ ಸಾಧ್ಯವೆಂದು ಬೆರಗಾಗುತ್ತದೆ ಎಂದರು.ಈ ಸಂಕಲನದಲ್ಲಿ ಹದಿನಾಲ್ಕು ಗದ್ಯ ಬರಹಗಳು, ಏಳು ಕವನಗಳಿವೆ. ಶ್ರೀಯಾಳ ಲೇಖನಿ ಗದ್ಯಕ್ಕೂ ಸೈ, ಕಾವ್ಯಕ್ಕೂ ಸೈ. ಸೃಜನಾತ್ಮಕ ಬರವಣಿಗೆಯ ಕೋ ರ್ಸ್ ನಲ್ಲಿ ಪದವಿ ಮಾಡಿದರೆ ಈಕೆಯ ಉತ್ತಮ ಬರಹಗಾರ್ತಿಯಾಗಬಲ್ಲಳು ಎಂದು ಅವರು ಎಂದರು.
ಟೆಂಪಲ್- ದೇವಸ್ಥಾನ, ಇಮ್ಯಾಜಿನೇಷನ್- ಕಲ್ಪನೆ, ಮೈ ಮಮ್- ನನ್ನ ತಾಯಿ ಕವಿತೆಗಳನ್ನು ಪ್ರೊ.ನಾಗಣ್ಣ ಕನ್ನಡಕ್ಕೆ ಅನುವಾದಿಸಿದ್ದು, ಕಾರ್ಯಕ್ರಮದಲ್ಲಿ ಓದಿದರು. ಶ್ರೀಯಾ ಇಂಗ್ಲಿಷ್ ಕವಿತೆಗಳನ್ನು ಓದಿದರು.ಖ್ಯಾತ ಮಧುಮೇಹ ತಜ್ಞ ಡಾ.ವಿ. ಲಕ್ಷ್ಮೀನಾರಾಯಣ, ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕೃತಿಯ ಪ್ರಕಾಶಕ ಚಿಂತನ ಚಿತ್ತಾರದ ನಿಂಗರಾಜು ಚಿತ್ತಣ್ಣನವರ್, ಕಾವ್ಯಾ ಬಿ. ಶ್ರೀಧರ್, ದ್ವಾರಕಿ ಶ್ರೀಧರ್ ಮೊದಲಾದವರು ಇದ್ದರು. ಸಾಹಿತಿ ಬಾ.ವೇ. ಶ್ರೀಧರ ಸ್ವಾಗತಿಸಿದರು. ದಿವ್ಯಾ ಬಿ. ಶ್ರೀಧರ್ ಪ್ರಾರ್ಥಿಸಿದರು.