ಸಾರಾಂಶ
ತುಮಕೂರು: ನಗರದ ವಿವಿಧೆಡೆ ಆನಾಥವಾಗಿ ಬಸ್ ಶೆಲ್ಟರ್, ದೇವಾಲಯ, ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದ ಸುಮಾರು 15ಕ್ಕೂ ಹೆಚ್ಚು ಅನಾಥರಿಗೆ ಆಶ್ರಯ ಒದಗಿಸುವ ಮೂಲಕ ಶ್ರೇಯಸ್ ನಿರಾಶ್ರಿತರ ಅನಾಥಾಶ್ರಮವನ್ನು ತುಮಕೂರು ಕುಣಿಗಲ್ ರಸ್ತೆಯ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ಉದ್ಘಾಟಿಸಲಾಯಿತು.
ಊರೂರು ತಿರುಗಿ ಹೆಂಗಸರು, ಮಕ್ಕಳಿಗೆ ಬೇಕಾದ ಬಟ್ಟೆಗಳನ್ನು ಮಾರಾಟ ಮಾಡುವ ಕೃಷ್ಣಪ್ಪ ಎಂಬ ವ್ಯಕ್ತಿ ವಯಸ್ಸಿಗೆ ಬಂದ ಮಗ ಆಕಸ್ಮಿಕವಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಮನನೊಂದು ತಮ್ಮ ಮುಂದಿನ ಜೀವನವನ್ನು ಅನಾಥರು, ನಿರ್ಗತಿಕರ ಸೇವೆಯಲ್ಲಿ ಕಳೆಯುವ ಉದ್ದೇಶದಿಂದ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ಶ್ರೇಯಸ್ ಆನಾಥಾಶ್ರಮವನ್ನು ತೆರೆದಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿರುವ ಕೃಷ್ಣಪ್ಪ ಅವರ ಮಗಳು ಅನಿತಾ ಸಹ ತಂದೆಯ ಕೆಲಸಕ್ಕೆ ಕೈಜೋಡಿಸಿದ್ದು, ತಂದೆಯ ಸೇವೆಗೆ ಸಹಕಾರ ನೀಡುವ ಮೂಲಕ ಬೆಂಬಲವಾಗಿ ನಿಂತಿದ್ದಾರೆ.ಶ್ರೇಯಸ್ ಅನಾಥಾಶ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ತನ್ನಂತೆ ಇತರರು ನರಳುವುದನ್ನು ನೋಡಲಾಗದೆ ಕೃಷ್ಣಪ್ಪ ನಿರ್ಗತಿಕರಿಗಾಗಿ ಅನಾಥಾಶ್ರಮ ತೆರೆದಿದ್ದಾರೆ. ತನ್ನ ದುಡಿಮೆಯ ಎಲ್ಲಾ ಅದಾಯವನ್ನು ಅನಾಥರ ಸೇವೆಗೆ ಮೀಸಲಿರಿಸಿದ್ದಾರೆ ಎಂದರು.
ಹೆತ್ತು, ಹೊತ್ತು ಸಾಕಿ, ಸಲುಹಿದ ತಂದೆ ತಾಯಿಗಳಿಗೆ ಒಂದು ತುತ್ತು ಅನ್ನ ಹಾಕುವುದು ಕಷ್ಟವಾಗಿರುವ ಕಾಲದಲ್ಲಿ, ಅಶಕ್ತರನ್ನು ಪೋಷಿಸುವ ಕೆಲಸಕ್ಕೆ ಕೈ ಹಾಕಿರುವ ಕೃಷ್ಣಪ್ಪ ಅವರ ಕೆಲಸ ಶ್ಲಾಘನೀಯ. ಈ ಹಿಂದೆಯೂ ಕೃಷ್ಣಪ್ಪ, ರಸ್ತೆ ಬದಿಯಲ್ಲಿ ಯಾರಾದರೂ ನರಳುತ್ತಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸುವುದು. ಬೆಡ್‌ಶಿಟ್ ನೀಡುವುದು, ಹಸಿದವರಿಗೆ ಅನ್ನ, ನೀರು ನೀಡುವ ಕೆಲಸವನ್ನು ಮಾಡುತ್ತಿದ್ದು, ಗೆಳೆಯರ ಸಲಹೆಯಂತೆ ಅಧಿಕೃತವಾಗಿ ಅನಾಥಾಶ್ರಮ ತೆರೆದಿದ್ದಾರೆ. ಅವರ ಆಶಯ ಈಡೇರಲಿ. ನೂರಾರು ಜನರು ಅಶ್ರಯ ಪಡೆಯುವಂತಾಗಲಿದೆ ಎಂದು ಆಶಿಸಿದರು.ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಉಪಾಧ್ಯಕ್ಷ ಇಂದ್ರಕುಮಾರ್.ಡಿ.ಕೆ, ರೈತಮುಖಂಡರಾದ ರಂಗಸ್ವಾಮಯ್ಯ, ಕನ್ನಡ ಸೇನೆ ರಾಜ್ಯ ಕಾರ್ಯದರ್ಶಿ ರಾಜಣ್ಣ, ಶ್ರೇಯಸ್ ನಿರಾಶ್ರಿತರ ಅನಾಥಾಶ್ರಮದ ನಿರ್ದೇಶಕರಾದ ಅನಿತಾ ಶ್ರೇಯಸ್, ಅರುಣ್, ಕುಮಾರ್, ಪವಿತ್ರ ಶ್ರೇಯಸ್, ಗ್ರಾಮದ ಮುಖಂಡರಾದ ರಂಗಯ್ಯ, ತಿಮ್ಮೇಗೌಡ, ರಾಜೇಶ್, ಕುಮಾರ್, ನಿಂಗಣ್ಣ ಸೇರಿದಂತೆ ಹಲವರು ಇದ್ದರು.
22 ವರ್ಷ ವಯಸ್ಸಿನ ನನ್ನ ಮಗ ಅಕಾಲಿಕ ಮರಣಕ್ಕೀಡಾದ ಹಿನ್ನೆಲೆಯಲ್ಲಿ ಮನನೊಂದು ನಾನು ಸಹ ಹುಚ್ಚನಂತೆ ಅಲೆದು, ಆತ್ಮಹತ್ಯೆ ಯೋಚನೆ ಮಾಡಿದಾಗ, ಕೆಲ ಹಿರಿಯರು ಮಾರ್ಗದರ್ಶನ ಮಾಡಿ ಬದುಕು ಮುಂದುವರೆಸುವಂತೆ ಸಲಹೆ ನೀಡಿದ್ದರಿಂದ ಮಗನ ನೆನಪಿನಲ್ಲಿ ಅನಾಥರಿಗೆ ನೆರವಾಗಲು ಅನಾಥಾಶ್ರಮ ತೆರೆದಿದ್ದೇನೆ.ಕೃಷ್ಣಪ್ಪ, ಶ್ರೇಯಸ್ ಅನಾಥಾಶ್ರಮದ ವ್ಯವಸ್ಥಾಪಕ.